ಆರ್‌ಸಿ 125 ನಂತರ 390 ಅಡ್ವೆಂಚರ್ ಬಿಡುಗಡೆಗೆ ಸಜ್ಜಾದ ಕೆಟಿಎಂ..!
ಮಧ್ಯಮ ಗಾತ್ರದ ಪ್ರೀಮಿಯಂ ಬೈಕ್ ಮಾರಾಟದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ಕೆಟಿಎಂ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಡ್ಯೂಕ್ 125 ಮತ್ತು ಆರ್‌ಸಿ 125 ನಂತರ ಇದೀಗ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಕೆಟಿಎಂ ಸಂಸ್ಥೆಯು ಕಳೆದ ಕೆಲ ತಿಂಗಳ ಹಿಂದಷ್ಟೇ ತಮ್ಮ ಜನಪ್ರಿಯ 790 ಅಡ್ವೆಂಚರ್ ಆರ್ ಮತ್ತು 790 ಅಡ್ವೆಂಚರ್ ಎಂಬ ಎರಡು ಹೊಸ ಬೈಕ್ ಮಾದರಿಗಳನ್ನು ಇಟಾಲಿಯ ಮಿಲಾನ್‍ನಲ್ಲಿ ನಡೆದ ಇಐಸಿಎಂಎ ಮೋಟಾರ್‍ಸೈಕಲ್ ಶೋನಲ್ಲಿ ಅನಾವರಣಗೊಳಿಸಿದ್ದು, ಇದೀಗ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ 390 ಅಡ್ವೆಂಚರ್ ಬೈಕಿನ ಎಂಜಿನ್ ಕಾರ್ಯಕ್ಷಮತೆ ಕುರಿತು ವಿವಿಧ ಹಂತದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿರುವುದಲ್ಲದೇ ಅಧಿಕೃತ ಬೈಕ್ ಮಾರಾಟ ಮಳಿಗೆಗಳಲ್ಲಿ ಹೊಸ ಬೈಕ್‌ಗಳನ್ನು ಸ್ಟಾಕ್ ಮಾಡುತ್ತಿದೆ.

ಕೆಟಿಎಂ ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್‌ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 1290 ಸೂಪರ್ ಅಡ್ವೆಂಚರ್ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹಿಮಾಲಯನ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಮಾರಾಟಗೊಳ್ಳಲಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೆ ಸಜ್ಜಾಗಿರುವ ಕೆಟಿಎಂ 390 ಬೈಕ್ ಮಾದರಿಯು 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿರುವ 390 ಅಡ್ವೆಂಚರ್ ಬೈಕ್ ಮಾದರಿಯು, ಸುಧಾರಿತ ವಿನ್ಯಾಸಗಳಾದ ಟಿಪಿಎಫ್ ಇನ್ಟ್ರುಮೆಂಟ್ ಡಿಸ್‌ಪ್ಲೇ, ಲಾಂಗ್ ಟ್ರಾವೆಲ್ ಫ್ರಂಟ್ ಮತ್ತು ರಿಯರ್ ಸಸ್ಷೆನ್ ಜೋಡಣೆ ಹೊಂದಿರಲಿವೆ. ಇದರ ಹೊರತಲಾಗಿ ಕೆಲವು ಮುಖ್ಯ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿ ಇಡಲಾಗಿದ್ದು, ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಮಾಹಿತಿ ಸಿಗಲಿದೆ.

ಇವುಗಳಲ್ಲದೇ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್, ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಟೆಕ್ನಾಲಜಿ ಮತ್ತು ಪರ್ಫಾಮೆನ್ಸ್‌ಗೆ ಸಹಕಾರಿಯಾಗಬಲ್ಲ ಡ್ಯುಯಲ್-ಸ್ಪೋಟ್ ಟೈರ್ ಮಾದರಿಗಳನ್ನು ಬಳಕೆ ಮಾಡಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆಗಳು (ಅಂದಾಜು)
2019ರ ನವೆಂಬರ್ ಅಥವಾ ಡಿಸೆಂಬರ್ ಹೊತ್ತಿಗೆ 390 ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸಿರುವ ಕೆಟಿಎಂ ಸಂಸ್ಥೆಯು ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 2.30 ಲಕ್ಷದಿಂದ ರೂ. 2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೀಗಾಗಿ ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯವಾಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಎಂಟ್ರಿ ಲೆವಲ್ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.
MOST READ: ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಕೆಟಿಎಂ ಸಂಸ್ಥೆಯು ತನ್ನ ಬಹುನೀರಿಕ್ಷಿತ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
Source:bikewale


Click it and Unblock the Notifications