Chetak C25: ಓಲಾ, ಎಥರ್‌ಗೆ ಸರಿಯಾದ ಪೈಪೋಟಿ: ನಿನ್ನೆ ಬಿಡುಗಡೆಯಾಗಿದೆ 'ಚೇತಕ್ ಇವಿ': ಕಮ್ಮಿ ಬೆಲೆ!
ಭಾರತದ ಪ್ರಮುಖ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಬಜಾಜ್ ಆಟೋ, ನಿನ್ನೆಯಷ್ಟೆ (14 ಜನವರಿ) ಭಾರತದಲ್ಲಿ ಬಜಾಜ್ ಚೇತಕ್ C25 (Bajaj Chetak C25) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ವಿಸ್ತರಿಸಿದೆ. ದೈನಂದಿನ ಬಳಕೆಗೆ ಹಗುರವಾದ, ಸರಳವಾದ ಮತ್ತು ಅಗ್ಗದ ಬೆಲೆಗೆ ಖರೀದಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವ ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ. ಕೇವಲ 91,399 ರೂ. (ಎಕ್ಸ್-ಶೋರೂಂ) ಬೆಲೆಗೆ ಲಭ್ಯವಿರುವ ಈ ಹೊಸ ಸ್ಕೂಟರ್ ಅತ್ಯಂತ ಕೈಗೆಟುಕುವ ಚೇತಕ್ ಇವಿ ಎಂದು ಬಜಾಜ್ ಹೇಳಿದೆ.
ಚೇತಕ್‌ನ ಸಿಗ್ನೇಚರ್ ಮೆಟಲ್ ಬಾಡಿ ಹೊಂದಿರುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್, 2.5 kWh ಬ್ಯಾಟರಿಯಿಂದ ಚಾಲಿತವಾಗಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿ 113 ಕಿ.ಮೀವರೆಗೆ ಓಡಿಸಬಹುದು. ಪ್ರಸ್ತುತ ಭಾರತದಾದ್ಯಂತ ಚೇತಕ್‌ನ ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಈಗ ಖರೀದಿಗೆ ಲಭ್ಯವಿದ್ದು, ವಿಶಿಷ್ಟವಾದ ಸ್ಟ್ರೀಟ್ ಆರ್ಟ್‌ನಿಂದ ಪ್ರೇರಿತವಾದ ಗ್ರಾಫಿಕ್ಸ್‌ನೊಂದಿಗೆ ಆರು ರೋಮಾಂಚಕ ಬಣ್ಣಗಳಲ್ಲಿ ಸಿಗುತ್ತದೆ.

ಪರ್ಫಾಮೆನ್ಸ್‌ನಲ್ಲೂ ಉತ್ತಮವಾಗಿದ್ದು, ಈ ಸ್ಕೂಟರ್ ಗಂಟೆಗೆ 55 ಕಿ.ಮೀ ಟಾಪ್ ಸ್ಪೀಡ್ ಮತ್ತು ಕೇವಲ 2.25 ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ. ಇದರ ಘನ ನಿರ್ಮಾಣ ಮತ್ತು ಚುರುಕಾದ ನಿರ್ವಹಣೆಯು, ದಟ್ಟವಾದ ಸಂಚಾರ ಮತ್ತು ಬಿಗಿಯಾದ ನಗರ ಸ್ಥಳಗಳ ಮೂಲಕ ಸುಲಭವಾಗಿ ಚಲಿಸುವಂತೆ ಮಾಡುತ್ತದೆ. ಇಂಧನ ಚಾಲಿತ ಸ್ಕೂಟರ್‌ಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆಗೆ ವಾಲುತ್ತಿರುವವರಿಗೆ ಚೇತಕ್ C25 ಬೆಸ್ಟ್ ಆಯ್ಕೆಯಾಗಿದೆ.
ದೈನಂದಿನ ನಗರ ಬಳಕೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಈ ಸ್ಕೂಟರ್ 25-ಲೀಟರ್ ಬೂಟ್ ಜಾಗವನ್ನು ನೀಡುವ ಮೂಲಕ ಹೆಚ್ಚುವರಿ ಸರಕುಗಳನ್ನು ಸಾಗಿಸಲು ಅನುಕೂಲತೆ ನೀಡುತ್ತದೆ. ಕುಟುಂಬಸ್ಥರು, ಯುವಕರು, ಮಹಿಳೆಯರು ಮತ್ತು ಯುವ ದಂಪತಿಗಳು ಸೇರಿದಂತೆ ಭಾರತದಲ್ಲಿ ಪ್ರತಿಯೊಬ್ಬರಿಂದ ಬಲವಾದ ಸ್ವೀಕಾರವನ್ನು ಪಡೆಯುವುದು ಖಚಿತ ಎಂದು ಬಜಾಜ್ ವಿಶ್ವಾಸ ವ್ಯಕ್ತಪಡಿಸಿದೆ.

ಬಜಾಜ್ ಚೇತಕ್ C250i ಫ್ಲೋರ್‌ಬೋರ್ಡ್-ಮೌಂಟೆಡ್ 2.5kWh ಬ್ಯಾಟರಿಯನ್ನು 750W ಆಫ್‌ಬೋರ್ಡ್ ಚಾರ್ಜರ್‌ನಿಂದ ಚಾರ್ಜ್ ಮಾಡಬಹುದು. ಇದು ಬ್ಯಾಟರಿಯನ್ನು ಶೇ100 ರಷ್ಟು ಚಾರ್ಜ್ ಮಾಡಲು ಸುಮಾರು 3 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬಜಾಜ್ 3 ವರ್ಷಗಳು ಅಥವಾ 50,000 ಕಿ.ಮೀ ಬ್ಯಾಟರಿ ವಾರೆಂಟಿಯನ್ನು ನೀಡುತ್ತಿದೆ.
ಪ್ರಸ್ತುತ ಪ್ಲಾಸ್ಟಿಕ್ ಮತ್ತು ಫೈಬರ್ ಮೆಟೀರಿಯಲ್‌ಗಳಿಂದ ನಿರ್ಮಾಣವಾಗಿರುವ ಸ್ಕೂಟರ್‌ಗಳಿಗಿಂತ ಭಿನ್ನವಾಗಿ ಹೊಸ ಬಜಾಜ್ ಚೇತಕ್ C25 ನಯವಾದ, ರೆಟ್ರೋ-ಕ್ಲಾಸಿಕ್ ಡಿಸೈನ್‌ನೊಂದಿಗೆ ಪ್ರೀಮಿಯಂ ಮೆಟಲ್ ಬಾಡಿ, ಸಿಗ್ನೇಚರ್ DRL ಹೆಡ್‌ಲ್ಯಾಂಪ್, ಜಾಯಿಂಟ್‌ಗಳಿಲ್ಲದ ಮೊನೊ - ಬಾಡಿ ನಿರ್ಮಾಣ ಮತ್ತು ರೋಮಾಂಚಕ ಬಣ್ಣ ಆಯ್ಕೆಗಳು, ಸ್ಕೂಟರ್‌ಗೆ ಸ್ವಚ್ಛ ಮತ್ತು ವಿಶಿಷ್ಟವಾದ ಪ್ರೀಮಿಯಂ ಲುಕ್ ನೀಡುತ್ತವೆ.

ಈ ಸ್ಕೂಟರ್ ಮೊದಲ ಬಾರಿಯ EV ಖರೀದಿದಾರರು ಮತ್ತು ದೈನಂದಿನ ನಗರ ಪ್ರಯಾಣಕ್ಕಾಗಿ ತಮ್ಮ ಮನೆಗಳಿಗೆ ಎರಡನೇ ಸ್ಕೂಟರ್ ಅನ್ನು ಖರೀದಿಸಲು ನೋಡುತ್ತಿರುವವರಿಗೆ ಬಲವಾದ ಆಯ್ಕೆಯಾಗಿದೆ. ದೈನಂದಿನ ಕೆಲಸಗಳಿಗೆ ಅಥವಾ ಒಂದು ಕುಟುಂಬಕ್ಕೆ ಒಂದು ವಾರದ ದಿನಸಿ ವಸ್ತುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ಹಿಲ್ ಹೋಲ್ಡ್ ಅಸಿಸ್ಟ್, ಗೈಡ್ ಮಿ ಹೋಮ್ ಮತ್ತು ಡಿಸ್ಕ್ ಬ್ರೇಕ್‌ಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಸುಲಭ ನಗರ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಚೇತಕ್ C25, ಬ್ರಾಂಡ್‌ಗೆ ಸಣ್ಣ ಸ್ಕೂಟರ್ ಆಗಿದ್ದರೂ ದೃಢತೆ ಮತ್ತು ವಿಶ್ವಾಸಾರ್ಹತೆಯಲ್ಲಿ ದೊಡ್ಡದಾಗಿದೆ. ಇದು ಹಗುರವಾದ, ಸುಲಭವಾದ ಸವಾರಿ ಅನುಭವವನ್ನು ನೀಡುತ್ತದೆ, ದೈನಂದಿನ ಪ್ರಯಾಣವನ್ನು ಸುಲಭವಾಗಿಸುತ್ತದೆ. ಇದರ ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಆಧುನಿಕ ಫಿಚರ್ಸ್ ಎಂಥವರನ್ನೂ ಸೆಳೆಯಲಿದೆ ಎಂದು ಬಜಾಜ್ ಗ್ಯಾರೆಂಟಿ ನೀಡಿದೆ.


Click it and Unblock the Notifications








