ನಿಮ್ಮ ಬಜೆಟ್ 1.2 ಲಕ್ಷ ರೂಪಾಯಿ.. ಜನಪ್ರಿಯ ಹೋಂಡಾ ಆಕ್ಟಿವಾ Or ಎಲೆಕ್ಟ್ರಿಕ್ ಸ್ಕೂಟರ್ ಯಾವುದು ಉತ್ತಮ?
ಭಾರತದಲ್ಲಿ ಹೋಂಡಾ ಆಕ್ಟಿವಾ ಜನಪ್ರಿಯ ಸ್ಕೂಟರ್ ಆಗಿದ್ದು, ಹಲವು ದಶಕಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ ಭಾರೀ ಫೇಮಸ್ ಆಗಿದೆ. ಸದ್ಯ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಮುನ್ನೆಲೆಗೆ ಬರುತ್ತಿದ್ದು, ಅದರಲ್ಲೂ ಪೆಟ್ರೋಲ್ ದರ ಗಗನಕ್ಕೇರಿರುವುದರಿಂದ ಬಹುತೇಕರು ಇವುಗಳನ್ನು ಇಷ್ಟಪಡುತ್ತಿದ್ದಾರೆ. ಹಾಗಾದ್ರೆ, ನಿಮ್ಮ ಬಜೆಟ್ ಬೆಲೆಯಲ್ಲಿ ಯಾವುದು ಖರೀದಿಗೆ ಯೋಗ್ಯ ಇಲ್ಲಿದೆ ಮಾಹಿತಿ.
ಬೆಲೆಯಲ್ಲಿ ಯಾವುದು ಉತ್ತಮ: ಮೊದಲಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ದರದ ಬಗ್ಗೆ ಮಾತನಾಡೋಣ. ಇದು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, DLX ಹಾಗೂ ಹೆಚ್-ಸ್ಮಾರ್ಟ್. ಇವುಗಳು ರೂ.75,347 ರಿಂದ 81,348 ಬೆಲೆಯಲ್ಲಿ ಸಿಗಲಿದ್ದು, ಆನ್-ರೋಡ್ ದರ ರೂ.90 ಸಾವಿರ ಆಗಲಿದೆ. ನಿಮ್ಮ ಬಜೆಟ್ 1.2 ಲಕ್ಷ ಇದ್ದರೆ, ರೂ.30 ಸಾವಿರ ಉಳಿತಾಯವಾಗುತ್ತದೆ.

ರೂ.1.2 ಲಕ್ಷ ಬೆಲೆಗೆ ಜನಪ್ರಿಯ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳೇ ಖರೀದಿಗೆ ಸಿಗುತ್ತವೆ. ಈ ಹಣಕ್ಕೆ ಓಲಾ ಎಸ್1, ಎಥರ್ 450X, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಹಾಗೂ ಹೀರೋ ವಿಡಾ ವಿ1 ಪ್ಲಸ್, ಹಾಗೂ ವಿ1 ಪ್ರೊ ದೊರೆಯುತ್ತದೆ. ಕೆಲವು ಕಡಿಮೆ ರೇಂಜ್ ನೀಡುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನಿಮ್ಮ ಬಜೆಟ್ ಗಿಂತ ಕಮ್ಮಿ ಬೆಲೆಯಲ್ಲಿಯೇ ಲಭ್ಯವಾಗುತ್ತದೆ.
ಓಲಾ ಎಸ್1 ಏರ್ ರೂ.84,999, ಎಥರ್ 450X ರೂ.98,079, ಇತ್ತೀಚೆಗೆ ಗಿನ್ನಿಸ್ ರೆಕಾರ್ಡ್ ಮಾಡಿದ ವಿಡಾ ವಿ1 ಪ್ಲಸ್ ರೂ.1.03 ಲಕ್ಷ, ಟಿವಿಎಸ್ ಐಕ್ಯೂಬ್ ರೂ.1.06 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಬಜಾಜ್ ಚೇತಕ್ ದರಗಳು ರೂ.1.11 ಲಕ್ಷದಿಂದ ಶುರುವಾಗಲಿದೆ. ಆದರೆ, ಬೆಲೆಗೆ ಅನುಗುಣವಾಗಿ ಇವುಗಳ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬೇರೆ - ಬೇರೆಯಾಗಿರುತ್ತದೆ.
ಇಂಧನ ದಕ್ಷತೆ: ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ದರಗಳು ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಸುಮಾರು ರೂ.100 ಇದ್ದು, ಹೋಂಡಾ ಆಕ್ಟಿವಾ ಲೀ.ಗೆ 50 km ಮೈಲೇಜ್ ನೀಡುತ್ತದೆ ಅಂದುಕೊಂಡ್ರೆ, ಪ್ರತಿ ಕಿ.ಮೀಗೆ ರೂ.2 ಖರ್ಚಾಗುತ್ತದೆ. ಅದಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವೆಚ್ಚ ತುಂಬಾ ಕಡಿಮೆ. ಓಲಾ ಎಸ್1 ಪ್ರೋ, ಒಂದು ಕಿ.ಮೀ ಕ್ರಮಿಸಲು ಕೇವಲ 17 ಪೈಸೆ ಖರ್ಚಾಗುತ್ತದೆ.
ನಿರ್ವಹಣಾ ವೆಚ್ಚ: ಹೋಂಡಾ ಆಕ್ಟಿವಾ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳ ನಿರ್ವಹಣಾ ವೆಚ್ಚ ಎರಡು ವಿಭಿನ್ನವಾಗಿದೆ. ಆಕ್ಟಿವಾ ಸ್ಕೂಟರ್ ಅನ್ನು ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಿ, ಆಯಿಲ್ ಚೇಂಜ್, ಬಿಡಿ ಭಾಗಗಳ ಬದಲಾವಣೆ ಸೇರಿದಂತೆ ಕೆಲವು ಸಣ್ಣ - ಪುಟ್ಟ ರಿಪೇರಿ ಮಾಡಿಸಿದರೂ ನೀವು ಸಾವಿರಾರು ರೂಪಾಯಿ ಹಣವನ್ನು ವ್ಯಯಿಸಬೇಕು.
ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ನಿರ್ವಹಣಾ ವೆಚ್ಚವು ಅಷ್ಟಾಗಿ ಇರುವುದಿಲ್ಲ. ಆದರೆ, ಇವುಗಳ ಬ್ಯಾಟರಿಯೇ ತಲೆನೋವು ತರಬಹುದು. ಸದ್ಯ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ವಾರಂಟಿ ಅವಧಿ ಮೂರು ವರ್ಷ ಇರುತ್ತದೆ. ಅದು ಮುಗಿದ ಮೇಲೆ ಬ್ಯಾಟರಿ ವೈಪಲ್ಯವಾದರೆ, ನೀವು ನೂತನ ಬ್ಯಾಟರಿ ಪಡೆಯಬೇಕಾದರೆ, ಏನಿಲ್ಲ ಅಂದರೂ ಹೊಸ ಸ್ಕೂಟರ್ ನಷ್ಟೇ ಮೊತ್ತವನ್ನು ಪಾವತಿಸಬೇಕು.
ಇನ್ನು, ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಸೇಲ್ ಮಾಡುವುದು ತುಂಬಾ ಕಷ್ಟ. ಇದು ಆ ಸ್ಕೂಟರ್ ನ ಬ್ಯಾಟರಿ ಬಾಳಿಕೆಯನ್ನು ಆಧರಿಸಿರುತ್ತದೆ. ಆದರೆ, ಹೋಂಡಾ ಆಕ್ಟಿವಾ ಆಗಲ್ಲ. ಅದನ್ನು ಕಂಪನಿ ಗಟ್ಟಿಮುಟ್ಟಾಗಿ ನಿರ್ಮಾಣ ಮಾಡಿದ್ದು, 10 ವರ್ಷ ಬಿಟ್ಟು ಮಾರಾಟ ಮಾಡಿದರೂ ಅದರದ್ದೇ ಬೆಲೆಯನ್ನು ಹೊಂದಿರುತ್ತದೆ. ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವುದು ಉತ್ತಮವೆಂದು ನೀವೇ ತೀರ್ಮಾನಿಸಿರಿ.


Click it and Unblock the Notifications