ರಾಜ್ಯಾದ್ಯಂತ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡಲಿದೆ ಎಥರ್ ಎನರ್ಜಿ
ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಕರ್ನಾಟಕ ಸರ್ಕಾರವು ಸಹ ಹೊಸ ಇವಿ ನೀತಿಯೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದೆ.

ಸಾಂಪ್ರಾಯಿಕ ಇಂಧನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು ಹೆಚ್ಚಿದಂತೆ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಸಹ ಹೆಚ್ಚಿಸಲಾಗುತ್ತಿದೆ. ಇವಿ ವಾಹನಗಳ ಮಾರಾಟ ಹೆಚ್ಚಳಕ್ಕೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಇವಿ ಗ್ರಾಹಕರನ್ನು ಸೆಳೆಯಲು ಎಥರ್ ಎನರ್ಜಿ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿದೆ.

ರಾಜ್ಯದ ಮೂರು ಪ್ರಮುಖ ವಿದ್ಯುತ್ ಸರಬರಾಜು ಕಂಪನಿಗಳನ್ನು ಒಳಗೊಂಡಿರುವ ಎಸ್ಕಾಂ ಜೊತೆಗೆ ಹೊಸ ಸಹಭಾಗಿತ್ವ ಯೋಜನೆ ಘೋಷಣೆ ಮಾಡಿರುವ ಎಥರ್ ಎನರ್ಜಿ ಕಂಪನಿಯು ರಾಜ್ಯಾದ್ಯಂತ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿದೆ.

ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಕಾಂ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಎಥರ್ ಎನರ್ಜಿ ಕಂಪನಿಯ ಸಿಇಒ ತರುಣ್ ಮೆಹ್ತಾ ಅವರು 'ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೆಚ್ಚಿಸಲು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಳ್ಳಲಾದ ಹೊಸ ಪಾಲುದಾರಿಕೆ ಬಗೆಗೆ ಉತ್ಸುಕರಾಗಿದ್ದೇವೆ. ಭವಿಷ್ಯದ ಯೋಜನೆಗಾಗಿ ಸಹಕರಿಸಿದ ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

ಜೊತೆಗೆ ಕರ್ನಾಟಕವು ಸದ್ಯ ಇವಿ ವಾಹನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇವಿ ವಾಹನಗಳ ಅವಡಿಕೆಗೆ ಪ್ರಬಲವಾದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಜಾಲವು ಅಗತ್ಯವಾಗಿದೆ. ಇದಕ್ಕಾಗಿ ಹೊಸ ಸಹಭಾಗಿತ್ವ ಯೋಜನೆಯು ಮಹತ್ವ ಪಡೆದುಕೊಂಡಿದೆ ಎಂದು ಹೊಸ ಯೋಜನೆ ಬಗೆಗೆ ತರುಣ್ ಮೆಹ್ತಾ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಸ್ಥಾಪನೆಗೊಳ್ಳುವ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಯ ಸಂಪೂರ್ಣ ವೆಚ್ಚ ಮತ್ತ ನಿರ್ವಹಣೆಯನ್ನು ಎಥರ್ ಎನರ್ಜಿ ಕಂಪನಿಯ ವಹಿಸಿಕೊಳ್ಳಲಿದ್ದರೆ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಆಯಕಟ್ಟಿನ ಸ್ಥಳವನ್ನು ಗುರುತಿಸುವುದು ಮತ್ತು ವಿದ್ಯುತ್ ಪೂರೈಕೆಯನ್ನು ಎಸ್ಕಾಂ ಕಂಪನಿ ನಿರ್ವಹಿಸಲಿದೆ.

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿರುವ ಎಥರ್ ಕಂಪನಿಯು ಮುಂದಿನ ಜೂನ್ ಕೊನೆಯ ತನಕ ಇವಿ ವಾಹನ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತ ಚಾರ್ಜಿಂಗ್ ಸೌಲಭ್ಯ ಒದಗಿಸಲಿದ್ದು, ತ್ವರಿತವಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ.

ಇನ್ನು ಎಥರ್ ಎನರ್ಜಿ ಕಂಪನಿಯು ದೇಶಾದ್ಯಂತ ತನ್ನ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಎಥರ್ ಗ್ರಿಡ್ 2.0 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದೆ. ಹೊಸ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಚಾರ್ಜಿಂಗ್ ನಿಲ್ದಾಣಗಳಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಜೊತೆಗೆ ಹೊಸ ಎಥರ್ ಗ್ರಿಡ್ 2.0 ಸೌಲಭ್ಯವು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ಹೊಸ ನೆಟ್‌ವರ್ಕ್ ಅನ್ನು ಅತಿಯಾದ ಮಳೆ, ಬಿಸಿಲಿನ ಪರಿಸ್ಥಿತಿಗಳನ್ನು ಒಡ್ಡಿಕೊಳ್ಳುವ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಮಾಡ್ಯುಲರ್ ವಿನ್ಯಾಸದೊಂದಿಗೆ ರಿಮೋಟ್ ಡಯಾಗ್ನೋಸ್ಟಿಕ್ಸ್ ಜೋಡಿಸಲಾಗಿದೆ.

ಎಥರ್ ಕಂಪನಿಯು ಕರ್ನಾಟಕದಲ್ಲಿ ಈಗಾಗಲೇ 58 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳೊಂದಿಗೆ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದು, ಇದೀಗ ಹೊಸ ಸಹಭಾಗಿತ್ವ ಯೋಜನೆಯು ಕಂಪನಿಯ ಭವಿಷ್ಯದ ಯೋಜನೆಗಳಿಗೆ ಮಹತ್ವದ ಹೆಜ್ಜೆಯಾಗಲಿದೆ.

ಇನ್ನು ದುಬಾರಿ ಬೆಲೆ ನಡುವೆಯೂ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮುಂಬರುವ ಕೆಲ ತಿಂಗಳಿನಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಇದುವರೆಗೂ ರೂ.700 ಕೋಟಿಗೂ ಅಧಿಕ ಮೌಲ್ಯದ ಇವಿ ಸ್ಕೂಟರ್ ಉದ್ಯಮ ವ್ಯವಹಾರ ಕೈಗೊಂಡಿದೆ.

ಎಥರ್ ಕಂಪನಿಯು ಕಳೆದ ವರ್ಷ 2021ರಲ್ಲಿ 2020ರ ಅವಧಿಗಿಂತಲೂ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications








