ಹೊಸ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಮಹೀಂದ್ರಾ
ಆಟೋ ಉದ್ಯಮದಲ್ಲಿನ ಭಾರೀ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹಿನ್ನಡೆ ಅನುಭವಿಸಿವೆ. ಮಹೀಂದ್ರಾ ಕೂಡಾ ಹೊಸ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ವಾಹನಗಳ ಉತ್ಪಾದನೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಕಳೆದ ಒಂದು ದಶಕದ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನೇ ತಾತ್ಕಲಿಕವಾಗಿ ಬಂದ್ ಮಾಡುತ್ತಿವೆ. ಇದೀಗ ಮಹೀಂದ್ರಾ ಕೂಡಾ ತಾತ್ಕಲಿಕವಾಗಿ ಹೊಸ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಆರ್ಥಿಕವಾಗಿ ಹೊರೆಯಾಗುತ್ತಿರುವ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ನಿರ್ಣಯ ಕೈಗೊಂಡಿದೆ.

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ಇದರಿಂದ ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದು, ಮಹೀಂದ್ರಾ ಸಂಸ್ಥೆಯು ಅಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 14 ದಿನಗಳ ಕಾಲ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಇನ್ನು ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಕೆಲ ತಿಂಗಳಿನಿಂದ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಪರದಾಡುವಂತಾಗಿದೆ. ಈ ಹಿನ್ನೆಲೆ ಹೊಸ ವಾಹನಗಳ ಉತ್ಪಾದನೆಯು ಕುಂಟುತ್ತಾ ಸಾಗಿದ್ದು, ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ತಾತ್ಕಾಲಿಕವಾಗಿ ಹೊಸ ವಾಹನಗಳ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿವೆ.

ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಪ್ರಮುಖ ಮೂರು ಕಾರು ಉತ್ಪಾದನಾ ಘಟಕಗಳಲ್ಲಿನ ಹೊಸ ಕಾರು ಉತ್ಪಾದನಾ ಪ್ರಮಾಣವನ್ನು ಕಡಿತಗೊಳಿಸಲಾಗಿದ್ದು, ಮೂರು ಶಿಫ್ಟ್‌ಗಳಲ್ಲಿ ನಡೆಯುತ್ತಿದ್ದ ಹೊಸ ಕಾರು ಉತ್ಪಾದನೆಯನ್ನು ಕೇವಲ ಒಂದು ಶಿಫ್ಟ್‌ಗೆ ತಗ್ಗಿಸಲಾಗಿದೆ.
MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಮನೆಸಾರ್, ಗುರುಗ್ರಾಮ್ ಮತ್ತು ಗುಜರಾತ್‌ನಲ್ಲಿ ಮೂರು ಘಟಕಗಳಲ್ಲೂ ತಲಾ ಒಂದೊಂದು ಶಿಫ್ಟ್‌ನಲ್ಲಿ ಮಾತ್ರವೇ ಕಾರು ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಸಾವಿರಾರು ಗುತ್ತಿಗೆ ಆಧಾರದ ಮೇಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.
MOST READ: ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

2018ರ ಮೇ ಅವಧಿಯಲ್ಲಿ ದೇಶಾದ್ಯಂತ 3,01,238 ಹೊಸ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಅದೇ 2019ರ ಮೇ ಅವಧಿಯಲ್ಲಿ 2,39,347 ಹೊಸ ಪ್ಯಾಸೆಂಜರ್ ವಾಹನಗಳು ಮಾತ್ರವೇ ಮಾರಾಟವಾಗುವ ಮೂಲಕ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಇದಲ್ಲದೇ ಜೂನ್ ಮತ್ತು ಜುಲೈ ಅವಧಿಯಲ್ಲೂ ಕೂಡಾ ಶೇ.20 ರಷ್ಟು ಹೊಸ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದಿದ್ದು, ಹೊಸ ವಾಹನ ಮಾರಾಟವಿಲ್ಲದೇ ಬಹುತೇಕ ಕಾರು ಮಾರಾಟಗಾರರು ತಮ್ಮ ಅಧಿಕೃತ ಮಾರಾಟ ಮಳಿಗೆಗಳ ಕದಮುಚ್ಚುತ್ತಿದ್ದಾರೆ.

2017ರಿಂದ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ನಿರಂತರವಾಗಿ ಸಾಕಷ್ಟು ಬದಲಾವಣೆಗಳು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದ್ದು, ಇದು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.


Click it and Unblock the Notifications