ಲಾಕ್‌ಡೌನ್ ಸಂಕಷ್ಟ: ಫೇಮ್-2 ಯೋಜನೆಯ ಸಬ್ಸಡಿ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
ಮಹಾಮಾರಿ ವೈರಸ್‌ನಿಂದಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಆಟೋ ಉತ್ಪಾದನಾ ವಲಯ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಈ ಹಿನ್ನಲೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಹಲವಾರು ವಿನಾಯ್ತಿ ಘೋಷಣೆ ಮಾಡಿವೆ.

ಆಟೋ ಉತ್ಪಾದನಾ ವಲಯಕ್ಕೆ ನೀಡಲಾಗಿರುವ ವಿನಾಯ್ತಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ನೀಡಲಾಗುವ ಫೇಮ್-2 ಯೋಜನೆಯ ಸಬ್ಸಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2019-20ರ ಆರ್ಥಿಕ ವರ್ಷದ ಫೇಮ್-2 ಸಬ್ಸಡಿ ಅವಧಿಯು ಮಾರ್ಚ್‌ಗೆ ಅಂತ್ಯಗೊಳ್ಳಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸಿದ್ದರಿಂದ ಇದೀಗ ಸಬ್ಸಡಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಹೊಸ ಸುತ್ತೋಲೆ ಪ್ರಕಾರ, ವಿಸ್ತರಣೆಗೊಂಡ ಫೇಮ್-2 ಸಬ್ಸಡಿಯು ಜುಲೈ 1ರಿಂದ ಸೆಪ್ಟೆಂಬರ್ 30ರ ತನಕ ಅನ್ವಯವಾಗಲಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಆಟೋ ಕಂಪನಿಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೂ ಈ ಹೊಸ ಯೋಜನೆ ಅಡಿ ಸಬ್ಸಡಿ ಲಭ್ಯವಿರುತ್ತದೆ.

ಭಾರತವು ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ಕ್ಕೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದ್ದು, ಭವಿಷ್ಯದ ಗುರಿಗಾಗಿ ಈಗಿನಿಂದಲೇ ಹಲವಾರು ಕಠಿಣ ಕ್ರಮಗಳ ಮೂಲಕ ಹಂತ-ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಖರೀದಿದಾರರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್-2 ಯೋಜನೆ ಅಡಿ ಈಗಾಗಲೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗಾಗಿ(2019-21) ರೂ. 10 ಸಾವಿರ ಕೋಟಿ ವಿನಿಯೊಗಿಸುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯು ಮತ್ತೊಂದು ಹಂತದ ಬೆಳವಣಿಗೆ ಕಾರಣವಾಗಲಿದೆ.

ಫೇಮ್-2 ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುವ ಆಟೋ ಕಂಪನಿಗಳಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಸಬ್ಸಡಿ, ತೆರಿಗೆ ವಿನಾಯ್ತಿ, ಅತಿ ಕಡಿಮೆ ಜಿಎಸ್‌ಟಿ ಸೌಲಭ್ಯಗಳನ್ನು ನೀಡುತ್ತಿರುವುದು ಗ್ರಾಹಕರ ಆಕರ್ಷಣೆಯಾಗಿದೆ.

ಇದರಿಂದ ಮುಂಬರುವ ಐದು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಶೇ.30ರಿಂದ ಶೇ.40ರಷ್ಟು ಬೆಳವಣಿಗೆ ಸಾಧಿಸುವ ಎಲ್ಲಾ ಸಾಧ್ಯತೆಗಳಿದ್ದು, ಎಲೆಕ್ಟ್ರಿಕ್ ವಾಹನಗನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ದಿಗೊಳಿಸಿ ಮಾರಾಟ ಮಾಡುವಂತೆ ವಿವಿಧ ಯೋಜನೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸದ್ಯ ಪ್ರಮುಖ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದ ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು ಮತ್ತು ಬ್ಯಾಟರಿ ಸೌಲಭ್ಯವನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಹಲವು ಕಂಪನಿಗಳು ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆ ಮಾಡುವ ಯೋಜನೆ ಹೊಂದಿವೆ.

ಇದಕ್ಕೆ ಪೂರಕವಾಗಿ ಆಟೋ ಕಂಪನಿಗಳಿಗೆ ಖಡಕ್ ವಾರ್ನ್ ಮಾಡಿರುವ ಕೇಂದ್ರ ಸರ್ಕಾರವು ಚೀನಿ ಕಂಪನಿಗಳ ಬಿಡಿಭಾಗಗಳಿಗೆ ಹೆಚ್ಚು ಅವಲಂಬನೆಯಾಗದಂತೆ ಎಚ್ಚರಿಸಿದ್ದು, ಭವಿಷ್ಯದ ಯೋಜನೆಗಳಿಗಾಗಿ ಭಾರತದಲ್ಲೇ ನಿರ್ಮಾಣದ ಬಿಡಿಭಾಗಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಸದ್ಯ ಭಾರತದಲ್ಲಿ ಉತ್ಪಾದನೆಯಾಗುವ ಬಹುತೇಕ ಎಲೆಕ್ಟ್ರಿಕ್ ವಾಹನಗಳಲ್ಲಿ ಶೇ. 60ರಿಂದ ಶೇ.80 ರಷ್ಟು ಪ್ರಮಾಣದಲ್ಲಿ ಚೀನಿ ಕಂಪನಿಗಳ ಬಿಡಿಭಾಗಗಳೇ ಹೆಚ್ಚು ಬಳಕೆಯಾಗುತ್ತಿದ್ದು, ವಾಹನ ಬೆಲೆ ಇಳಿಕೆಗಾಗಿ ಅಗ್ಗದ ಬೆಲೆಯ ಚೀನಿ ಉತ್ಪನ್ನಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಅದರಲ್ಲೂ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಗಳನ್ನು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿದೇಶಿ ಮಾರುಕಟ್ಟೆಯಲ್ಲಿನ ಬ್ಯಾಟರಿ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ಸ್ಥಳೀಯ ಸಂಪನ್ಮೂಲದೊಂದಿಗೆ ಬಿಡಿಭಾಗಗಳು ಮತ್ತು ಬ್ಯಾಟರಿ ತಯಾರಿಕೆಗೆ ಸಿದ್ದತೆ ನಡೆಸಿವೆ.


Click it and Unblock the Notifications