ಹೊಸ ಅವತಾರದಲ್ಲಿ ಬರುತ್ತೆ Tata ಅಲ್ಟ್ರೋಜ್: ತನ್ನದೇ ಇತಿಹಾಸ ಸೃಷ್ಟಿ ಮಾಡೋದು ಪಕ್ಕಾ!
ದೇಶೀಯ ಮಾರುಕಟ್ಟೆಯಲ್ಲಿ ಟಾಟಾ (Tata) ಕಂಪನಿ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು, ಅದರ ಕಾರುಗಳ ವೈಶಿಷ್ಟ್ಯ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಖರೀದಿದಾರರನ್ನು ಸೆಳೆಯುತ್ತದೆ. ಇದೀಗ, ಕಂಪನಿ ಅಲ್ಟ್ರೋಜ್ ಹ್ಯಾಚ್‌ಬ್ಯಾಕ್ ನಲ್ಲಿ ಹೊಸ ರೂಪಾಂತರವನ್ನು ಪರಿಚಯಿಸಲು ಮುಂದಾಗಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಟಾಟಾ ಮೋಟಾರ್ಸ್, ಅಲ್ಟ್ರೋಜ್ ಹ್ಯಾಚ್‌ಬ್ಯಾಕ್ ಲೈನ್‌ಅಪ್ ಅನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ನೂತನ XM+ (S) ರೂಪಾಂತರವನ್ನು ಪರಿಚಯಿಸಲಿದ್ದು, ಇದು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.2 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್,1.5 ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ CNG ಕಿಟ್ ಆಯ್ಕೆಯನ್ನು ಪಡೆದಿದೆ.

ಹೊಸ ರೂಪಾಂತರ XM+ (S) ಕೆಲವೊಂದು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ರೈನ್ ಸೆನ್ಸಿಂಗ್ ವೈಪರ್ಸ್, ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದೆ. ನೂತನ CNG ಆವೃತ್ತಿ ಮಾತ್ರ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಕರ್ಷಕ ಸನ್‌ರೂಫ್ ಪಡೆದಿರುತ್ತದೆ. ಅಲ್ಟ್ರೋಜ್ XM+ಗೆ ಹೋಲಿಸಿದರೆ, ಹೊಸ XM+ (S) ರೂಪಾಂತರ ರೂ.15,000 ದಿಂದ 20,000 ಹೆಚ್ಚುವರಿ ಬೆಲೆಯನ್ನು ಹೊಂದಿರಲಿದೆ.
ಈ ತಿಂಗಳ ಅಂತ್ಯದಲ್ಲಿ ಮಾರಾಟವಾಗಲಿದೆ. ಜೊತೆಗೆ ಮಿಡ್ ಸ್ಪೆಕ್ ಹಾಗೂ ನವೀಕರಿಸಿದ ಅಲ್ಟ್ರೋಜ್ XT ಹಾಗೂ XT ಡಾರ್ಕ್ ವೇರಿಯೆಂಟ್ ಗಳನ್ನು CNG ಆವೃತ್ತಿಯೊಂದಿಗೆ ಟಾಟಾ ಕಂಪನಿ ಬಿಡುಗಡೆ ಮಾಡಲಿದೆ. ಈಗಾಗಲೇ ಬುಕಿಂಗ್ ಆರಂಭಗೊಳ್ಳುವ ಮೂಲಕ ಭಾರೀ ಹೈಪ್ ಕ್ರಿಯೇಟ್ ಮಾಡಿರುವ CNG ಕಾರಿನ ಬಗ್ಗೆ ಮಾತನಾಡುವುದಾದರೆ, ಇದು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ.
CNG ಮೋಡ್ ನಲ್ಲಿ 84 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 26.49 km/kg ಇಂಧನ ದಕ್ಷತೆಯನ್ನು ಹೊಂದಿದೆ. ಇದು ಒಟ್ಟು ಆರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅದರಲ್ಲಿ ಮೂರು ಅತ್ಯಾಧುನಿಕ ಸನ್‌ರೂಫ್ ಹೊಂದಿರುವುದು ವಿಶೇಷವಾಗಿದ್ದು, ವೇರಿಯೆಂಟ್ ಗೆ ಅನುಗುಣವಾಗಿ ವಿಭಿನ್ನವಾದ ವೈಶಿಷ್ಟ್ಯಗಳನ್ನು ಪಡೆದಿವೆ.
ಅಲ್ಟ್ರೋಜ್ CNG ಆವೃತ್ತಿಯ ಟಾಪ್ ಎಂಡ್ XZ+ ರೂಪಾಂತರ ಕೆಲವು ಹೆಚ್ಚುವರಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏರ್ ಪ್ಯೂರಿಫೈಯರ್, ಡೈನಾಮಿಕ್ ಗೈಡ್‌ವೇಸ್, ರೇರ್ ವ್ಯೂ ಕ್ಯಾಮೆರಾ, ಲೆದರ್ ಸೀಟ್ಸ್, ಕನೆಕ್ಟ್ದ್ ಕಾರ್ ಟೆಕ್, 8 ಸ್ಪೀಕರ್ ಆಡಿಯೊ ಸಿಸ್ಟಮ್, ಬ್ರೇಕ್ ಸ್ವೇ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆಟೋ ಹೆಡ್‌ಲ್ಯಾಂಪ್ಸ್, ಫಾಗ್ ಲೈಟ್ಸ್ ಸೇರಿದಂತೆ ಸುರಕ್ಷತೆಯ ದೃಷ್ಟಿಯಿಂದಲೂ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಅಲ್ಟ್ರೋಜ್ ರೂ.6.60 ಲಕ್ಷದಿಂದ ರೂ.10.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 18.05 - 23.64 kmpl ಮೈಲೇಜ್ ನೀಡಲಿದೆ. ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಹುಂಡೈ i20, ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಜಾಗಳಿಗೆ ಪ್ರತಿಸ್ಫರ್ಧಿಯಾಗಿದೆ.
ಒಟ್ಟಾರೆ, ಟಾಟಾ ಮೋಟಾರ್ಸ್, ಅಲ್ಟ್ರೋಜ್ ಹ್ಯಾಚ್‌ಬ್ಯಾಕ್ ನಲ್ಲಿ ಹೊಸ ರೂಪಾಂತರವನ್ನು ಪರಿಚಯಿಸಲು ಮುಂದಾಗಿದ್ದು, ಇದು ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಬೆಲೆಯು ಕೊಂಚ ಹೆಚ್ಚಿರಲಿದೆ. ಆದರೂ ಗ್ರಾಹಕರಿಗೆ ಇಷ್ಟವಾಗಬಹುದು. ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಆದ್ದೂರಿಯಾಗಿ ಬಿಡುಗಡೆ ಆಗಲಿದ್ದು, ಖರೀದಿದಾರರಿಂದ ಯಾವ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications