Mahindra Thar: ದೇಶದಲ್ಲಿ ಸುನಾಮಿ ಎಬ್ಬಿಸುತ್ತಿದೆ ಜನಪ್ರಿಯ ಮಹೀಂದ್ರಾ ಥಾರ್
ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ 3-ಡೋರ್ ಮಹೀಂದ್ರಾ ಥಾರ್ (Mahindra Thar) ಅಬ್ಬರಿಸುತ್ತಿದೆ. ಇದರ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸಕ್ಕೆ ಮನಸೋಲದವರೇ ಇಲ್ಲ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ತೆಗೆದುಕೊಳ್ಳುತ್ತಾರೆ. ಸದ್ಯ, ಸೆಪ್ಟೆಂಬರ್ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದೆ.
ಕಳೆದ ತಿಂಗಳು ಮಹೀಂದ್ರಾ ಕಂಪನಿಯು 5,413 ಯುನಿಟ್ ಥಾರ್ ಎಸ್‌ಯುವಿಗಳನ್ನು ಭರ್ಜರಿಯಾಗಿ ಸೇಲ್ ಮಾಡಿದೆ. ಹೋದ ವರ್ಷದ (2022) ಇದೇ ಅವಧಿಗೆ ಹೋಲಿಕೆ ಮಾಡಿದರೆ (4,249 ಯುನಿಟ್) ವರ್ಷದಿಂದ ವರ್ಷಕ್ಕೆ (Y-o-Y) ಶೇಕಡ 27.39% ಪ್ರಗತಿ ಸಾಧಿಸಿದೆ. ಈ ಅಕ್ಟೋಬರ್ ತಿಂಗಳು, ದಸರಾ ಹಬ್ಬವಿದ್ದ ಕಾರಣ, ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಥಾರ್, ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಈ ಥಾರ್ ವಿವಿಧ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರ 1.5 ಲೀಟರ್ ಡೀಸೆಲ್ ಎಂಜಿನ್, 117 hp ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ.
2.2 - ಲೀಟರ್ ಡೀಸೆಲ್ ಎಂಜಿನ್ 128 hp ಪವರ್, 300 Nm ಪೀಕ್ ಟಾರ್ಕ್, 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 150 hp ಪವರ್ ಮತ್ತು 320 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಮಹೀಂದ್ರಾ ಥಾರ್, ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಮೈಲೇಜ್ ನೀಡುತ್ತದೆ. 15.2 kmpl ಇಂಧನ ದಕ್ಷತೆಯನ್ನು ಒಳಗೊಂಡಿದೆ. ಐದು ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಮಹೀಂದ್ರಾ ಥಾರ್ ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್, ನಪೋಲಿ ಬ್ಲಾಕ್ ಹಾಗೂ ಗ್ಯಾಲಕ್ಸಿ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿಗೆ ಪ್ರಬಲ ಪೈಪೋಟಿ ನೀಡಲು ಮಹೀಂದ್ರಾ, 5 ಡೋರ್ ಥಾರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ ಹಲವು ಭಾರೀ ಪರೀಕ್ಷಾರ್ಥ ಸಂಚಾರ ನಡೆಸುವಾಗ ಇದು ಕಂಡುಬಂದಿದೆ. ಮುಂಬರುವ ಈ ಎಸ್‌ಯುವಿ, ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರುವ ನೀರಿಕ್ಷೆಯಿದೆ. ರೂ.15.00 - 16.00 ಲಕ್ಷ ಬೆಲೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು, ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಗಮನಿಸಿದರೆ, 3 ಡೋರ್ ಮಹೀಂದ್ರಾ ಥಾರ್ ಎಸ್‌ಯುವಿಗೆ ಭಾರತದ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆಯಿದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಈ ಅಕ್ಟೋಬರ್ ತಿಂಗಳು ದಸರಾ ಹಬ್ಬವಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ ಎನ್ನಲಾಗಿದೆ. ಮುಂದಿನ ತಿಂಗಳು ದೀಪಾವಳಿ ಹಬ್ಬ ಬರುವುದರಿಂದ ಈ ಎಸ್‌ಯುವಿಗೆ ಮತ್ತಷ್ಟು ಡಿಮ್ಯಾಂಡ್ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications