TVS Jupiter 110 Review: ಟಿವಿಎಸ್ ಜುಪಿಟರ್ 110 ಸ್ಕೂಟರ್ ರಿವ್ಯೂ.. ಅಬ್ಬರ ಶತಸಿದ್ಧ!
ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಖ್ಯಾತಿಗಳಿಸಿದ್ದು, ವಿವಿಧ ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸಾಮಾನ್ಯ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ದಿನನಿತ್ಯದ ಬಳಕೆಗಾಗಿ ಹೊಚ್ಚ ಹೊಸ 2024ರ ನವೀಕರಿಸಿದ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಗುರುವಾರ ಬಿಡುಗಡೆ ಮಾಡಿದೆ. ಇದು ನವೀನವಾದ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ನಮಗೆ ಈ ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ಟೆಸ್ಟ್ ಡ್ರೈವ್ (ಪ್ರಾಯೋಗಿಕ ಚಾಲನೆ) ಮಾಡಲು ಅವಕಾಶ ದೊರೆಯಿತು. ಬನ್ನಿ.. ಹೇಗಿದೆ ಎಂಬುದನ್ನು ತಿಳಿಯೋಣ.
ವಿನ್ಯಾಸ & ನೋಟ: ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್ ಉತ್ತಮವಾದ ವಿನ್ಯಾಸ ಪಡೆದಿದ್ದು, ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿದೆ. ಇದರ ಅತ್ಯಾಧುನಿಕ ನೋಟ ಪ್ರತಿಯೊಬ್ಬರನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಸವಾರರ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ವಿನ್ಯಾಸಗೊಳಿಸಿದಂತೆ ಭಾಸವಾಗುತ್ತದೆ.

ಈ ಟಿವಿಎಸ್ ಜುಪಿಟರ್ 110 ಹ್ಯಾಂಡಲ್‌ಬಾರ್‌ಗಳು ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸುತ್ತವೆ. ಫ್ಲೋರ್‌ಬೋರ್ಡ್ ಕೂಡ ಅತ್ಯುತ್ತಮವಾಗಿದೆ. ಪ್ರತಿಯೊಬ್ಬ ಸವಾರರು ಸುಲಭವಾಗಿ ಓಡಾಡಲು ಸಾಧ್ಯವಾಗುವಂತೆ ಸೀಟ್‌ನ್ನು (ಆಸನ) ಸಿದ್ದಪಡಿಸಲಾಗಿದೆ. ಸ್ಕೂಟರ್ ಮೇಲಿರುವ ಪಿಯಾನೋ ಬ್ಲಾಕ್ ಫಿನಿಶ್ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್) ಹೊಸದಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್ ಮತ್ತು ವಿಶಾಲವಾದ (ವೈಡ್) ಎಲ್ಇಡಿ ಡಿಆರ್‌ಎಲ್‌ನ್ನು ಪಡೆದಿದೆ.
ನೂತನ ಜುಪಿಟರ್ 110 ಹಿಂಭಾಗವು (ರೇರ್) ಆಕರ್ಷಕ ವಿನ್ಯಾಸ ಒಳಗೊಂಡಿದ್ದು, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಲೈಟ್ ಹೊಂದಿರುವ ಎಲ್ಇಡಿ ಲೈಟ್ ಬಾರ್‌ನ್ನು ಒಳಗೊಂಡಿದೆ. ಪುಲ್-ಡಿಜಿಟಲ್ ಕಲರ್ ಎಲ್‌ಸಿಡಿ ಸ್ಪೀಡೋಮೀಟರ್ ಹೊಂದಿದೆ. ಇದು ಸ್ಮಾರ್ಟ್ ಅಲರ್ಟ್, ರಿಯಲ್ ಟೈಮ್ ಮೈಲೇಜ್, ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸುತ್ತದೆ. ಡಾನ್ ಬ್ಲೂ, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ ಮತ್ತು ಸ್ಟಾರ್ಲೈಟ್ ಬ್ಲೂ ಗ್ಲೋಸ್ ಒಳಗೊಂಡಂತೆ 6 ಬಣ್ಣಗಳೊಂದಿಗೂ ಸಿಗುತ್ತದೆ.

ವಿಶೇಷತೆಗಳು: 2024ರ ಟಿವಿಎಸ್ ಜುಪಿಟರ್ 110 ಸ್ಕೂಟರ್ ಐಗೋ ಅಸಿಸ್ಟ್ (iGO Assist) ಎಂಬ ವಿಶಿಷ್ಟವಾದ ತಾಂತ್ರಿಕತೆಯೊಂದಿಗೆ 113 ಸಿಸಿ ಸಿಂಗಲ್-ಸಿಲಿಂಡರ್ ಫೋರ್-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 5.9 ಕೆಡಬ್ಲ್ಯೂ ಗರಿಷ್ಠ ಶಕ್ತಿ (ಪವರ್) ಮತ್ತು 9.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಈ ಐಗೋ ಅಸಿಸ್ಟ್ ಇಲ್ಲದ ರೂಪಾಂತರಗಳು (ವೇರಿಯೆಂಟ್) 9.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿವೆ.
ಹಿಂದಿನ ಜುಪಿಟರ್ ಮಾದರಿಗೆ (ಮಾಡೆಲ್) ಹೋಲಿಕೆ ಮಾಡಿದರೆ, ನೂತನ ಸ್ಕೂಟರ್‌ನ ಮೈಲೇಜ್ ಶೇಕಡ 10% ಸುಧಾರಣೆಯಾಗಿದ್ದು, ಹೆಚ್ಚಿನ ದೂರವನ್ನು ಕ್ರಮಿಸಬಲ್ಲದು. ಇದು ಹೊಸದಾದ ಐಗೋ ಅಸಿಸ್ಟ್ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಐಗೋ ಅಸಿಸ್ಟ್ ಎಂಬುದು ಆಟೋ ಸ್ಟಾರ್ಟ್-ಸ್ಟಾಪ್ ಫಂಕ್ಷನಾಲಿಟಿ ಹಾಗೂ ಐಎಸ್‌ಜಿ (ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್) ಅನ್ನು ಇಂಟೆಲಿಜೆಂಟ್ ಇಗ್ನಿಷನ್ ಸಿಸ್ಟಮ್ ಜೊತೆಯಲ್ಲಿ ಬೆಸೆಯುತ್ತದೆ. ಪರಿಣಾಮ ಬ್ಯಾಟರಿಯ ಶಕ್ತಿ (ಪವರ್) ಬಳಸಿಕೊಂಡು ಕಾರ್ಯಕ್ಷಮತೆಯನ್ನು (ಪರ್ಫಾಮೆನ್ಸ್) ಹೆಚ್ಚಿಸುತ್ತದೆ.

ಇದರೊಟ್ಟಿಗೆ ಈ ಸ್ಕೂಟರ್ ಪೇಟೆಂಟ್ ಪಡೆದ ಇ-ಝಡ್ ಸೆಂಟರ್ ಸ್ಟ್ಯಾಂಡ್, ಯುಎಸ್‌ಬಿ ಮೊಬೈಲ್ ಚಾರ್ಜರ್, 2-ಲೀಟರ್ ಗ್ಲೋವ್ ಬಾಕ್ಸ್, 33-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸೋರೇಜ್ ಅನ್ನು ಒಳಗೊಂಡಿದೆ. ನೂತನವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ರಾತ್ರಿ ವೇಳೆಯಲ್ಲಿ ಸುರಕ್ಷಿತ ಚಾಲನೆಗೆ ನೆರವಾಗುತ್ತದೆ. ಮುಂಭಾಗದಲ್ಲಿಯೇ ಫ್ಯುಯೆಲ್ ಫಿಲ್ಲರ್ ಇರುವುದರಿಂದ ಸೀಟ್‌ನ್ನು ಎತ್ತದೆಯೇ ಪೆಟ್ರೋಲ್ ತುಂಬಿಸಬಹುದು.
ಚಾಲನಾ ಅನುಭವ: 2024ರ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್‌ನ್ನು ಓಡಿಸುವ ನಮಗೆ ಅದ್ಭುತವಾದ ಅನುಭವ ದೊರೆಯಿತು. ಈ ಸ್ಕೂಟರ್ ಎಲ್ಲ ವಿಧದ ರಸ್ತೆಗಳಲ್ಲಿ ಸುಲಭವಾಗಿ ಚಲಿಸಿತು. ಸಸ್ಪೆಷನ್ ಸೆಟಪ್ ಉತ್ತಮವಾಗಿ ಕಾರ್ಯನಿರ್ವಹಿಸಿತು. ಇದು ಉಬ್ಬು-ತಗ್ಗು ಹಾಗೂ ಹಳ್ಳಿ-ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿಯೂ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಿತು. ಬ್ರೇಕ್‍ಗಳು ಕೂಡ ಸರಿಯಾಗಿ ಕೆಲಸ ಮಾಡಿದವು. ಆಸನವು ಹೆಚ್ಚು ಆರಾಮದಾಯಕವಾಗಿದ್ದು, ಲೀಲಾಜಾಲವಾಗಿ ಬಹುದೂರ ಸಾಗಬಹುದು.

ಈ ಸ್ಕೂಟರ್ ಎಂಜಿನ್ ಸುಗಮವಾಗಿ ಕೆಲಸ ಮಾಡುತ್ತದೆ. ಜೊತೆಗೆ ಉತ್ತಮವಾದ ಇಂಧನ ದಕ್ಷತೆಯನ್ನು (ಫ್ಯುಯೆಲ್ ಎಫಿಷಿಯೆನ್ಸಿ) ಹೊಂದಿದೆ. ಬಾಡಿ ಬ್ಯಾಲೆನ್ಸ್ ಟೆಕ್ನಾಲಜಿ 2.0 ಇರುವುದರಿಂದ ವೇಗ ಕಡಿಮೆ ಇದ್ದರೂ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಗಲಿದ್ದು, ಸ್ಕೂಟರ್‌ನ್ನು ಓಡಿಸುವವರಿಗೆ ವಿಶ್ವಾಸವನ್ನು ಹೆಚ್ಚಿಸುತ್ತದೆ. ಟೈರ್‌ಗಳು ಸಹ ಉತ್ತಮವಾಗಿವೆ.
ಕೊನೆ ಮಾತು: ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ನಿಮ್ಮ ಆಯ್ಕೆಯ ದ್ವಿಚಕ್ರ ವಾಹನವಾಗಿ ಆಯ್ದುಕೊಳ್ಳಬಹುದು. ಈ ಸ್ಕೂಟರ್ ರೂ.73,700 ದಿಂದ ರೂ.87,250 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಡ್ರಮ್, ಡ್ರಮ್ ಅಲಾಯ್, ಡ್ರಮ್ ಎಸ್‌ಎಕ್ಸ್‌ಸಿ ಹಾಗೂ ಡಿಸ್ಕ್ ಎಸ್‌ಎಕ್ಸ್‌ಸಿ ಎಂಬ 4 ರೂಪಾಂತರಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








