ಭಾರತದಿಂದ ಬರೋಬ್ಬರಿ 73 ಸಾವಿರ ಕಾರುಗಳನ್ನು ರಫ್ತು ಮಾಡಲಿವೆ ನಿಸ್ಸಾನ್ ಮತ್ತು ದಟ್ಸನ್
ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಮತ್ತು ಅಂಗಸಂಸ್ಥೆಯಾದ ದಟ್ಸನ್ ಸಂಸ್ಥೆಯು ಭಾರತದಿಂದ ಭಾರೀ ಪ್ರಮಾಣದಲ್ಲಿ ಹೊಸ ಕಾರುಗಳನ್ನು ರಫ್ತುಗೊಳಿಸಲು ಸಿದ್ದವಾಗಿದ್ದು, ನಿಸ್ಸಾನ್ ಸನ್ನಿ ಸೆಡಾನ್ ಮತ್ತು ದಟ್ಸನ್ ಗೋ, ಗೋ ಪ್ಲಸ್ ಕಾರುಗಳಿಗೆ ವಿದೇಶಿ ಮಾರುಕಟ್ಟೆಗಳಿಂದ ಭಾರೀ ಬೇಡಿಕೆ ಹರಿದುಬಂದಿದೆ.

ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಿದ್ದವಾಗಿರುವ ಹೊಸ ಕಾರುಗಳು ಇದೀಗ ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡುತ್ತಿದ್ದು, ನಿಸ್ಸಾನ್ ಸನ್ನಿ ಮತ್ತು ದಟ್ಸನ್ ಗೋ, ಗೋ ಪ್ಲಸ್ ಕಾರುಗಳೂ ಇದೀಗ ಬೇಡಿಕೆ ಸೃಷ್ಠಿಯಾಗುತ್ತಿದೆ. ಹೀಗಾಗಿ ಮುಂದಿನ 14 ತಿಂಗಳಿಗೆ ಯೋಜನೆ ರೂಪಿಸಿರುವ ನಿಸ್ಸಾನ್ ಸಂಸ್ಥೆಯು 65 ಸಾವಿರ ಸನ್ನಿ ಸೆಡಾನ್ ಕಾರುಗಳನ್ನು ಮತ್ತು 8 ಸಾವಿರ ದಟ್ಸನ್ ಗೋ, ಗೋ ಪ್ಲಸ್ ಕಾರುಗಳನ್ನು ಅಂತರಾಷ್ಟ್ರಿಯ ಮಾರುಕಟ್ಟೆಗಳಿಗೆ ರಫ್ತು ಕೈಗೊಳ್ಳಲಿದೆ.

ಇದೇ ತಿಂಗಳಾಂತ್ಯಕ್ಕೆ ಹೊಸ ಕಾರುಗಳ ರಫ್ತು ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಹೊಸ ಕಾರುಗಳು ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿವೆ.

ನಿಸ್ಸಾನ್ ಸನ್ನಿ ಕಾರಿಗೆ ದಕ್ಷಿಣ ಆಫ್ರಿಕಾ, ಬ್ರೆಜಿಲ್, ಇಂಡೋನೆಷ್ಯಾ, ನೇಪಾಳ ಮತ್ತು ಮಧ್ಯಪ್ರಾಚ್ಯ ದೇಶಳಾದ ಇರಾನ್, ಈಜಿಫ್ಟ್ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯಿದ್ದು, ಇದರೊಂದಿಗೆ ಇದೇ ಮೊದಲ ಬಾರಿಗೆ ದಟ್ಸನ್ ನಿರ್ಮಾಣದ ಗೋ ಮತ್ತು ಗೋ ಪ್ಲಸ್ ಕಾರುಗಳಿಗೂ ಬೇಡಿಕೆ ಹೆಚ್ಚಿದೆ.

ನಿಸ್ಸಾನ್ ಸಂಸ್ಥೆಯು ಈಗಾಗಲೇ ಸನ್ನಿ ಕಾರಿನ ಬಿಡಿಭಾಗಗಳು ಮತ್ತು ಎಂಜಿನ್ ರಫ್ತು ಪ್ರಕ್ರಿಯೆಯನ್ನು ಈ ಹಿಂದೆ 2015ರಲ್ಲೇ ಆರಂಭಿಸಿದ್ದು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲಿಯೇ ಅಭಿವೃದ್ದಿಗೊಳಿಸಿ ರಫ್ತು ಕೈಗೊಳ್ಳುತ್ತಿದೆ. ಜೊತೆಗೆ ನಿಸ್ಸಾನ್ ಸಂಸ್ಥೆಯು ಇತರೆ ರಾಷ್ಟ್ರಗಳಲ್ಲಿನ ಕಾರು ಉತ್ಪಾದನೆಗಿಂತಲೂ ಭಾರತಲ್ಲೇ ಕಾರು ಉತ್ಪಾದನೆ ಪ್ರಕ್ರಿಯೆ ಅಗ್ಗ ಎನ್ನುವುದನ್ನು ಅರಿತುಗೊಂಡಿದ್ದು, ಎಷ್ಯಾದ ಪ್ರಮುಖ ಮಾರುಕಟ್ಟೆಗಳಿಗೆ ಭಾರತದಿಂದಲೇ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ.

ಕಳೆದ ಬರೋಬ್ಬರಿ 1.82 ಲಕ್ಷ ಯುನಿಟ್ ಕಾರುಗಳನ್ನು ರಫ್ತು ಮಾಡಿದ್ದ ನಿಸ್ಸಾನ್ ಸಂಸ್ಥೆಯು ಈ ಬಾರಿ 2.20 ಲಕ್ಷ ಯನಿಟ್ ಕಾರುಗಳ ಮಾರಾಟ ಗುರಿಹೊಂದಿದ್ದು, ಭಾರತೀಯ ಆಟೋಉದ್ಯಮವನ್ನು ತಲ್ಲಣಗೊಳಿಸಿರುವ ಆರ್ಥಿಕ ಹಿಂಜರಿತದಿಂದ ಯಾವುದೇ ಸಂಕಷ್ಟಕ್ಕೆ ಒಳಗಾಳಗದೇ ವಿದೇಶಿ ಮಾರುಕಟ್ಟೆಗಳಲ್ಲಿನ ಕಾರು ಬೇಡಿಕೆಯತ್ತ ಗಮನಹರಿಸಿದೆ.

ಚೆನ್ನೈ ಬಳಿಯಿರುವ ನಿಸ್ಸಾನ್ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 4 ಲಕ್ಷ ಕಾರುಗಳ ಉತ್ಪಾದನಾ ಸಾಮಾರ್ಥ್ಯವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಉತ್ಪಾದನೆಗೊಳ್ಳುತ್ತಿರುವ ಕೆಲವು ಜನಪ್ರಿಯ ಕಾರುಗಳನ್ನು ಭಾರತದಿಂದಲೇ ಉತ್ಪಾದನೆ ಮಾಡಲು ಮುಂದಾಗಿದೆ.
MOST READ: ಪ್ರಧಾನಿ ಮೋದಿ ಪ್ರಯಾಣಕ್ಕೆ ಮತ್ತೊಂದು ದುಬಾರಿ ಕಾರು ಖರೀದಿ..!

ಭಾರತದಲ್ಲಿ ಹೊಸ ಕಾರುಗಳ ಉತ್ಪಾದನೆಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಬಿಡಿಭಾಗಗಳು ಮತ್ತು ಹೇರಳವಾದ ಮಾನವ ಸಂಪನ್ಮೂಲವು ವಿದೇಶಿ ಆಟೋ ಸಂಸ್ಥೆಗಳನ್ನು ಸೆಳೆಯುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಸಂಸ್ಥೆಗಳು ಸಹ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿ ಭಾರೀ ಪ್ರಮಾಣದಲ್ಲಿ ಹೊಸ ವಾಹನಗಳ ಮಾರಾಟಕ್ಕೆ ಮುಂದಾಗಿವೆ.
MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಇನ್ನು ನಿಸ್ಸಾನ್ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಗೆ ಬಿಎಸ್-6 ನಿಯಮಕ್ಕೆ ಸರಿಸಮನಾದ ಯುರೋ-6 ನಿಯಮಗಳೊಂದಿಗೆ ಹೊಸ ಕಾರುಗಳನ್ನು ರಫ್ತು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಭಾರತದಲ್ಲೂ ಬಿಎಸ್-6 ಕಾರುಗಳ ಮಾರಾಟಕ್ಕೆ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಿದೆ.


Click it and Unblock the Notifications