ಟೊಯೊಟಾ ಕಾರಿಗೆ ಸೆಗಣಿಯಿಂದ ಕೊಟಿಂಗ್- ಅಸಲಿ ಕಾರಣ ಬಿಚ್ಚಿಟ್ಟ ಕರೊಲ್ಲಾ ಓನರ್..!
ಹೆಚ್ಚಿದ ಜಾಗತಿಕ ತಾಪಮಾನದಿಂದಾಗಿ ಜನಸಾಮಾನ್ಯರ ಬದುಕೇ ಹೈರಾಣಾಗಿದ್ದು, ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ವಾಹನ ಸವಾರರೂ ಕೂಡಾ ಬಿಸಿಲ ತಾಪಮಾನಕ್ಕೆ ಬಳಲಿ ಹೋಗಿದ್ದು, ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೆಲವು ಹಳೆಯ ಪದ್ದತಿಗಳತ್ತ ಮುಖಮಾಡುತ್ತಿದ್ದಾರೆ. ಹೀಗೆ ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳಲು ಟೊಯೊಟಾ ಕಾರು ಮಾಲೀಕರೊಬ್ಬರು ಕಾರಿನ ಮೇಲ್ಭಾಗದಲ್ಲಿ ಸೆಗಣಿಯಿಂದ ಕೊಟಿಂಗ್ ಮಾಡಿಸಿ ಸುದ್ದಿಯಾಗಿದ್ದಾರೆ.

ಕಳೆದ ಒಂದು ವಾರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾರಿನ ಮೇಲ್ಭಾಗಕ್ಕೆ ಸೆಗಣಿಯಿಂದ ಕೊಟಿಂಗ್ ಮಾಡಿಸಿರುವ ಬಗೆಗೆ ಹಲವಾರು ವರದಿಗಳು ಬಿತ್ತರವಾಗುತ್ತಿದ್ದು, ಇದೀಗ ಈ ಬಗ್ಗೆ ಸ್ವತಃ ಕಾರು ಮಾಲೀಕರೇ ಮಾತನಾಡಿ ಕಾರಿನ ಮೇಲ್ಭಾದಲ್ಲಿ ಸೆಗಣಿಯನ್ನು ಬಳಕೆ ಮಾಡಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ವಾಹನ ಸವಾರಿ ವೇಳೆ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಸಿ ಬಳಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಯಾಕೆಂದ್ರೆ ಹೊರಗಿನ ತಾಪಮಾನವು ವರ್ಷದಿಂದ ವರ್ಷಕ್ಕೆ ಹೆಚ್ಚಿರುವುದರಿಂದ ವಾಹನ ಸವಾರಿ ಕಷ್ಟವಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಟೊಯೊಟಾ ಕಾರು ಮಾಲೀಕರು ಮಾಡಿದ ಐಡಿಯಾ ಮಾತ್ರ ಸೂಪರ್.

ಹೌದು, ಬಿಸಿಲಿನಿಂದ ಕಾರಿನ ಪೆಂಟ್ ಹಾಳಾಗದಿರಲಿ ಅಂತಾ ಬಹುತೇಕ ವಾಹನ ಮಾಲೀಕರು ವಾಹನಗಳಿಗೆ ಪಾಸ್ಟಿಕ್ ಹಾಳೆ ಹೊದಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ವಾಹನಗಳಿಗೆ ಸರಿದೂಗುವ ಹಾಗೆ ಸಿದ್ದಪಡಿಸಲಾಗುವ ಛತ್ರಿಗಳನ್ನು ಬಳಕೆ ಮಾಡುವುದನ್ನು ಕೇಳಿದ್ದೇವೆ.

ಆದ್ರೆ ಈ ಟೊಯೊಟಾ ಕರೊಲ್ಲಾ ಆಲ್ಟಿಸ್ ಕಾರು ಮಾಲೀಕರು ಮಾತ್ರ ಕಾರಿನ ಮೇಲ್ಭಾಗವನ್ನು ಸಂಪೂರ್ಣವಾಗಿ ಸೆಗಣಿಯಿಂದಲೇ ಕೊಟಿಂಗ್ ಮಾಡಿಸಿದ್ದು, ಕಾರು ಮಾಲೀಕರ ಹೊಸ ತಂತ್ರ ಕಂಡು ಬಹುತೇಕ ಕಾರು ಮಾಲೀಕರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹೀಗೂ ಮಾಡಬಹುದಾ ಅಂತಾ ತಲೆಕೆಡಿಸಿಕೊಂಡಿದ್ದಾರೆ.

ಕಾರು ಚಾಲನೆ ವೇಳೆ ಎಸಿ ಬೇಕಿಲ್ಲವಂತೆ..!
ನಿಮಗೆ ಇದು ಅಚ್ಚರಿಯಾದ್ರು ನಿಜ. ಕಾರಿನ ಮೇಲೆ ಸೆಗಣಿಯಿಂದ ಕೊಟಿಂಗ್ ಮಾಡಿಸಿದ ನಂತರ ಕಾರು ಮಾಲೀಕರಾದ ಶ್ರೀಮತಿ ಶೈಲಜಾ ಷಾ ಎನ್ನುವವರು ಅವರು ಸುಡುಬಿಲಿಸಿನಲ್ಲೂ ಎಸಿ ಬಳಕೆ ಮಾಡುತ್ತಿಲ್ಲವಂತೆ. ಇದಕ್ಕೆ ಕಾರಣ ಕಾರಿನ ರೂಫ್ ಮೇಲೆ ಸೆಗಣಿ ಮೆತ್ತಿರುವುದರಿಂದ ಕಾರಿನ ಒಳಭಾಗವು ತಣ್ಣಗಿರುತ್ತೆ ಎಂದಿದ್ದಾರೆ.

ಸದ್ಯ ಅಹಮದಾಬಾದ್‌ನಲ್ಲಿ ನೆಲೆಸಿರುವ ಮುಂಬೈ ಮೂಲದ ಶೈಲಜಾ ಷಾ ಅವರು ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಹೊಸ ಉಪಾಯ ಹುಡುಕುತ್ತಿದ್ದಾಗ ಸ್ಥಳೀಯರೊಬ್ಬರ ಸಲಹೆ ಮೆರೆಗೆ ಈ ರೀತಿಯಾಗಿ ಸೆಗಣಿಯಿಂದ ಕೊಟಿಂಗ್ ಮಾಡಿಸಿದ್ದಾರೆ.

ಮೊದಮೊದಲು ಸೆಗಣಿಯಿಂದ ಮೆತ್ತಿಕೊಂಡಿದ್ದ ಕಾರನ್ನು ಕಂಡು ಹಲವರು ಮೂಗು ಮುರಿದರೂ ಇದೀಗ ಸುಡುಬಿಸಿಲಿನಲ್ಲೂ ಎಸಿ ಬಳಕೆ ಮಾಡದೇ ಕಾರು ಚಾಲನೆ ಮಾಡಬಹುದು ಎನ್ನುತ್ತಿರುವ ಶೈಲಜಾ ಅವರು ಮಾತು ಹೊಸ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಜನ ಗೂಡಿಸಲುಗಳು ಮತ್ತು ಮನೆಯ ಅಂಗಳವನ್ನು ತಪ್ಪಾಗಿಸಲು ಸೆಗಣಿಯನ್ನು ಬಳಕೆ ಮಾಡಿ ಆರೋಗ್ಯಕರ ಜೀವನ ಮಾಡುತ್ತಿದ್ದರು. ಹೀಗಿರುವಾಗ ಕಾಲ ಬದಲಾದಂತೆ ಜನರ ಜೀವನ ಶೈಲಿಯೂ ಬದಲಾಗಿದ್ದಲ್ಲದೇ ಸೆಗಣಿಯ ಬಳಕೆಯೂ ಮೂಲೆ ಸೇರಿದೆ. ಆದ್ರೆ ಹಳೆಯ ಪದ್ದತಿಯನ್ನೇ ಹೊಸ ರೀತಿಯಲ್ಲಿ ಬಳಸಿ ಕಾರನ್ನು ತಪ್ಪಾಗಿಸಲು ಸೆಗಣಿಯನ್ನು ಬಳಕೆ ಮಾಡಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ ಅಂದ್ರೆ ತಪ್ಪಾಗುವುದಿಲ್ಲ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇನ್ನು ಜಾಗತಿಕ ತಾಪಮಾನದಿಂದ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಗರಿಷ್ಠ ಪ್ರಮಾಣದ ಉಷ್ಠಾಂಶ ದಾಖಲಾಗುತ್ತಿದ್ದು, ಎಸಿ ಸೌಲಭ್ಯವಿಲ್ಲದೆ ವಾಹನ ಪ್ರಯಾಣ ಕಷ್ಟಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಕಾರುಗಳಲ್ಲಿ ಎಸಿ ಇದ್ದರೂ ಕೂಡಾ ಸರಿಯಾಗಿ ಕಾರ್ಯನಿರ್ವಹಣೆ ಮಾಡುವುದೇ ಇಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಕಾರಿನ ಎಸಿ ಯುನಿಟ್ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಈ ಟಿಪ್ಸ್ ಫಾಲೋ ಮಾಡಿ ನೋಡಿ.

ನೆರಳಿನಡಿ ಪಾರ್ಕ್ ಮಾಡಿ..!
ನಿಮ್ಮ ಕಾರನ್ನು ಸಾಧ್ಯವಾದಷ್ಟು ತಣ್ಣಗಿರಿಸಲು ನೆರಳು ಇರುವ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಯಾಕೆಂದ್ರೆ ಮರದ ಅಡಿಯಲ್ಲಿ ಅಥವಾ ಬೆಸ್‌ಮೆಂಟ್ ಪಾರ್ಕಿಂಗ್ ಸ್ಲಾಟ್‌ನಲ್ಲಿ ಪಾರ್ಕ್ ಮಾಡುವುದರಿಂದ ಕಾರು ತಪ್ಪಾಗಿರುವುದಲ್ಲದೇ ಎಸಿ ಮೇಲೆ ಹೆಚ್ಚು ಒತ್ತಡ ಬೀಳಲಾರದು.
MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ವಿಂಡ್ ಸ್ಕ್ರೀನ್ ರಿಪ್ಲೆಕ್ಟರ್‍ಗಳನ್ನು ಬಳಸಿ..!
ಈ ಹಿಂದಿನಿಂದಲೂ ಬಹುತೇಕ ಕಾರು ಮಾಲೀಕರು ಈ ಸಲಹೆಯನ್ನು ಪಾಲಿಸುತ್ತಿದ್ದರು. ಕಾರಿನ ಮುಂಭಾಗ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ವಿಂಡ್ ಸ್ಕ್ರೀನ್‌ಗಳಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‍ಗಳನ್ನು ಅಂಟಿಸುವುದು ಕೂಡಾ ಬಿಸಿಲ ತಾಪವನ್ನು ಕಡಿಮೆ ಮಾಡಬಹುದಾಗಿದೆ.

ಇದು ಶಾಖವನ್ನು ತಡೆಯಲು ವಿಂಡ್ ಸ್ಕ್ರೀನ್‌ಗಳಿಗೆ ರಿಫ್ಲೆಕ್ಟರ್‍ಗಳನ್ನು ಬಳಕೆ ಮಾಡಬಹುದಾಗಿದ್ದು, ಇವು ಸೂರ್ಯ ಶಾಖವನ್ನು ಕಾರಿನ ಒಳಭಾಗಕ್ಕೆ ಬಿಡದಂತೆ ತಡೆಯುವುದಲ್ಲದೇ ಎಸಿ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಮಾಡುತ್ತದೆ.

ಕಿಟಕಿ ಪೂರ್ತಿ ಮುಚ್ಚುವುದು ಬೇಡ..!
ಬಹುತೇಕ ಕಾರು ಮಾಲೀಕರು ಕಾರ್ ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಬಿಸಿಯಾಗಿ ಮಾರ್ಪಾಡುತ್ತದೆ.

ಬಿಸಿಲು ಇರುವ ಜಾಗದಲ್ಲಿ ಪಾರ್ಕ್ ಮಾಡಿ ಅಲ್ಲಿಯೇ ಇರುವುದಾದರೇ ಪೂರ್ತಿಯಾಗಿ ವಿಂಡ್ ಮುಚ್ಚದೇ ತುಸು ತೆರೆಯುವುದು ಒಳಿತು. ಇಲ್ಲವಾದಲ್ಲಿ ಕಾರ್ ಪಾರ್ಕ್ ಬೇರೆಯಡೆ ಹೋಗುವುದಾದರೇ ನೆರಳಿನಡಿಯೇ ಪಾರ್ಕ್ ಮಾಡಿಬಿಡುವುದು ಸೂಕ್ತ.

ಎಸಿ ಆನ್ ಮಾಡುವ ಮುನ್ನ..!
ಹೆಚ್ಚಿನ ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಈ ಟಿಪ್ಸ್ ತಪ್ಪದೇ ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಬಿಸಿಲಿನಲ್ಲಿ ಪಾರ್ಕ್ ಮಾಡಿ ತಕ್ಷಣವೇ ಕಾರು ಪ್ರಯಾಣ ಮಾಡುವ ಸಂದರ್ಭವಿದ್ದಾಗ ಎಸಿ ಆನ್ ಮಾಡುವ ಪೂರ್ತಿಯಾಗಿ ಕಿಟಿಕಿಗಳನ್ನು ಕ್ಲೋಸ್ ಮಾಡಲೇಬೇಡಿ.

ಯಾಕೆಂದ್ರೆ, ಕಾರು ಚಾಲನೆ ಶುರು ಮಾಡಿದ ತಕ್ಷಣವೇ ಎಸಿ ಆನ್ ಮಾಡಿದಲ್ಲಿ ಒಳಭಾಗವನ್ನು ತಣ್ಣಗಾಗಿಸಲು ಎಸಿಗೆ ಹೆಚ್ಚಿನ ಸಮಯಬೇಕಾಗುತ್ತದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನವೇ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕೆ ಇಳಿಸಿ ಕೆಲವು ನಿಮಿಷ ಹೊರಗಿನ ಗಾಳಿಯಲ್ಲಿ ಕಾರಿನ ಒಳಭಾಗವನ್ನು ತಣ್ಣಗಾಗಲು ಬೀಡಿ. ತದನಂತರವಷ್ಟೇ ಕಿಟಿಕಿ ಮುಚ್ಚಿ ಎಸಿ ಆನ್ ಮಾಡಿ ನೋಡಿ.

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಿ
ಬೇಸಿಗೆ ಶುರುವಾಗುವುದಕ್ಕೂ ಮುನ್ನ ಮನೆಗಳಲ್ಲಿ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತಿರೋ ಹಾಗೆಯೆ ಕಾರಿನ ಎಸಿಯನ್ನು ಕೂಡಾ ಕಾಲಕಾಲಕ್ಕೆ ಚೆಕ್ ಮಾಡಿಸುವುದನ್ನು ಮರೆಯಬಾರದು. ಇದರಿಂದ ದೂರ ಪ್ರಯಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.


Click it and Unblock the Notifications








