EV ನೀತಿ: ಇಂಧನ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿ ನಿಲ್ಲಿಸಿದ ಚಂಡೀಗಢ ಆಡಳಿತ
ಪರಿಸರ ಸ್ನೇಹಿ ಮತ್ತು ಹಸಿರು ಸಾರಿಗೆಯ ಗುರಿಯನ್ನು ಸಾಧಿಸಲು ಚಂಡೀಗಢ ಆಡಳಿತವು ಫೆಬ್ರವರಿ 10 ರಿಂದ ICE (ಇಂಧನ ಚಾಲಿತ) ದ್ವಿಚಕ್ರ ವಾಹನಗಳ ನೋಂದಣಿಯನ್ನು ನಿಲ್ಲಿಸಿದೆ. ಕಳೆದ ಬುಧವಾರ ಸಂಜೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲೆಕ್ಟ್ರಿಕ್ ಅಲ್ಲದ ದ್ವಿಚಕ್ರ ವಾಹನಗಳ ನೋಂದಣಿಯನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.
ಚಂಡೀಗಢ ಆಡಳಿತವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ 2022 ಅನ್ನು ಸೂಚಿಸಿತ್ತು. ಆರೋಗ್ಯಕರ ಪರಿಸರಕ್ಕಾಗಿ ಹಾಗೂ ಎಲೆಕ್ಟ್ರಿಕ್ ಚಲನಶೀಲತೆಯನ್ನು ಉತ್ತೇಜಿಸಿ ಇಂಧನ ಚಾಲಿತ ವಾಹನಗಳನ್ನು ತಗ್ಗಿಸುವ ಗುರಿಯನ್ನು ಹೊಂದಲಾಗಿದೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಮನ್ನಾ ಮಾಡಲು ಈ ಇವಿ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಅದೇ ಸಮಯದಲ್ಲಿ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಲು, ಅವುಗಳ ನೋಂದಣಿಗೆ ಮಿತಿಯನ್ನು ನಿಗದಿಪಡಿಸುವಂತೆ ನೀತಿಯಲ್ಲಿ ತಿಳಿಸಲಾಗಿದೆ ಎಂದು ಈ ಆದೇಶವು ಸ್ಪಷ್ಟಪಡಿಸಿದೆ. ನೀತಿಯ ಪ್ರಕಾರ, ಮೊದಲ ವರ್ಷಕ್ಕೆ ನಾಲ್ಕು ಚಕ್ರದ ವಾಹನಗಳಲ್ಲಿ ಶೇ10 ರಷ್ಟು ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ35 ರಷ್ಟು ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ಕಡಿಮೆ ಮಾಡುವ ಮೂಲಕ ನಗರದಲ್ಲಿ ನೋಂದಣಿಯನ್ನು ಮಿತಿಗೊಳಿಸುವ ಗುರಿಯನ್ನು ಹೊಂದಿದೆ.
"ನೀತಿಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷಕ್ಕೆ ಇಂಧನ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಈಗಾಗಲೇ ಸಾಧಿಸಲಾಗಿರುವುದರಿಂದ, ಇವಿ ನೀತಿಯ ನಿಬಂಧನೆಗಳನ್ನು ಜಾರಿಗೆ ತರಲು ಮತ್ತು ಹಸಿರು ಚಂಡೀಗಢದ ಹಿತಾಸಕ್ತಿಗಾಗಿ ಅವುಗಳ ನೋಂದಣಿಯನ್ನು ತಕ್ಷಣವೇ ನಿಲ್ಲಿಸುವ ಅಗತ್ಯವಿದೆ. ಹೀಗಾಗಿ, ಫೆಬ್ರವರಿ 10 ಅಥವಾ ಅದರ ನಂತರ ಇಂಧನ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಇಲ್ಲಿಗೆ ನಿಲ್ಲಿಸಲು ನಿರ್ಧರಿಸಲಾಗಿದೆ.

ಅಂತೆಯೇ 10-02-2023 ರಂದು ಅಥವಾ ನಂತರ ಮಾರಾಟವಾದ ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ, UT, ಚಂಡೀಗಢದ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರದ ಕಚೇರಿಯಿಂದ ನೋಂದಾಯಿಸಲಾಗುವುದಿಲ್ಲ. ಅಂದರೆ, ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ 2022 ರ ಅನುಸಾರವಾಗಿ 31-3-2023 ರವರೆಗೆ ಈ ನೋಂದಣಿಗೆ ಬ್ರೇಕ್ ಹಾಕಲಾಗುತ್ತದೆ. ಬಳಿಕ ಏಪ್ರಿಲ್ 1, 2023 ರಿಂದ ಪುನರಾರಂಭಿಸಲಾಗುತ್ತದೆ, FY 2023-24 ಕ್ಕೆ ಅನುಮತಿಸುವ ಮಿತಿಗಳ ಪ್ರಕಾರ ಇದನ್ನು ಮಾಡಲಾಗುತ್ತದೆ.
ಚಂಡೀಗಢದ EV ನೀತಿ ಏನು ಹೇಳುತ್ತದೆ?
ಚಂಡೀಗಢ EV ನೀತಿಯ ಪ್ರಕಾರ, ಪ್ರತಿ ವರ್ಷಕ್ಕೆ ಕನಿಷ್ಠ ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಲಾಗಿದ್ದು, ಇ-ವಾಹನಗಳನ್ನು ನೋಂದಾಯಿಸಲು ನಿರ್ದಿಷ್ಟ ಶೇಕಡಾವಾರು ಸೆಟ್ ಕಡ್ಡಾಯವಾಗಿರುತ್ತದೆ. ಉದಾಹರಣೆಗೆ ಮೊದಲ ವರ್ಷ (2022) ಶೇ35 ರಷ್ಟು ದ್ವಿಚಕ್ರ EV ವಾಹನಗಳು ನೋಂದಣಿಯಾಗಿ, ಶೇ 65 ರಷ್ಟು ಇಂಧನ ಚಾಲತ ದ್ವಿಚಕ್ರ ವಾಹನಗಳು ನೋಂದಣಿಯಾಗಿದ್ದರೆ, ಅಲ್ಲಿಗೆ ಇಂಧನ ಆಧಾರಿತ ದ್ವಿಚಕ್ರ ವಾಹನಗಳ ನೋಂದಣಿಗಳು ಸಂಪೂರ್ಣ ಸ್ಥಗಿತಗೊಳ್ಳುತ್ತವೆ.
ಏಕೆಂದರೆ ನೀತಿಯ ಪ್ರಕಾರ ಆ ವರ್ಷದಲ್ಲಿ ಇಂಧನ ಚಾಲಿತ ವಾಹನಗಳಿಗೆ ಮಿತಿಗೊಳಿಸಿದ ಪ್ರಮಾಣವನ್ನು ದಾಟಿರುವುದರಿಂದ ಯಾವುದೇ ನೋಂದಣಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಮಾಡಲೇ ಬೇಕು ಎಂದಲ್ಲಿ ದ್ವಿಚಕ್ರ ವಾಹನದ ಮಾಲೀಕರು ಅದನ್ನು ಚಂಡೀಗಢ ಬಿಟ್ಟು ಬೇರೆಡೆ ನೋಂದಣಿ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಆಯ್ಕೆ ಇರುವುದಿಲ್ಲ. ಇದನ್ನು ಅಲ್ಲಿನ ಸಾರ್ವಜನಿಕರು ಕಡ್ಡಾಯವಾಗಿ ಪಾಳಿಸಬೇಕು ಎಂದು ಚಂಡೀಗಢದ EV ನೀತಿ ಹೇಳುತ್ತದೆ.
ಆಡಳಿತವು ನಿಗದಿಪಡಿಸಿದ ಗುರಿಗಳು
ನೀತಿಯ ಪ್ರಕಾರ, ಮೊದಲ ವರ್ಷದಲ್ಲಿ ಇ-ದ್ವಿಚಕ್ರ ವಾಹನಗಳು ಮತ್ತು ಇ-ತ್ರಿಚಕ್ರ ವಾಹನಗಳಿಗೆ ಶೇ 35, ಸರಕುಗಳ ಇ-ತ್ರಿಚಕ್ರ ವಾಹನಗಳು ಮತ್ತು ಇ-ನಾಲ್ಕು-ಚಕ್ರ ವಾಹನಗಳಿಗೆ ಶೇ20 ಸಾಧಿಸಬಹುದಾದ ಕನಿಷ್ಠ ಗುರಿಯಾಗಿದೆ. ವೈಯಕ್ತಿಕ ಇ-ಕಾರುಗಳಿಗೆ ಈ ವರ್ಷ (ಮೊದಲ ವರ್ಷ) ಗುರಿಯನ್ನು ಶೇ 10 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಇ-ಬಸ್‌ಗಳಿಗೆ ಇದು ಶೇ 40 ರಷ್ಟು ಮತ್ತು ವಾಣಿಜ್ಯ ಇ-ಕಾರುಗಳಿಗೆ ಇದು ಶೇ 20 ರಷ್ಟಿದೆ.
ಎರಡನೇ ವರ್ಷದಲ್ಲಿ ಅಂದರೆ 2023 ರಲ್ಲಿ, ಇ-ದ್ವಿಚಕ್ರ ವಾಹನಗಳು ಮತ್ತು ಇ-ತ್ರಿಚಕ್ರ ವಾಹನಗಳ ಕನಿಷ್ಠ ಸಾಧಿಸಬಹುದಾದ ಗುರಿಯು ತಲಾ ಶೇ 70 ರಷ್ಟು ಆಗಿದ್ದರೆ, ಸರಕು ಇ-ತ್ರಿಚಕ್ರ ವಾಹನಗಳು ಮತ್ತು ಇ-ನಾಲ್ಕು ಚಕ್ರ ವಾಗನಗಳು ತಲಾ ಶೇ 40 ರಷ್ಟಿರಬೇಕು. ವೈಯಕ್ತಿಕ ಬಳಕೆಗಾಗಿ ಇ-ಕಾರ್‌ಗಳಿಗೆ ಗುರಿಯು ಶೇ 20 ಕ್ಕೆ ಹೆಚ್ಚಾಗುತ್ತದೆ, ಆದರೆ ಇ-ಬಸ್‌ಗಳಿಗೆ ಇದು ಎರಡನೇ ವರ್ಷದಲ್ಲಿ ಶೇ 50 ಕ್ಕೆ ಹೆಚ್ಚಾಗುತ್ತದೆ.


Click it and Unblock the Notifications