Ather HALO Helmet: ಎಥರ್ ಹ್ಯಾಲೋ ಹೆಲ್ಮೆಟ್ ಬಿಡುಗಡೆ.. ಸುರಕ್ಷತೆಯೊಂದಿಗೆ ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು
ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇಂದು ಅದ್ದೂರಿಯಾಗಿ ಕಮ್ಯುನಿಟಿ ಡೇ (Community Day)ಯನ್ನು ಆಚರಿಸುತ್ತಿದ್ದು, ಹೊಚ್ಚ ಹೊಸ ಹ್ಯಾಲೋ ಸ್ಮಾರ್ಟ್ ಹೆಲ್ಮೆಟ್‌ನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಎಥರ್ ಎನರ್ಜಿ, ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತೆ ಮತ್ತು ಅತ್ಯುತ್ತಮ ಸೌಕರ್ಯವನ್ನು ಒದಗಿಸಲು ಸ್ಮಾರ್ಟ್ ಹೆಲ್ಮೆಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹ್ಯಾಲೋ (HALO) ಹೆಸರಿನ ಫುಲ್ ಫೇಸ್ ಹೆಲ್ಮೆಟ್‌ನ್ನು ಪರಿಚಯಿಸಿದೆ. ಇದು ರೂ.12,999 ಪರಿಚಯಾತ್ಮಕ ಬೆಲೆಯನ್ನು ಹೊಂದಿದ್ದು, ಹರ್ಮನ್ ಕಾರ್ಡನ್ (Harman Kardon) ಸಂಸ್ಥೆಯ ಆಡಿಯೋವನ್ನು ಒಳಗೊಂಡಿದೆ. ಜೊತೆಗೆ ವೇರ್‌ಡೆಟೆಕ್ಟ್ (WearDetect) ತಂತ್ರಜ್ಞಾನ ಹಾಗೂ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದಿದೆ.

ಈ ಎಥರ್ ಹ್ಯಾಲೋ ಸ್ಮಾರ್ಟ್ ಹೆಲ್ಮೆಟ್ (Ather HALO Helmet) ವಿಶೇಷತೆಯೆಂದರೆ, ಸವಾರರ ಮುಖಕ್ಕೆ ಸಂಪೂರ್ಣವಾದ ರಕ್ಷಣೆಯನ್ನು ಒದಗಿಸುತ್ತದೆ. ಸ್ಕೂಟರ್‌ನ ಹ್ಯಾಂಡಲ್‌ಬಾರ್ ಮೂಲಕ ಮ್ಯೂಸಿಕ್ (ಸಂಗೀತ) ಮತ್ತು ಕಾಲ್ (ಕರೆ) ನಿಯಂತ್ರಿಸಬಹುದು. ಹ್ಯಾಲೋ ಹೆಲ್ಮೆಟ್, ಎಥರ್ ಚಿಟ್-ಚಾಟ್ (Ather ChitChat) ಎಂಬ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಇದು ಸ್ಕೂಟರ್‌ನ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಮಾತುಕತೆ ನಡೆಸಲು ನೆರವಾಗುತ್ತದೆ.
ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲು ಈ ಹೆಲ್ಮೆಟ್‌ನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಆರಾಮದಾಯಕವಾಗಿ ಪ್ರಯಾಣಿಸಲು ನೆರೆವಾಗುತ್ತದೆ. ಹ್ಯಾಲೋ ಹೆಲ್ಮೆಟ್ ಎರಡು ಬಣ್ಣದ ಆಯ್ಕೆಗಳೊಂದಿಗೂ ಲಭ್ಯವಿದೆ. ಹೊಸ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬೂಟ್‌ನಲ್ಲಿ ನೀಡಲಾಗಿರುವ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯಿಂದಲ್ಲೂ ಹೆಲ್ಮೆಟ್‌ನ್ನು ಸುಲಭವಾಗಿ ಚಾರ್ಜ್ ಮಾಡಬಹುದಾಗಿದ್ದು, ಒಂದು ವಾರದವರೆಗೆ ಬ್ಯಾಟರಿ ಬ್ಯಾಕ್‌ಅಪ್ ಇರುತ್ತದೆ. ವೇರ್‌ಡೆಟೆಕ್ಟ್ ತಂತ್ರಜ್ಞಾನದಿಂದ ಹೆಲ್ಮೆಟ್, ಫೋನ್ ಮತ್ತು ಸ್ಕೂಟರ್‌ನ್ನು ಒಂದಕ್ಕೊಂದು ಸಂಪರ್ಕಿಸಬಹುದು.

ಎಥರ್ ಎನರ್ಜಿ ಕಂಪನಿಯು ಹ್ಯಾಲೋ ಸ್ಮಾರ್ಟ್ ಹೆಲ್ಮೆಟ್‌ನೊಂದಿಗೆ ಹ್ಯಾಲೋ ಬಿಟ್ (HALO Bit) ಅನ್ನು ಬಿಡುಗಡೆಗೊಳಿಸಿದೆ. ರೂ.4,999 ದರವನ್ನು ಹೊಂದಿರುವ ಈ ಸಾಧನ (ಮಾಡ್ಯೂಲ್)ವನ್ನು ಎಥರ್ ಹಾಫ್ ಫೇಸ್ ಹೆಲ್ಮೆಟ್‌ಗೆ ಜೋಡಿಸಬಹುದು. ಐಎಸ್ಐ ಹಾಗೂ ಡಿಒಟಿ ಮಾನ್ಯತೆ ಪಡೆದಿರುವ ನೂತನ ಕಸ್ಟಮ್ ಹಾಫ್ ಫೇಸ್ ಹೆಲ್ಮೆಟ್, ಶೀಘ್ರದಲ್ಲೇ ಎಲ್ಲ ಗ್ರಾಹಕರಿಗೆ ದೊರೆಯಲಿದೆ.
ಇದೇ ಸಮಾರಂಭದಲ್ಲಿ ಎಥರ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ನೂತನ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್, ರೂ.1,09,999 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಎಸ್ ಹಾಗೂ ಝಡ್ ಎಂಬ ರೂಪಾಂತರಗಳ ಆಯ್ಕೆಯನ್ನು ಒಳಗೊಂಡಿದ್ದು, 2.9 ಕೆಡಬ್ಲ್ಯೂಹೆಚ್ ಮತ್ತು 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿದೆ. ಸಂಪೂರ್ಣ ಚಾರ್ಜ್ ನಲ್ಲಿ 123 ರಿಂದ 160 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಎಥರ್ ಮಾರಾಟಗೊಳಿಸುವ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ರೂ.1.89 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 157 ಕಿ.ಮೀ ಓಡುತ್ತದೆ. ಎಥರ್ 450ಎಸ್ ಸ್ಕೂಟರ್ ರೂ.1.10 ಲಕ್ಷ ದರವನ್ನು ಪಡೆದಿದ್ದು, 115 ಕಿ.ಮೀ ರೇಂಜ್ ಕೊಡುತ್ತದೆ. ಎಥರ್ 450ಎಕ್ಸ್ ಸ್ಕೂಟರ್ ರೂ.1.38 - ರೂ.1.45 ಲಕ್ಷ ಬೆಲೆಯನ್ನು ಒಳಗೊಂಡಿದ್ದು, 115 - 145 ಕಿ.ಮೀ ಕ್ರಮಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








