ಎಲೆಕ್ಟ್ರಿಕ್ ವಾಹನಗಳ ಖರೀದಿ ಉತ್ತೇಜಿಸಲು ಕ್ಲೀನ್ ಮೊಬಿಲಿಟಿಗೆ ಚಾಲನೆ
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ.

ದೇಶಾದ್ಯಂತ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಸಬ್ಸಡಿ ಒದಗಿಸುತ್ತಿದೆ. ಹಾಗೆಯೇ ಕೇಂದ್ರದ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೆ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ರಾಜ್ಯದ ಸರ್ಕಾರದಿಂದ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ತನ್ನದೆ ಎಲೆಕ್ಟ್ರಿಕ್ ವಾಹನ ನೀತಿಯೊಂದಿಗೆ ಮುಂಚೂಣಿ ಸಾಧಿಸುತ್ತಿದ್ದು, ತೆಲಂಗಾಣದಲ್ಲೂ ಸಹ 2020-21 ಮತ್ತು 2021-22 ಅವಧಿಯಲ್ಲಿ ಮಾರಾಟಗೊಳ್ಳುವ 2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಲು ನಿರ್ಧರಿಸಿದೆ.

ಇದೀಗ ಗೋವಾ ಸರ್ಕಾರ ಕೂಡಾ ಕ್ಲೀನ್ ಮೊಬಿಲಿಟಿಗೆ ಚಾಲನೆ ನೀಡುವ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹೊಸ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಕೊಡುಗೆಗಳನ್ನು ಘೋಷಣೆ ಮಾಡಿದೆ.

ಕ್ಲೀನ್ ಮೊಬಿಲಿಟಿ ಯೋಜನೆ ಅಡಿ ಪ್ರತಿ ವರ್ಷ 10 ಸಾವಿರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡುವುದಾಗಿ ಘೋಷಣೆ ಮಾಡಿದ್ದು, ಜೊತೆಗೆ ಚಾರ್ಜಿಂಗ್ ಸೌಲಭ್ಯಕ್ಕಾಗಿ ಅಗತ್ಯ ಫಾಸ್ಟ್ ಚಾರ್ಜಿಂಗ್‌ಗಳನ್ನು ಹೊಸ ಯೋಜನೆ ಅಡಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಹೊಸ ಯೋಜನೆಯೊಂದಿಗೆ ವಾರ್ಷಿಕವಾಗಿ 5 ಸಾವಿರ ಟನ್ ಇಂಗಾಲದ ಡೈಆಕ್ಸೈಡ್ ತಗ್ಗಿಸುವ ಗುರಿಹೊಂದಲಾಗಿದ್ದು, ಹಳೆಯ ವಾಹನಗಳಗೆ ಸ್ವಯಂಪ್ರೇರಿತ ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳಲು ಉತ್ತೇಜಿಸುವುದು ಹೊಸ ಯೋಜನೆಯ ಪ್ರಮುಖ ಭಾಗವಾಗಿದೆ.

ಇನ್ನು ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ಸಮಸ್ಯೆ ನಿವಾರಣೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಸನ್ ಮೊಬಿಲಿಟಿ ಜೊತೆಗೂಡಿ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿವೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬ್ಯಾಟರಿ ವಿನಿಯಮ ಕೇಂದ್ರಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಖಾಲಿಯಾದ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸದ್ಯ ಬೆಂಗಳೂರು, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ನಗರಗಳಲ್ಲಿನ ಆಯ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಬಂಕ್ ಆವರಣಗಳಲ್ಲೇ ಹೊಸ ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ಪ್ರಾಯೋಗಿಕವಾಗಿ ವಿವಿಧ ನಗರಗಳಲ್ಲಿ ತಲಾ ಒಂದೊಂದು ಬ್ಯಾಟರಿ ವಿನಿಯಮ ತೆರೆದಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಶೀಘ್ರದಲ್ಲೇ ಬೆಂಗಳೂರು ಒಂದಲ್ಲೇ ನೂರು ಕೇಂದ್ರಗಳಿಗೆ ಚಾಲನೆ ನೀಡಲಿದೆ.


Click it and Unblock the Notifications