100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರೆದ ಹೀರೋ ಮೋಟೊಕಾರ್ಪ್
ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಹೀಗಾಗಿ ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಯು ಸಾಧ್ಯವಿರುವ ಕಡೆಗಳಲ್ಲಿ ಸಾರ್ವಜನಿಕರಿಗೆ ವಿವಿಧ ಮಾದರಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದು, ದೇಶದ ಅತಿ ದೊಡ್ದ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕೂಡಾ ಕೋವಿಡ್ ಸೋಂಕಿತರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆ ಒದಗಿಸಲು ಕೋವಿಡ್ ಕೇರ್‌ಗಳಿಗೆ ಚಾಲನೆ ನೀಡಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು 'ಹೀರೋ ವಿ ಕೇರ್' ಸಾಮಾಜಿಕ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಕೋವಿಡ್ ಕೇರ್‌ಗಳನ್ನು ಆರಂಭಿಸುತ್ತಿದ್ದು, ಇತ್ತೀಚೆಗೆ ಕಂಪನಿಯು ಆಕ್ಸಿಜನ್ ಸೌಲಭ್ಯವುಳ್ಳ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಅನ್ನು ಹರಿಯಾಣದ ಗುರುಗ್ರಾಮ್‌ನಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆರಂಭಿಸಿದೆ.

ಹಾಗೆಯೇ ಉತ್ತರಾಖಂಡನ ಹರಿದ್ವಾರದಲ್ಲೂ ಸಹ ರಾಮಕೃಷ್ಣ ಮಿಷನ್ ಸೇವಾಶ್ರಮ ಮತ್ತು ಹರಿದ್ವಾರ ಜಿಲ್ಲಾಡಳಿತ ಜೊತೆಗೂಡಿ ಕೋವಿಡ್ ಕೇರ್ ಆರಂಭಿಸಿದ್ದು, ಹರಿದ್ವಾರದಲ್ಲಿ 122 ಹಾಸಿಗೆಗಳ ಸೌಲಭ್ಯದ ಕೋವಿಡ್ ಕೇರ್ ತೆರೆದಿದೆ.

ರಾಮಕೃಷ್ಣ ಮಿಷನ್ ಸೇವಾಶ್ರಮದಲ್ಲಿ ಸಿದ್ದಗೊಂಡಿರುವ 122 ಹಾಸಿಗೆಗಳ ಸೌಲಭ್ಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಕ್ಸಿಜನ್ ಸಹಿತ 90 ಹಾಸಿಗೆಗಳಿವೆ. ಹಾಗೆಯೇ ಎಮರ್ಜನ್ಸಿ ವಾರ್ಡ್‍ನಲ್ಲಿ ಆಕ್ಸಿಜನ್ ಮತ್ತು ಪೋರ್ಟಬಲ್ ವೆಂಟಿಲೇಟರ್ ಸೌಲಭ್ಯವಿರುವ 16 ಹಾಸಿಗೆಗಳಿವೆ.
MOST READ: ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಕೋವಿಡ್ ಐಸಿಯು ವಿಭಾಗದಲ್ಲಿ ಆಕ್ಸಿಜನ್ ಮತ್ತು ಬಿಐಪಿಎಪಿ ಯಂತ್ರದ ಸಹಿತ 08 ಹಾಸಿಗೆಗಳು ಲಭ್ಯವಿದ್ದು, 24x7 ಲ್ಯಾಬ್, ಸಿಟಿ ಸ್ಕ್ಯಾನ್ ಮತ್ತು 05 ಆಪರೇಷನ್ ಥಿಯೇಟರ್‌ಗಳನ್ನು ತೆರೆಯುವ ಮೂಲಕ ಸಮುದಾಯದ ರಕ್ಷಣೆಗೆ ಗರಿಷ್ಠ ಸಹಕಾರ ನೀಡಲಾಗುತ್ತಿದೆ.

ಕೋವಿಕ್ ಕೇರ್ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ದೆಹಲಿ ಮತ್ತು ಎನ್‍ಸಿಆರ್, ಹರಿಯಾಣ, ಉತ್ತರಾಖಂಡ್, ರಾಜಸ್ತಾನ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ವೈಯಕ್ತಿಕ ಪ್ರಯಾಣಕ್ಕಾಗಿ ಕಂಪನಿಯು ತನ್ನ ಮೋಟಾರ್‌ಸೈಕಲ್‌ಗಳ ಜೊತೆ ಬೈಕ್ ಆ್ಯಂಬುಲೆನ್ಸ್ ಸಹ ಒದಗಿಸುತ್ತಿದೆ.
MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ದೆಹಲಿ ಮತ್ತು ಹರಿಯಾಣದ ಕೆಲವು ಸರ್ಕಾರಿ ಆಸ್ಪತ್ರೆಗಳಿಗೆ ತುರ್ತು ವೈದ್ಯಕೀಯ ಬಳಕೆಗಾಗಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಮತ್ತು ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ ಪಿಪಿಇ ಕಿಟ್‍ಗಳನ್ನು ವಿವಿಧ ರಾಜ್ಯಗಳ ಆರೋಗ್ಯ ಅಧಿಕಾರಿಗಳಿಗೆ ಒದಗಿಸುತ್ತಿದ್ದು, ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ಹೀರೋ ಮೋಟೊಕಾರ್ಪ್ ಕಂಪನಿಯ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications