ಸಬ್ಸಡಿ ಹೆಚ್ಚಳ ಬೆನ್ನಲ್ಲೇ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಎಥರ್
ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ ಸಬ್ಸಡಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಫೇಮ್ 2 ಸಬ್ಸಡಿ ಹೆಚ್ಚಳವಾದ ಬೆನ್ನಲ್ಲೇ ಎಥರ್ ಎನರ್ಜಿ ಕಂಪನಿಯು ತನ್ನ 450ಎಕ್ಸ್ ಸ್ಕೂಟರಿನ ಪರಿಷ್ಕರಣೆ ಮಾಡಲಾದ ದರ ಪ್ರಕಟಿಸಿದೆ.

ಫೇಮ್ 2 ಯೋಜನೆಯಡಿಯಲ್ಲಿ ಈಗಾಗಲೇ ಲಭ್ಯವಿರುವ ಸಬ್ಸಡಿ ಪ್ರಮಾಣವನ್ನು ದ್ವಿಚಕ್ರ ವಾಹನಗಳಿಗಾಗಿ ಶೇ.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಎಥರ್ ಕಂಪನಿಯು ಹೊಸ ಸಬ್ಸಡಿ ಮಾರ್ಗಸೂಚಿಯೆಂತೆ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ. 15 ಸಾವಿರದಷ್ಟು ಇಳಿಕೆ ಮಾಡಿರುವುದು ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಉತ್ತೇಜಿಸುವ ಮಹತ್ವದ ಕ್ರಮವಾಗಿದೆ.

ಹೊಸ ಸಬ್ಸಡಿ ಯೋಜನೆಗಾಗಿ ಕೇಂದ್ರ ಸರ್ಕಾರವು ಹಲವಾರು ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸಿದ್ದು, ಹೊಸ ಮಾನದಂಡಗಳನ್ನು ಪೂರೈಸಿರುವ ಎಥರ್ 450ಎಕ್ಸ್ ಮಾದರಿಯ ಬೆಲೆಯ ಮೇಲೆ ಗರಿಷ್ಠ ಪ್ರಮಾಣದ ಸಬ್ಸಡಿ ಲಭ್ಯವಾಗಿದೆ.

ಬೆಲೆ ಪರಿಷ್ಕರಣೆ ನಂತರ ಎಥರ್ 450ಎಕ್ಸ್ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷದಿಂದ ರೂ. 1.44 ಲಕ್ಷಕ್ಕೆ ಇಳಿಕೆಯಾಗಿದ್ದು, ಕೇಂದ್ರ ಸರ್ಕಾರದ ಹೊಸ ನಿರ್ಧಾರವನ್ನು ಸ್ವಾಗತಿಸಿರುವ ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ದೇಶದ 30 ಪ್ರಮುಖ ನಗರಗಳಲ್ಲಿಇವಿ ಮಾರಾಟ ಮಳಿಗೆಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ದೇಶದ ಪ್ರಮುಖ 11 ಮಾಹಾನಗರಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಜಾಲವನ್ನು ವಿಸ್ತರಿಸಿರುವ ಎಥರ್ ಕಂಪನಿಯು ಇದೀಗ 2ನೇ ಹಂತದ ವಾಹನ ಮಾರಾಟ ಮಳಿಗೆಗಳ ವಿಸ್ತರಣೆ ಯೋಜನೆ ಅಡಿಯಲ್ಲಿ ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದೆ.

ಈ ವರ್ಷದ ಅಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 30 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದುವ ವಿಶ್ವಾಸ ವ್ಯಕ್ತಪಡಿಸಿದ್ದು, ಎರಡನೇ ಹಂತದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆ ವಿಸ್ತರಣೆ ಯೋಜನೆಯಲ್ಲಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಕೂಡಾ ಎಥರ್ ಕಾರ್ಯಾಚರಣೆ ಆರಂಭಿಸುತ್ತಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸ್ಕೂಟರ್‌ಗಳಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಜೋಡಿಸಲಾಗಿದೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹೊಂದಿದೆ.

ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ವೇಗ ಮತ್ತು ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡ ಕಡ್ಡಾಯ ಮಾಡಿದೆ.

ಇದೇ ಕಾರಣಕ್ಕೆ ಮೊದಲ ಹಂತದ ಸಬ್ಸಡಿ ಯೋಜನೆಗೆ ಆಯ್ಕೆಯಾಗಿದ್ದ ಎಥರ್ 450 ಪ್ಲಸ್ ಮಾದರಿಯನ್ನು ಈ ಬಾರಿ ಕೈಬಿಡಲಾಗಿದ್ದು, ಅಧಿಕ ಮೈಲೇಜ್ ಹೊಂದಿರುವ 450 ಎಕ್ಸ್ ಮಾದರಿಯನ್ನು ಆಯ್ಕೆ ಮಾಡಲಾಗಿದೆ.


Click it and Unblock the Notifications








