Ather: ಎಥರ್‌ಗೆ ಅಭಯ ನೀಡಿ ಬೃಹತ್ ಹೂಡಿಕೆ ಘೋಷಿಸಿ ಬೆನ್ನುತಟ್ಟಿದ ದೈತ್ಯ ಕಂಪನಿ
ಭಾರತದಲ್ಲಿ ಸದ್ಯ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರೇ ಮೇಲುಗೈ ಸಾಧಿಸಿದ್ದಾರೆ. ಓಲಾದಂತಹ (ಓಲಾ ಕೂಡ ಬೆಂಗಳೂರು ಮೂಲದ್ದು) ದೈತ್ಯ ಕಂಪನಿಗೆ ಪೈಪೋಟಿ ನೀಡುತ್ತಿರುವ ಎಥರ್ (Ather) ಕೂಡ ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿದೆ. ಇದೀಗ ಈ ಕಂಪನಿಗೆ ಹೀರೋ ಭರ್ಜರಿ ಹೂಡಿಕೆಯನ್ನು ಘೋಷಿಸಿದೆ.
ಹೀರೋ ಮೋಟೋಕಾರ್ಪ್ ಎಥರ್ ಎನರ್ಜಿಯಲ್ಲಿ ಹೆಚ್ಚುವರಿ ರೂ. 550 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತಾವಿತ ಹೂಡಿಕೆಯ ಮೊದಲೇ ಎಥರ್ ಎನರ್ಜಿನಲ್ಲಿ ಹೀರೋ ಮೋಟೋಕಾರ್ಪ್ ಶೇ 33.1 ರಷ್ಟು ಷೇರುಗಳನ್ನು ಹೊಂದಿದೆ. ಇದೀಗ ಹೆಚ್ಚುವರಿ ಹೂಡಿಕೆ ಘೋಷಣೆಯು ಎಥರ್‌ಗೆ ವರದಾನವಾಗಿದೆ.

ಕಂಪನಿಯ ಮಂಡಳಿಯು ಸೆಪ್ಟೆಂಬರ್ 4, 2023 ರಂದು ನಡೆದ ಸಭೆಯಲ್ಲಿ, ಎಥರ್ ಎನರ್ಜಿಯ ಹಕ್ಕುಗಳ ವಿತರಣೆಯಲ್ಲಿ ರೂ. 550 ಕೋಟಿ ವರೆಗಿನ ಹೂಡಿಕೆಯನ್ನು ಅನುಮೋದಿಸಿದೆ. ಹೂಡಿಕೆಯು ಖಚಿತವಾದ ದಾಖಲೆಗಳಿಗೆ ಒಳಪಟ್ಟಿದ್ದು, ಈ ಸ್ವರೂಪದ ವಹಿವಾಟಿಗೆ ರೂಢಿಯಲ್ಲಿರುವ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.
EV ತಯಾರಕರು ಬಹುಶಃ 2024 ರ ವೇಳೆಗೆ IPO ಅನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಸಮಯದಲ್ಲಿ ಈ ನಿಧಿಯು ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ನವಮ್ ಕ್ಯಾಪಿಟಲ್-ಬೆಂಬಲಿತ ಹೆರಾಲ್ಡ್ ಸ್ಕ್ವೇರ್ ವೆಂಚರ್ಸ್‌ನ ಭಾಗವಹಿಸುವಿಕೆಯೊಂದಿಗೆ ಎಥರ್ ಎನರ್ಜಿ ತನ್ನ ಅಸ್ತಿತ್ವದಲ್ಲಿರುವ ಹೂಡಿಕೆದಾರ ಕ್ಯಾಲಡಿಯಮ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ 50 ಮಿಲಿಯನ್ ಡಾಲರ್ ಇಕ್ವಿಟಿ ಫಂಡಿಂಗ್ ಅನ್ನು ಸಂಗ್ರಹಿಸಿತ್ತು.

ಹೊಸ ಸ್ಕೂಟರ್ ಬಿಡುಗಡೆ: ಕಳೆದ ತಿಂಗಳು, ಎಥರ್ ರೂ. 1.29 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಬೆಲೆಯ ಪ್ರವೇಶ ಮಟ್ಟದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆದ 450S ಅನ್ನು ಬಿಡುಗಡೆ ಮಾಡಿತು. ಕಂಪನಿಯು 125cc ವಿಭಾಗದಲ್ಲಿ ತನ್ನ 450S ಸ್ಕೂಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಶೇ 30 ರಿಂದ 40 ಕ್ಕೆ ದ್ವಿಗುಣಗೊಳಿಸಲು ನೋಡುತ್ತಿದೆ.
ಈ ಹೊಸ 450S ಸ್ಕೂಟರ್ 2.9 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುತ್ತದೆ, 115 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಗಂಟೆಗೆ 90 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಥರ್ ಎನರ್ಜಿ ಹೇಳಿಕೊಂಡಿದೆ. ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದ್ದು, ಕಂಪನಿಯ ಹಳೆ ಮಾದರಿಗಳಂತೆಯೇ ಡಿಸೈನ್ ಹೊಂದಿದೆ.

ಎಥರ್ ಅಸ್ತಿತ್ವದಲ್ಲಿರುವ 450X, ಈಗ ಕ್ರಮವಾಗಿ ರೂ. 1.37 ಲಕ್ಷ ಮತ್ತು ರೂ. 1.44 ಲಕ್ಷ ಬೆಲೆಯನ್ನು (ವೇರಿಯೆಂಟ್‌ಗಳಿಗೆ ಅನುಗುಣವಾಗಿ ಬೆಲೆಗಳು) ಹೊಂದಿವೆ. 115 ಕಿ.ಮೀ ಮತ್ತು 145 ಕಿ.ಮೀ ವ್ಯಾಪ್ತಿಯನ್ನು ನೀಡುತ್ತವೆ. ಇನ್ನು ಎಥರ್ ತನ್ನ ಸಾಮ್ರಾಜ್ಯವನ್ನು ದೇಶದಲ್ಲಿ ವಿಸ್ತರಿಸಲು ಹೊಸ ಕ್ರಗಳನ್ನು ಕೈಗೊಂಡಿದ್ದು, ದೇಶಾದ್ಯಂತ ಚಾರ್ಜಿಂಗ್ ನೆಟವರ್ಕ್ ಸಾಧಿಸಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನೊಂದಿಗೆ ಪಾಲುದಾರಿಕೆ ಹೊಂದಿದೆ.
ಈ ಸಹಯೋಗದ ಮೂಲಕ, ಎಥರ್ ದೇಶದಾದ್ಯಂತ 21,000 ಇಂಧನ ಕೇಂದ್ರಗಳ BPCL ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆಯಲಿದೆ. ಇದು ಎಥರ್‌ನ ಸಾರ್ವಜನಿಕ ವೇಗದ ಚಾರ್ಜಿಂಗ್ ಗ್ರಿಡ್ ಅನ್ನು ಸ್ಥಾಪಿಸಲು ಅನುಕೂಲವಾಗುತ್ತದೆ. ಎಥರ್ ಈಗಾಗಲೇ 100 ನಗರಗಳಲ್ಲಿ 1,400 ಕ್ಕೂ ಹೆಚ್ಚು ಚಾರ್ಜರ್‌ಗಳನ್ನು ಹೊಂದಿದೆ. ಇನ್ನು ಕಂಪನಿಯ ಸ್ಕೂಟರ್‌ಗಳ ಮಾರಾಟ ವಿಷಯಕ್ಕೆ ಬಂದರೆ ಈ ವರ್ಷದ ಆಗಸ್ಟ್‌ನಲ್ಲಿ ಸುಮಾರು 6,835 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications