ಬೆಂಗ್ಳೂರಿಗೆ ಬೈಸಿಕಲ್ ಸವಾರಿಯೇ ಸರಿ: ಮಾಲತಿ
ಬೆಂಗಳೂರಿನಂತಹ ನಗರಗಳಲ್ಲಿ ಸಂಚಾರ ದಟ್ಟಣೆ ನಿತ್ಯದ ಕಿರಿಕ್ಕು. ಸಾವಿರ ಸಾವಿರ ಹಾರನ್‌ಗಳ ಕರ್ಕಶ ಸದ್ದು, ಟ್ರಾಫಿಕ್, ಲೇಟಾಯ್ತು ಸಾರ್ ಎಂದು ವಿನೀತನಾಗಿ ನಿಂತರೂ ಬಾಸ್ ಕೈಯಿಂದ ತಪ್ಪದ ಮಂಗಳಾರತಿ. ಸಿಗ್ನಲಿನಿಂದ ಸಿಗ್ನಲಿಗೆ ಆಮೆಗಳಂತೆ ಚಲಿಸುವ ಕಾರುಗಳು, ನಡುವೆ ಸಿಕ್ಕಿ ಒದ್ದಾಡುವ ಅಂಬ್ಯುಲೆನ್ಸ್ ಮೊರೆತ.
ಥಕ್, ಈ ಟ್ರಾಫಿಕ್ ಸಮಸ್ಯೆಯಿಂದ ಪಾರಾಗೋದು ಹೇಗೆ ಎಂದು ಯೋಚಿಸುತ್ತಿದ್ದಾಗ "ಟ್ರಿಣ್ ಟ್ರಿಣ್" ಸೈಕಲ್ ಬೆಲ್ ಕೇಳಿತು. ಟ್ರಾಫಿಕ್‌ಗೂ ತನಗೂ ಸಂಬಂಧವೇ ಇಲ್ಲವೆಂದು ನಿರಾಳವಾಗಿ ಪೆಡಲ್ ತುಳಿಯುತ್ತಿದ್ದರು. ಅವರ ಹೆಸರು ಮಾಲತಿ ಎ. ವೃತ್ತಿಯಲ್ಲಿ ಎಚ್‌ಆರ್. ಸ್ಕೂಟಿ ಬಿಟ್ಟು ಬೈಸಿಕಲ್ ಮೂಲಕ ನಿತ್ಯ ಆಫೀಸಿಗೆ ಹೋಗುವ ಮಾಲತಿ ತನ್ನ ಬೈಸಿಕಲ್ ಕುರಿತು ಅನುಭವ ಹಂಚಿಕೊಂಡಿದ್ದಾರೆ. ಇದು ನಿಮಗೂ ಸ್ಪೂರ್ತಿಯಾದರೂ ಆದೀತು.
ನನ್ನಲ್ಲಿ ಹೋಂಡಾ ಆಕ್ಸೆಸ್ 125 ಇದೆ. ಒಮ್ಮೊಮ್ಮೆ ಬಸ್ ಅಥವಾ ಆಟೋ ಮೂಲಕ ಮನೆ/ಆಫೀಸಿಗೆ ಹೋಗ್ತಾ ಇದ್ದೆ. ಆದ್ರೆ ನಾನು ಇತ್ತೀಚೆಗೆ ಬಿಎಸ್ಎ ಲೇಡಿಬರ್ಡ್ ಬೈಸಿಕಲ್ ಖರೀದಿಸಿಬಿಟ್ಟೆ. ನಿರೀಕ್ಷೆಗೂ ಮೀರಿ ನನ್ನ ದಿನನಿತ್ಯದ ಪ್ರಯಾಣ ಸುಲಭವಾಗಿದೆ. ಪರಿಸರ ಸ್ನೇಹಿಯೆಂಬ ಹೆಮ್ಮೆಯಿದೆ. ಪೆಡಲ್ ತುಳಿಯೋ ವ್ಯಾಯಾಮದಿಂದ ನಿತ್ಯ ಉಲ್ಲಾಸದಿಂದ ಇದ್ದೇನೆ.
ಗಗನಕ್ಕೇರುತ್ತಿರುವ ಇಂಧನ ದರ, ಟ್ರಾಫಿಕ್ ಸಮಸ್ಯೆ ಕೆಲಸದ ಒತ್ತಡ ಇವೆಲ್ಲದರ ನಡುವೆ ಸಿಲುಕಿ ಆಲಸ್ಯದಿಂದ ಜಡ್ಡುಗಟ್ಟಿ ಹೋಗಿದ್ದೇವೆ. ಇವೆಲ್ಲ ಸಮಸ್ಯೆಯಿಂದ ಪಾರಾಗಲೂ ಹಳೆ ಫ್ರೆಂಡ್ ಬೈಸಿಕಲಿಗೆ ಹಾಯ್ ಹೇಳೋದು ಒಳಿತು. ಆಫೀಸಿಗೆ ನಿತ್ಯ ಸೈಕಲ್ ಮೂಲಕ ಪ್ರಯಾಣ ಮಾಡುವ ಮೂಲಕ ಪರಿಸರ ಮತ್ತು ಆರೋಗ್ಯ ಕಾಪಾಡಬಹುದು ಎನ್ನುವುದು ನನ್ನ ಅನಿಸಿಕೆ.
ಕಾರು, ಬೈಕ್, ಸ್ಕೂಟಿ ಬಿಟ್ಟು ಪರಿಸರ/ಆರೋಗ್ಯ ಸ್ನೇಹಿ ಬೈಸಿಕಲ್ ಸವಾರಿ ಶುರು ಮಾಡ್ತಿರಿ ಅಂದ್ರೆ ನಾನು ರೆಕಮಂಡ್ ಮಾಡೋದು ಬಿಎಸ್‌ಎ ಲೇಡಿ ಬರ್ಡ್ ಸ್ಪಾಲ್ಸ್(26 ಇಂಚು ಎತ್ತರ). ಇದರ ದರ 4,900 ರುಪಾಯಿ. ಚೌಕಾಶಿ ಮಾಡಿದ್ಮೇಲೆ ನನಗೆ ಸಿಕ್ಕಿದ್ದು 4,700 ರುಪಾಯಿಗೆ. ಸೈಕಲ್ ಕೂಡ ಈಗ ದುಬಾರಿ.
ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ. ಮೊದಲ ನೋಟಕ್ಕೆ ಬಿಎಸ್ಎ ಲೇಡಿ ಬರ್ಡ್ ಸೈಕಲ್ ನನ್ನ ಸೆಳೆದುಬಿಟ್ಟಿತು. ಇತರ ಸೈಕಲುಗಳಿಗೆ ಹೋಲಿಸಿದರೆ ಇದು ಸ್ಟ್ರಾಂಗ್ ಮತ್ತು ಸ್ಟೈಲಿಷ್. ಉದ್ದವಾದ ಸೀಟ್ ಆರಾಮದಾಯಕ. ಕ್ಯಾರಿಯರ್ ದೊಡ್ಡದಾಗಿದ್ದು, ಶಾಪಿಂಗ್ ಐಟಂಗಳನ್ನು ಇಡಲು ಸೂಕ್ತವಾಗಿದೆ. ಆಕರ್ಷಕ ಗ್ರಾಫಿಕ್ಸಿನ ಸ್ಕರ್ಟ್ ಗಾರ್ಡ್ ಮತ್ತು ಚೈನ್ ಗಾರ್ಡ್ ಸುರಕ್ಷಿತ ಸವಾರಿಗೂ ಪೂರಕ. ಯಾಕೆಂದ್ರೆ ರೈಡರಿನ ಬಟ್ಟೆ ಟೈರಿನೆಡೆಗೆ ಸಿಲುಕುವ ಅಪಾಯವಿಲ್ಲ.
ಮಧ್ಯಮ ಗಾತ್ರದ ಟೈರ್, ಎತ್ತರದ ಸೀಟಿನಿಂದಾಗಿ ಸ್ಮೂತಾಗಿ ರೈಡ್ ಮಾಡಬಹುದು. ಏರೊಡೈನಾಮಿಕ್ ವಿನ್ಯಾಸದಲ್ಲಿ ಹ್ಯಾಂಡಲ್ ಅಳವಡಿಸಲಾಗಿದ್ದು, ಕತ್ತು, ಬೆನ್ನಿಗೆ ತ್ರಾಸವಿಲ್ಲ. ಹೆಚ್ಚು ಆಯಾಸವಿಲ್ಲದೇ ಆರಾಮವಾಗಿ ಉಲ್ಲಾಸದಿಂದ ಸವಾರಿ ಮಾಡಬಹುದಾಗಿದೆ.
ಕೆಲವು ಸಾವಿರ ನೀಡಿ ಸೈಕಲ್ ಖರೀದಿಸಿದ್ರೆ ಆಮೇಲೆ ಪೆಟ್ರೋಲ್/ಡೀಸೆಲ್ ಖರ್ಚಿಲ್ಲ. ಬಸ್ ಪಾಸ್/ಆಟೋ ವೆಚ್ಚವಿಲ್ಲ. ಯಾವುದೇ ಟ್ರಾಫಿಕ್‌ನಲ್ಲೂ ನುಸುಳಿಕೊಂಡು, ಶಾರ್ಟ್ ಕಟ್ ಹಾದಿ ಹುಡುಕಿಕೊಂಡು ರೈಡ್ ಮಾಡಬಹುದು. ಬೈಸಿಕಲ್ ಇದ್ರೆ ಜಿಮ್‌ಗೆ ಹೋಗಬೇಕಿಲ್ಲ. ಹೆಲ್ತಿ ಆಗಿರಬಹುದು. ರಸ್ತೆಯನ್ನು, ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸುತ್ತ, ಹಾಡು ಗುನುಗುತ್ತ ಹ್ಯಾಪಿಯಾಗಿ ಪೆಡಲ್ ತುಳಿಯುತ್ತ ಸಾಗಬಹುದು.
ಇಷ್ಟು ಮಾತ್ರವಲ್ಲ, ಬೈಸಿಕಲಿನಲ್ಲಿ ನಾವು ಸಾಗಿದ್ದೇ ಹಾದಿ. ಟ್ರಾಫಿಕ್ ಪೊಲೀಸರಿಗೆ ಭಯಪಡಬೇಕಿಲ್ಲ. ಲೈಸನ್ಸ್ ಕೇಳೋರಿಲ್ಲ. ಫೈನ್ ಕಟ್ಬೇಕಾಗಿಲ್ಲ. ರೋಡ್ ರೇಜ್ ಅಥವಾ ಜಗಳ ಮಾಡಬೇಕಿಲ್ಲ. ಹಣೆಯಲ್ಲಿ ಒಂದಿಷ್ಟು ಬೆವರಹನಿಯ ಪೋಣಿಸಿಕೊಂಡು ಮಾಡೋ ಸೈಕಲ್ ಸವಾರಿಯಲ್ಲಿ ಕಡಿಮೆಯೆಂದ್ರೂ ಹತ್ತು ಲಾಭವಿದೆ.
ಪರಿಸರ ಸ್ನೇಹಿ, ಆರೋಗ್ಯ ಸ್ನೇಹಿ ಸೈಕಲ್ ಮೂಲಕ ಆಫೀಸಿಗೆ ಹೋಗಲು ಆರಂಭಿಸಿ ಅಂತ ಎಲ್ಲರಿಗೂ ಪ್ರೀತಿಯಿಂದ ಹೇಳುತ್ತಿದ್ದೇನೆ. ಆರೋಗ್ಯದ ಜೊತೆಗೆ ಪರಿಸರದ ರಕ್ಷಣೆಯನ್ನೂ ಮಾಡೋಣ. RIDE OUT YOUR PRIDE!
ನಿಮ್ಮ ಬೈಸಿಕಲ್, ಕಾರು, ಬೈಕ್ ಅಥವಾ ಯಾವುದೇ ವಾಹನದ ಕುರಿತಾದ ಅನುಭವಗಳನ್ನು ನಮಗೆ ಬರೆದು ಕಳುಹಿಸಿ. ನಮ್ಮ ಇಮೇಲೆ ವಿಳಾಸ [email protected]


Click it and Unblock the Notifications









