ಡಕಾರ್ ರ್‍ಯಾಲಿಯಿಂದ ಹೊರಬಂದ ಹೀರೊ ಮೋಟೊಸ್ಪೋರ್ಟ್ ಟೀಂ
ವಿಶ್ವದ ಅತ್ಯಂತ ಅಪಾಯಕಾರಿ ಸ್ಪರ್ಧೆಗಳಲ್ಲಿ ಒಂದಾದ ಡಕಾರ್ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಭಾರತದ ಹೀರೋ ಮೋಟೊಸ್ಪೋರ್ಟ್‍ನ ಪೌಲೊ ಗೊನ್ಸಾಲ್ವೆಸ್‍ರವರು ಕಳೆದ ಭಾನುವಾರ ರ್‍ಯಾಲಿ ನಡೆಯುತ್ತಿರುವಾಗಲೇ ಮೃತಪಟ್ಟಿದ್ದರು.

ಈ ಕಾರಣಕ್ಕೆ ಹೀರೊ ಮೋಟೊಸ್ಪೋರ್ಟ್ ಟೀಂ ಈ ರ್‍ಯಾಲಿಯಿಂದ ಹೊರಬರುವುದಾಗಿ ತಿಳಿಸಿದೆ. ಇದರಿಂದಾಗಿ ಹೀರೊ ಮೋಟೊಸ್ಪೋರ್ಟ್ ತಂಡವು ರ್‍ಯಾಲಿಯ ಉಳಿದ ಸುತ್ತಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿಲ್ಲ. ಹೀರೊ ಮೋಟೊಸ್ಪೋರ್ಟ್ ತಂಡವು, ಈ ಆಘಾತದಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗಿದೆ ಎಂದು ಹೇಳಿದೆ.

ಹೀರೊ ಮೋಟೊಸ್ಪೋರ್ಟ್ ಟೀಂ ಒಬ್ಬ ಸ್ನೇಹಿತ, ಜೊತೆಗಾರ ಹಾಗೂ ಅದ್ಭುತವಾದ ರ್‍ಯಾಲಿ ಸವಾರನನ್ನು ಕಳೆದುಕೊಂಡಿರುವುದಾಗಿ ತಿಳಿಸಿದೆ. ಗೊನ್ಸಾಲ್ವೆಸ್‍ರವರ ಅಕಾಲಿಕ ನಿಧನವು ಇಡೀ ಮೋಟೊಸ್ಪೋರ್ಟ್ ಉದ್ಯಮವನ್ನು ದುಃಖಕ್ಕೆ ತಳ್ಳಿದೆ.

ಪೌಲೊ ಗೊನ್ವಾಲ್ವೆಸ್‍ರವರು 8ನೇ ನಂಬರಿನ ಬೈಕ್ ಅನ್ನು ಚಾಲನೆ ಮಾಡುತ್ತಿದ್ದರು. 276 ಕಿ.ಮೀಗಳ 7ನೇ ಸುತ್ತಿನಲ್ಲಿ ಭಾಗವಹಿಸಿದ್ದಾಗ ಕೆಳಗೆ ಬಿದ್ದು ಸಾವನ್ನಪ್ಪಿದರು. ತಕ್ಷಣವೇ ರ್‍ಯಾಲಿಯ ಸಂಘಟಕರು ಸ್ಥಳಕ್ಕೆ ಮೆಡಿಕಲ್ ಹೆಲಿಕಾಪ್ಟರ್ ಅನ್ನು ಕಳುಹಿಸಿದ್ದರು.

ರ್‍ಯಾಲಿಯಲ್ಲಿದ್ದ ಇತರ ಬೈಕ್ ಸವಾರರು ಹಾಗೂ ಮೆಡಿಕಲ್ ಟೀಂ ಗೊನ್ಸಾಲ್ವೆಸ್‍ರವರಿಗೆ ಸಹಾಯ ಮಾಡಲು ಪ್ರಯತ್ನ ಪಟ್ಟರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಗೊನ್ಸಾಲ್ವೆಸ್‍ರವರನ್ನು ಲಾಯ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು.

ಅಪಘಾತ ಸಂಭವಿಸಿದ ತಕ್ಷಣ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ಟೀಂನ ಟೋಬಿ ಪ್ರೈಸ್‍ರವರು ಸ್ಥಳಕ್ಕೆ ಧಾವಿಸಿದರು. ಅಲ್ಲಿನ ಭೀಕರ ದೃಶ್ಯವನ್ನು ಕಂಡು ಭಯಪಟ್ಟಿದ್ದರು. ಈ ಬಗ್ಗೆ ಮಾತನಾಡಿದ ಅವರು ನಾನು ಗೊನ್ಸಾಲ್ವೆಸ್‍ರವರನ್ನು ಪಾರು ಮಾಡಲು ಪ್ರಯತ್ನ ಪಟ್ಟೆ.

ನಂತರ ಉಳಿದ ಬೈಕ್ ಸವಾರರು ಸಹ ನೆರವಿಗೆ ಧಾವಿಸಿದರು. ಹೆಲಿಕಾಪ್ಟರ್ ಸಹ ಸಹಾಯಕ್ಕೆ ಬಂದಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಾನು ಗೊನ್ಸಾಲ್ವೆಸ್ ಬಳಿಗೆ ಮೊದಲು ಬಂದು ಕೊನೆಗೆ ಹೋಗಲು ಬಯಸಿದೆ. ನಾವು ಆತನ ನಗುವನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಗೊನ್ಸಾಲ್ವೆಸ್‍ರವರು ತಮ್ಮ 13ನೇ ಡಕಾರ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. 40 ವರ್ಷ ವಯಸ್ಸಿನ ಗೊನ್ಸಾಲ್ವೆಸ್ ಈ ರ್‍ಯಾಲಿಯಲ್ಲಿದ್ದ ಅನುಭವಿ ಸವಾರರಲ್ಲಿ ಒಬ್ಬರಾಗಿದ್ದರು. ಮೊದಲ ಬಾರಿಗೆ 2006ರಲ್ಲಿ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಅವರು, ನಾಲ್ಕು ಬಾರಿ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದರು.

2015ರಲ್ಲಿ ಮಾರ್ಕ್ ಕೋಮಾ ನಂತರದ ಸ್ಥಾನ ಅಂದರೆ ರನ್ನರ್ ಅಪ್ ಸ್ಥಾನವನ್ನು ಪಡೆದಿದ್ದರು. ಇದರ ಜೊತೆಗೆ ಪೌಲೊ ಗೊನ್ಸಾಲ್ವೆಸ್‍ರವರು 2013ರಲ್ಲಿ ನಡೆದಿದ್ದ ಕ್ರಾಸ್ ಕಂಟ್ರಿ ರ್‍ಯಾಲಿಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಈ ಬಾರಿಯ ಡಕಾರ್ ರ್‍ಯಾಲಿಯ 6ನೇ ಸುತ್ತಿನ ಸ್ಪರ್ಧೆಯ ಬಳಿಕ 46ನೇ ಸ್ಥಾನದಲ್ಲಿದ್ದರು.

ಹೀರೊ ಮೋಟೊಸ್ಪೋರ್ಟ್ ಟೀಂನ ಭಾಗವಾಗಿರುವ ಕನ್ನಡಿಗ ಸಿ ಎಸ್ ಸಂತೋಷ್‍ರವರು ಒಟ್ಟಾರೆ ರ್‍ಯಾಂಕಿಂಗ್‍ನಲ್ಲಿ ಅರ್ಹತೆಯನ್ನು ಪಡೆದಿದ್ದರು. ಆದರೆ ಗೊನ್ಸಾಲ್ವೆಸ್‍ರವರ ನಿಧನದ ಹಿನ್ನೆಲೆಯಲ್ಲಿ ಸಿ ಎಸ್ ಸಂತೋಷ್‍ರವರು ತಮ್ಮ ರ್‍ಯಾಲಿಯನ್ನು ಮುಗಿಸಬೇಕಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಡಕಾರ್ ರ್‍ಯಾಲಿ ಹಲವು ಕಾರಣಗಳಿಗಾಗಿ ಪ್ರಪಂಚದ ಅಪಾಯಕಾರಿ ಮೋಟಾರ್‍ಸ್ಪೋರ್ಟ್ ಎಂದು ಕರೆಯಲ್ಪಡುತ್ತದೆ. ಪೌಲೊ ಗೊನ್ಸಾಲ್ವೆಸ್‍ರವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಮೋಟೊಸ್ಪೋರ್ಟ್ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಈ ಕಾರಣಕ್ಕೆ ಹೀರೊ ಮೋಟೊಸ್ಪೋರ್ಟ್ ಟೀಂ ಈ ರ್‍ಯಾಲಿಯಿಂದ ಹಿಂದೆ ಸರಿದಿದೆ.


Click it and Unblock the Notifications








