ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮಾಲೀಕತ್ವದ ಮೊದಲ ನಾರ್ಟನ್ ವಿ4 ಆರ್‌ಆರ್ ಸೂಪರ್ ಬೈಕ್
ಬ್ರಿಟಿಷ್ ಐಕಾನಿಕ್ ಬೈಕ್ ಬ್ರಾಂಡ್ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಸಹಭಾಗಿತ್ವದ ಯೋಜನೆ ಅಡಿ ಹೊಸ ಬೈಕ್ ಮಾದರಿಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ನಿರ್ಮಾಣವಾದ ಮೊದಲ ಸೂಪರ್ ಬೈಕ್ ಆವೃತ್ತಿಯಾದ ನಾರ್ಟನ್ ವಿ4 ಆರ್‌ಆರ್ ಬಿಡುಗಡೆಗೆ ಸಜ್ಜಾಗಿದೆ.

ನಾರ್ಟನ್ ಮೋಟಾರ್‌ಸೈಕಲ್ ಈಗಾಗಲೇ ಭಾರತ ಸೇರಿದಂತೆ ವಿಶ್ವದ ಪ್ರಮುಖ 21 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲವನ್ನು ಹೊಂದಿದ್ದು, ಇದೀಗ ಟಿವಿಎಸ್ ಮೋಟಾರ್ ನೇತೃತ್ವದಲ್ಲಿ ಮುನ್ನಡೆಯಲಿರುವ ಐಕಾನಿಕ್ ಬೈಕ್ ಬ್ರಾಂಡ್ ಮಾದರಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ. 1898ರಲ್ಲೇ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಅನುಭವ ಹೊಂದಿದ್ದರೂ ಇತ್ತೀಚೆಗೆ ಕೆಲವು ಹೊಸ ಯೋಜನೆಗಳಿಂದಾಗಿ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಿತ್ತು.

ಈ ವೇಳೆ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯ ಷೇರುಗಳನ್ನು ಖರೀದಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಐಕಾನಿಕ್ ಬೈಕ್ ಬ್ರಾಂಡ್‌ಗೆ ಹೊಸ ಶಕ್ತಿ ತುಂಬಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾರಾಟದಲ್ಲಿ ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದೆ.

ಮೊದಲ ಹಂತವಾಗಿ ನಾರ್ಟನ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯು ವಿನೂತನ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆ ಹೊಂದಿರುವ ವಿ4 ಆರ್‌ಆರ್ ಸೂಪರ್‌ಬೈಕ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಹೊಸ ಸೂಪರ್ ಬೈಕ್ ಮಾದರಿಯು ಇದೇ ವರ್ಷಾಂತ್ಯಕ್ಕೆ ಅನಾವರಣಗೊಳ್ಳಲಿದೆ.

2021ರ ಮಧ್ಯಂತರದಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗಲಿರುವ ನಾರ್ಟನ್ ವಿ4 ಆರ್‌ಆರ್ ಸೂಪರ್‌ಬೈಕ್ ಮಾದರಿಯು 1,200 ಸಿಸಿ ಸಾಮಾರ್ಥ್ಯದ ವಿ4 ಎಂಜಿನ್ ಆಯ್ಕೆ ಹೊಂದಿರಲಿದ್ದು, ಹಲವಾರು ಆಧುನಿಕ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳು ಈ ಬೈಕಿನಲ್ಲಿವೆ. ಹಾಗೆಯೇ ಪರ್ಫಾಮೆನ್ಸ್ ಪೂರಕವಾದ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ವಿ4 ಆರ್‌ಆರ್ ಸೂಪರ್‌ಬೈಕ್ ಮಾದರಿಯು 200-ಬಿಎಚ್‌ಪಿ, 130-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೊಸ ಬೈಕಿನಲ್ಲಿ ಕನೆಕ್ಟೆಡ್ ಫೀಚರ್ಸ್ ಹೊಂದಿರುವ 7 ಇಂಚಿನ ಹೆಚ್‌ಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿವಿಧ ರೈಡಿಂಗ್ ಮೋಡ್‌ಗಳು, ಬೆಂಬ್ರೊ ಬ್ರೇಕಿಂಗ್ ಸೌಲಭ್ಯಗಳು, ಪೂರ್ಣಪ್ರಮಾಣದ ಒಹಿಲನ್ಸ್ ಸಸ್ಷೆಷನ್ ಸೆಟ್‌ಅಪ್ ಮತ್ತು ಪರ್ಫಾಮೆನ್ಸ್‌ಗೆ ಪೂರಕವಾಗಿ ಬೈಕಿನ ತೂಕವನ್ನು ಕಡಿತಗೊಳಿಸಲು ಗರಿಷ್ಠ ಮಟ್ಟದ ಫೈಬರ್ ಬಾಡಿ ಬಳಕೆ ಮಾಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸದ್ಯಕ್ಕೆ ಹೊಸ ಬೈಕ್ ಕುರಿತಾಗಿ ಟೀಸರ್ ಮೂಲಕ ಕೆಲವೇ ಕೆಲವು ಮಾಹಿತಿ ಹಂಚಿಕೊಂಡಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಅನಾವರಣದ ಸಂದರ್ಭದಲ್ಲಿ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದ್ದು, ಹಾರ್ಲೆ ಡೇವಿಡ್ಸನ್ ಯುರೋಪ್ ವಿಭಾಗದ ಮಾಜಿ ಉಪಾಧ್ಯಕ್ಷ ಜಾನ್ ರೂಸೆಲ್ ಅವರು ಟಿವಿಎಸ್ ಮತ್ತು ನಾರ್ಟನ್ ಸಹಭಾಗೀತ್ವದ ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯಲ್ಲಿ ಸುಮಾರು ರೂ.150 ಕೋಟಿ ಹೂಡಿಕೆ ಮಾಡಿರುವ ಟಿವಿಎಸ್ ಮೋಟಾರ್ ಕಂಪನಿಯು ನಾರ್ಟನ್ ಕಂಪನಿಯ ಅರ್ಧಕ್ಕೂ ಹೆಚ್ಚು ಷೇರುಗಳನ್ನು ತನ್ನದಾಗಿಸಿಕೊಂಡಿದ್ದು, ಐಷಾರಾಮಿ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇನ್ನು ನಾರ್ಟನ್ ಕಂಪನಿಯು ಸದ್ಯ ಅನಾವರಣಗೊಳಿಸಲಿರುವ ವಿ4 ಆರ್‌ಆರ್ ಸೂಪರ್‌ಬೈಕ್ ಮಾದರಿಯು ಭಾರತದಲ್ಲೂ ಬಿಡುಗಡೆಯಾಗುವ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ ಸಹಭಾಗೀತ್ವದ ಯೋಜನೆಯಡಿ ಮುಂಬರುವ ದಿನಗಳಲ್ಲಿ ವಿವಿಧ ಮಾದರಿಯ ಸೂಪರ್ ಬೈಕ್ ಆವೃತ್ತಿಗಳು ದೇಶಿಯ ಮಾರುಕಟ್ಟೆಯಲ್ಲೂ ಸದ್ದು ಮಾಡಲಿದ್ದು, ದುಬಾರಿ ಬೆಲೆ ಹೊಂದಿರುವ ಹೊಸ ಬೈಕ್ ಮಾದರಿಗಳು ಭಾರತೀಯ ಗ್ರಾಹಕರ ಅಭಿರುಚಿಯೊಂದಿಗೆ ಅಭಿವೃದ್ದಿಗೊಳ್ಳಲಿವೆ.


Click it and Unblock the Notifications