ಬಿಎಂಡಬ್ಲ್ಯುನಿಂದ ಮಗದೊಂದು ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್
ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ಸ್ ಜೊತೆಗೂಡಿ ಜಿ310ಆರ್ ಕ್ರೀಡಾ ಬೈಕ್ ಕೊಡುಗೆಯಾಗಿ ನೀಡಿರುವ ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೋಟಾರಾಡ್ ಸಂಸ್ಥೆಯೀಗ ಮಗದೊಂದು ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
ಬಿಎಂಡಬ್ಲ್ಯು ನಿರ್ಮಿಸುತ್ತಿರುವ ನೂತನ ಎಫ್310 ಜಿಎಸ್ ಅಡ್ವೆಂಚರ್ ಬೈಕ್ ಯುರೋಪ್ ಖಂಡದಲ್ಲಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿವೆ. ಇದು 2016 ಮಿಲಾನ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈಯುವ ನಿರೀಕ್ಷೆಯಿದೆ.

ನೂತನ ಬಿಎಂಡಬ್ಲ್ಯು ಎಫ್310 ಜಿಎಸ್ ಸಾಹಸ ಬೈಕ್ ನ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಎಕ್ಸ್ ಕ್ಲೂಸಿವ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿವೆ.

ನೂತನ ಜಿ310 ಜಿಎಸ್ ಬೈಕ್ ಬಹುತೇಕ ಬಿಡಿಭಾಗಗಳನ್ನು ಜಿ310ಆರ್ ಜೊತೆ ಹಂಚಿಕೊಳ್ಳಲಿದೆ. ಇದು ಬಿಎಂಡಬ್ಲ್ಯುಮತ್ತು ಟಿವಿಎಸ್ ಅಭಿವೃದ್ಧಿಪಡಿಸುತ್ತಿರುವ ಮೂರನೇ ಮಾಡೆಲ್ ಆಗಿದೆ.

ಬಿಎಂಡಬ್ಲ್ಯು 310ಆರ್ ಜೊತೆ ತಳಹದಿ ಹಂಚಿಕೊಂಡಿರುವ ಟಿವಿಎಸ್ ಸಹ ಅಕುಲಾ 310 ನಿರ್ಮಿಸಿದೆ. ಭಾರತದಲ್ಲಿ ಇದು ಅಪಾಚಿ ಎಂಬ ಹೆಸರಿನಿಂದ ಹೆಸರಿನಿಂದ ಗುರುತಿಸಿಕೊಳ್ಳಲಿದ್ದು, ದೇಶದಲ್ಲಿರುವ ಸಂಸ್ಥೆಯ ಘಟಕದಲ್ಲೇ ನಿರ್ಮಾಣವಾಗಲಿದೆ.

ಇನ್ನೊಂದೆಡೆ ನೂತನ ಬಿಎಂಡಬ್ಲ್ಯು ಎಫ್ 310 ಜಿಎಸ್ ಅಡ್ವೆಂಚರ್ ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ನೀಡುವ ಸಾಧ್ಯತೆಯಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಸಾಹಸ ಬೈಕ್ ಗೆ ಅನುಗುಣವಾಗಿ ಮುಂಭಾಗದಲ್ಲಿ ಲಾಂಗ್ ಟ್ರಾವೆಲ್ ಯುಎಸ್ ಡಿ ಫಾರ್ಕ್
, ಮೊನೊಶಾಕ್ ಸಸ್ಷೆನ್ಷನ್ ಮತ್ತು ಆಫ್ ರೋಡ್ ಗೆ ಸೂಕ್ತವಾಗುವ ರೀತಿಯಲ್ಲಿ 17 ಇಂಚುಗಳ ಚಕ್ರಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಬಿಎಂಡಬ್ಲ್ಯು ಸಾಹಸಿ ಬೈಕ್ ಕೆಟಿಎಂ 390 ಅಡ್ವೆಂಚರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ. 2016 ಮಿಲಾನ್ ಮೋಟಾರು ಶೋದಲ್ಲಿ ಈ ಸಂಬಂಧ ನಿಖರ ಮಾಹಿತಿಗಳು ಹೊರ ಬರಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಈ ನಿಟ್ಟಿನಲ್ಲಿ ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.


Click it and Unblock the Notifications








