ಸಲಹೆ: ವಾಹನ ಚಾಲನೆ ಕಲಿಯುವ ಮುನ್ನ
ಹದಿನೆಂಟಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮತ್ತು 20ಕ್ಕಿಂತ ಕಡಿಮೆ ವಯಸ್ಸಿನವರು ಗೇರ್ ಅಥವಾ ಹಗುರ ವಾಹನಗಳ ಲರ್ನಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದ್ದಾರೆ.
ಸಾರಿಗೆ ವಾಹನ ಕಲಿಕಾ ಪರವಾನಿಗೆ ಪಡೆಯಲು ಇಚ್ಚಿಸುವರ ಕನಿಷ್ಠ ವಯಸ್ಸಿನ ಮಿತಿ 20 ವರ್ಷ. ಜೊತೆಗೆ ಅವರು ಹಗುರ ವಾಹನ ಚಾಲನೆಯ ಪರವಾನಿಗೆ ಪತ್ರವನ್ನೂ ಹೊಂದಿರಬೇಕು. ಈ ಡಿಎಲ್ ಗೆ ಕನಿಷ್ಠ ಒಂದು ವರ್ಷವಾದರೂ ಆಗಿರಬೇಕು. ಅಂತವರು ಮಾತ್ರ ಟ್ರಾನ್ಸ್ ಪೋರ್ಟ್ ವಾಹನ ಚಾಲನೆ ಕಲಿಕಾ ಪರವಾನಿಗೆ ಪಡೆಯಲು ಅರ್ಹತೆ ಹೊಂದಿದ್ದಾರೆ.
ಅಪ್ಲಿಕೇಷನಿನಲ್ಲಿ ನಿಖರ ಮಾಹಿತಿ ಬರೆದು ಆರ್ ಟಿಒನ ವಾಹನ ಚಾಲನೆ ಪರವಾನಿಗೆ ವಿಭಾಗದ ಸಹಾಯಕರಿಗೆ ತೋರಿಸಬೇಕು. ಎಸ್ಎಸ್ಎಲ್ಸಿ ಪಾಸಾದ ಅರ್ಜಿದಾರರು ಲಿಖಿತ ಪರೀಕ್ಷೆ ಬರೆಯಬೇಕು. ಇತರರು ಆರ್ ಟಿಒ ನಿಗದಿಪಡಿಸಿದ ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ವಾಹನ ಕಾಯಿದೆಯ ಸೆಕ್ಷನ್ 118ರ ಅನ್ವಯ ದಾಖಲಿಸಿರುವ ಸಂಚಾರಿ ನೀತಿನಿಯಮಗಳು, ಸಿಗ್ನಲುಗಳ ಕುರಿತು ಮೌಖಿಕ ಪರೀಕ್ಷೆಯಲ್ಲಿ ಉತ್ತರಿಸಬೇಕು.
ನೀವು ಎಸ್ಎಸ್ಎಲ್ಸಿ ಪಾಸಾಗಿದ್ದರೂ ಕೇವಲ ಮೌಖಿಕ ಪರೀಕ್ಷೆ ಬರೆದು ಬಂದಿರಬಹುದು. ಇದಕ್ಕೆ ಕಾರಣ ನೀವು ಮಧ್ಯವರ್ತಿಗಳ ಮೂಲಕ ಬಂದಿರಬಹುದು. ಕೆಲವು ಆರ್ಟಿಒ ಕಚೇರಿಗಳಲ್ಲಿ ಇಂತಹ ಮಾಮೂಲಿ ವ್ಯವಹಾರಗಳು ಸರ್ವೇ ಸಾಮಾನ್ಯ.
ಮೌಖಿಕ ಅಥವಾ ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ಅದೇ ದಿನ ಲರ್ನಿಂಗ್ ಲೈಸನ್ಸ್ ನೀಡಲಾಗುತ್ತದೆ. ಆದರೆ ದುರಾದೃಷ್ಟವಶಾತ್ ಪರೀಕ್ಷೆಯಲ್ಲಿ ಫೇಲಾದರೆ ಅರ್ಜಿ ದಾರ ನೀಡಿರುವ ದಾಖಲೆಗಳನ್ನೆಲ್ಲ ವಾಪಸ್ ನೀಡಲಾಗುತ್ತದೆ ಮತ್ತು ಮುಂದಿನ ದಿನ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪಾಸಾದರೆ ಅರ್ಜಿದಾಖಲೆಗಳನ್ನು ಆರ್ ಟಿಒ ಇಟ್ಟುಕೊಂಡು ನಮಗೆ ಕೆಲವೇ ಗಂಟೆಗಳಲ್ಲಿ ಎಲ್ ಎಲ್ ನೀಡುತ್ತದೆ.
ಕಲಿಕಾ ಪರವಾನಿಗೆ ಪತ್ರದ ವ್ಯಾಲಿಡಿಟಿ ಆರು ತಿಂಗಳು. ಅದನ್ನು ನವೀಕರಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ವಾಹನ ಚಾಲನೆ ಕಲಿಯಬಹುದು. ಚಾಲನೆ ಕಲಿತು ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಈ ಸಲಹೆಗಳು ವಾಹನ ಚಾಲನೆ ಕಲಿಕಾ ಪರವಾನಿಗೆ ಪಡೆಯಲು ನೆರವಾಗಬಹುದೆನ್ನುವ ನಿರೀಕ್ಷೆ ನಮ್ಮದು. ಕಲಿಕಾ ಪರವಾನಿಗೆ ದೇಶದ ಎಲ್ಲಾ ಕಡೆಯಲ್ಲೂ ವ್ಯಾಲಿಡಿಟಿ ಹೊಂದಿದೆ. (ದಿನಕ್ಕೊಂದು ಸಲಹೆ)


Click it and Unblock the Notifications









