ಮೊದಲ ಬಾರಿಗೆ ಹೊರರಾಜ್ಯಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಿದ ಬೆಂಗಳೂರಿನ ಅಥೆರ್
ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಇದೇ ಮೊದಲ ಬಾರಿಗೆ ನೆರೆರಾಜ್ಯ ತಮಿಳುನಾಡಿನಲ್ಲೂ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಅಧಿಕೃತವಾಗಿ ಆರಂಭಿಸಿದ್ದು, ಅಥೆರ್ ನಿರ್ಮಾಣದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗೆ ಭಾರೀ ಬೇಡಿಕೆ ಹರಿದುಬಂದಿದೆ.

ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಹೊರ ರಾಜ್ಯಗಳಿಗೂ ವಿಸ್ತರಣೆ ಮಾಡಿದ್ದು, ಚೆನ್ನೈನಲ್ಲೂ ಇದೀಗ ಅತಿ ದೊಡ್ಡ ಮಾರಾಟ ಮಳಿಗೆ ತೆರೆಯುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿರುವ ಅಥೆರ್ ಎನರ್ಜಿ ಸಂಸ್ಥೆಯು ಹೊರ ರಾಜ್ಯಗಳಲ್ಲೂ ತನ್ನ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಚೆನ್ನೈನಲ್ಲಿ ಇಂದು ಎಸ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದೆ.

ಮುಂಬರುವ ದಿನಗಳಲ್ಲಿ ದೆಹಲಿ, ಹೈದ್ರಾಬಾದ್, ಪುಣೆ, ಮುಂಬೈ ಮತ್ತು ದೆಹಲಿಯಲ್ಲೂ ತನ್ನ ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದತೆ ನಡೆಸಲಾಗುತ್ತಿದ್ದು, ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ.

ಇದಲ್ಲದೇ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿಗೆ ಅರ್ಹವಾಗಿರುವ ಕೆಲವೇ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅತ್ಯುತ್ತಮ ಬ್ಯಾಟರಿ ಬಳಕೆಯೊಂದಿಗೆ ಗ್ರಾಹಕರ ಸ್ನೇಹಿಯಾಗಿರುವ ಈ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೂ ಬಂಪರ್ ಆಫರ್ ನೀಡುತ್ತಿದೆ.

ಇದರಲ್ಲಿ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಫೇಮ್ 2 ಸಬ್ಸಡಿ ಪಡೆದುಕೊಂಡ ನಂತರ ಅಥೆರ್ ಸ್ಕೂಟರ್‌ಗಳ ಬೆಲೆಯು ಎಸ್ 340 ಮಾದರಿಗೆ ರೂ. 1.13 ಲಕ್ಷ ಮತ್ತು ರೂ. 1.24 ಲಕ್ಷ ನಿಗದಿ ಮಾಡಲಾಗಿದ್ದು, ಉತ್ತಮ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವುದು ಸಬ್ಸಡಿ ಯೋಜನೆಗೆ ಅರ್ಹವಾಗಲು ಪ್ರಮುಖ ಕಾರಣವಾಗಿದೆ.
MOST READ: ಬಜಾಜ್ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಈ ಹಿಂದೆ ಫೇಮ್ ಯೋಜನೆಯ ಮೊದಲ ಹಂತವನ್ನು ಪರಿಚಯಿಸಿದ್ದ ವೇಳೆ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಈ ಬಾರಿ 2ನೇ ಹಂತದ ಯೋಜನೆಯನ್ನು ಪರಿಚಯಿಸುವಾಗ ಕೆಲವು ಬದಲಾವಣೆಗಳನ್ನು ತಂದಿದೆ.

ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಳ್ಳಲು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಮಾತ್ರವೇ ಸಬ್ಸಡಿ ಎಂದಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಹೊಸ ಮಾರ್ಗಸೂಚಿಯನ್ನು ಪಾಲನೆ ಮಾಡಿರುವ ಅಥೆರ್ ಸಂಸ್ಥೆಯು ಫೇಮ್ 2 ಗಿಟ್ಟಿಸಿಕೊಂಡಿರುವುದು ಗ್ರಾಹಕರನ್ನು ಆಕರ್ಷಿಸುತ್ತಿದೆ.
MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಅಥೆರ್ ಸಂಸ್ಥೆಯು ಗ್ರಾಹಕರ ಬೇಡಿಕೆ ಅನ್ವಯ ಎಸ್ 450 ಸ್ಕೂಟರ್‌ಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸದ್ಯದಲ್ಲೇ ಎಸ್ 340 ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದಕ್ಕೆ ಕಾರಣ, ಶೇ.98 ಗ್ರಾಹಕರು ಎಸ್ 450 ಸ್ಕೂಟರ್ ಖರೀದಿಗೆ ಮುಂದಾಗುತ್ತಿದ್ದು, ಸ್ಟಾಕ್ ಮುಗಿಯುವ ತನಕ ಮಾತ್ರವೇ ಎಸ್ 340 ಸ್ಕೂಟರ್ ಮಾರಾಟಕ್ಕೆ ಲಭ್ಯವಿರಲಿದೆ.


Click it and Unblock the Notifications








