ಲ್ಯಾಬ್‍ನಲ್ಲಿದ್ದ ಮೂಷಿಕ ಮಾಡಿದ್ದೇನು ಗೊತ್ತಾ?
ಲ್ಯಾಬ್‍ನಲ್ಲಿರುವ ಇಲಿಗಳಿಗೆ ಹಲವು ರೀತಿಯ ತರಬೇತಿಯನ್ನು ನೀಡಲಾಗಿರುತ್ತದೆ. ಆದರೆ ಈಗ ಕೆಲವು ಇಲಿಗಳು ಚಾಲನೆ ಮಾಡುವುದನ್ನು ಕಲಿತಿವೆ. ಇದು ಆಶ್ಚರ್ಯವಾದರೂ ಸತ್ಯ. ವಿಜ್ಞಾನಿಗಳು ಪ್ಲಾಸ್ಟಿಕ್ ಕಂಟೇನರ್ ಬಳಸಿ ಸಣ್ಣ ಕಾರ್ ಅನ್ನು ತಯಾರಿಸಿ ಇಲಿಗಳ ಚಾಲನೆಯನ್ನು ಪರೀಕ್ಷಿಸಿದ್ದಾರೆ.

ಇಲಿಗಳು ತುಂಬಾ ಸ್ಮಾರ್ಟ್. ಜನರು ಯೋಚಿಸುವುದಕ್ಕಿಂತ ಇಲಿಗಳು ಸ್ಮಾರ್ಟ್ ಆಗಿ ಯೋಚಿಸುತ್ತವೆ ಎಂದು ಈಗ ಸಾಬೀತಾಗಿದೆ. ಇಲಿಗಳೊಂದಿಗೆ ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದೆ. ಇದು ಯಾವುದೇ ಸಿನಿಮಾದ ಸ್ಟಂಟ್ ದೃಶ್ಯವಲ್ಲ. ಈ ಘಟನೆಯು ನಿಜವಾಗಿ ನಡೆದಿದೆ.

ಅಮೇರಿಕಾದ ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿರುವ ಸಂಶೋಧನೆಯ ಭಾಗವಾಗಿ ಈ ಪರೀಕ್ಷೆಯನ್ನು ಮಾಡಲಾಗಿದೆ. ಇಲಿಗಳು ಸಣ್ಣ ಕಾರುಗಳನ್ನು ಓಡಿಸುತ್ತವೆ ಎಂದರೆ ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ. ಸಂಶೋಧಕರು ಹೆಚ್ಚಾಗಿ ಇಲಿಗಳನ್ನು ವಿವಿಧ ಪ್ರಯೋಗಗಳಿಗೆ ಮಾತ್ರ ಬಳಸುತ್ತಾರೆ. ಪ್ರಸ್ತುತ ಇಲಿಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಇದರ ಭಾಗವಾಗಿ, ಸಣ್ಣ ಕಾರುಗಳನ್ನು ಓಡಿಸಲು ಹಾಗೂ ಆಹಾರವನ್ನು ಸಂಗ್ರಹಿಸಲು ಇಲಿಗಳಿಗೆ ಸಂಶೋಧಕರು ತರಬೇತಿ ನೀಡಿದ್ದಾರೆ. ಇಲಿಗಳು ಅವುಗಳನ್ನು ಚೆನ್ನಾಗಿಯೇ ಮಾಡಿವೆ. ಇಲಿಗಳು ಕಾರ್ ಅನ್ನು ಚಾಲನೆ ಮಾಡಲು ಸಂಶೋಧಕರು ಸಣ್ಣ ಎಲೆಕ್ಟ್ರಿಕ್ ಕಾರನ್ನು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಪ್ಲಾಸ್ಟಿಕ್ ಕಂಟೇನರ್ ಸಹಾಯದಿಂದ ತಯಾರಿಸಲಾಗಿದೆ.

ಪ್ಲಾಸ್ಟಿಕ್ ಕಂಟೇನರ್ ಅನ್ನು ವ್ಹೀಲ್‍ಗಳ ಮೇಲೆ ಜೋಡಿಸಲಾಗಿದೆ. ಇದರ ಜೊತೆಗೆ 3 ತಾಮ್ರದ ಹ್ಯಾಂಡಲ್‍ಬಾರ್‌ಗಳನ್ನು ನೀಡಲಾಗಿದೆ. ಇಲಿ ಎಡಗೈ ತಾಮ್ರದ ಹ್ಯಾಂಡಲ್‍ಬಾರ್ ಮುಟ್ಟಿದರೆ, ಕಾರು ಎಡಕ್ಕೆ ಹೋಗುತ್ತದೆ. ಇಲಿಗಳು ಬಲಭಾಗದಲ್ಲಿರುವ ತಾಮ್ರದ ಹ್ಯಾಂಡಲ್‍ಬಾರ್ ಮುಟ್ಟಿದರೆ, ಕಾರು ಬಲಕ್ಕೆ ಚಲಿಸುತ್ತದೆ. ಮಧ್ಯದಲ್ಲಿರುವ ಹ್ಯಾಂಡಲ್‍ಬಾರ್ ಮುಟ್ಟಿದರೆ, ಕಾರು ನೇರವಾಗಿ ಹೋಗುತ್ತದೆ.

ಈ ವಾಹನದ ಕೆಳಭಾಗವನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಸಂಶೋಧಕರು ನಾಲ್ಕು ಚದರ ಮೀಟರ್ ಆಯತಾಕಾರದ ಪ್ರಯೋಗಾಲಯದಲ್ಲಿ ಇಲಿಗಳಿಗೆ ತರಬೇತಿ ನೀಡಿದ್ದಾರೆ. ಸಂಶೋಧಕರು 11 ಗಂಡು ಹಾಗೂ 6 ಹೆಣ್ಣು ಇಲಿ ಸೇರಿದಂತೆ ಒಟ್ಟು 17 ಇಲಿಗಳನ್ನು ಈ ಸಂಶೋಧನೆಗೆ ಬಳಸಿಕೊಂಡಿದ್ದಾರೆ.

ಇಲಿಗಳು ಕಾರನ್ನು ಬಹಳ ಚೆನ್ನಾಗಿಯೇ ಓಡಿಸಿವೆ. ಇಲಿಗಳು ಕಾರು ಚಾಲನೆ ಮಾಡುತ್ತಿರುವ ವೀಡಿಯೋ ನೋಡಿ ಜನರು ರೋಮಾಂಚನಗೊಂಡಿದ್ದಾರೆ. ಇದರಲ್ಲಿ, ಕಂಡು ಬಂದ ಪ್ರಮುಖ ಅಂಶವೆಂದರೆ ಇಲಿಗಳು ಚಾಲನೆ ಮಾಡುವುದರಿಂದ ರಿಲ್ಯಾಕ್ಸ್ ಆಗುತ್ತವೆ ಎಂದು. ಆದರೆ ಕಾರು ಚಾಲನೆ ಮಾಡುವುದರಿಂದ ಕೆಲ ಮನುಷ್ಯರಿಗೆ ಒತ್ತಡ ಉಂಟಾಗುತ್ತದೆ.
MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಆದರೆ ಇಲಿಗಳು ಉತ್ಸಾಹದಿಂದ ಕಾರನ್ನು ಚಾಲನೆ ಮಾಡಿವೆ. ಇದರಿಂದ ಅವುಗಳು ರಿಫ್ರೆಶ್ ಆಗಿದ್ದು ಕಂಡು ಬಂದಿದೆ. ಈ ಲ್ಯಾಬ್‍ನಲ್ಲಿರುವ ಇಲಿಗಳ ಹಾರ್ಮೋನ್ ಮಟ್ಟವನ್ನು ಲೆಕ್ಕಹಾಕುವ ಮೂಲಕ ಸಂಶೋಧಕರು ಇದನ್ನು ಕಂಡುಕೊಂಡಿದ್ದಾರೆ.
MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್ ಬಗ್ಗೆ ನಿಮಗೆಷ್ಟು ಗೊತ್ತು?

ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಕೊಸ್ಟೆರಾನ್ ಕಡಿಮೆ ಪ್ರಮಾಣದಲ್ಲಿರುವುದು ಕಂಡು ಬಂದಿದೆ. ಇದೇ ವೇಳೆ ಒತ್ತಡವನ್ನು ನಿವಾರಿಸುವ ಹಾರ್ಮೋನ್ ಆದ ಡಿಹೈಡ್ರೊಪಿಯಾಂಡ್ರೊಸ್ಟರಾನ್ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಕಾರಣಕ್ಕೆ ಸಂಶೋಧಕರು ಇಲಿಗಳು ಡ್ರೈವಿಂಗ್ ಮಾಡಿದರೆ ರಿಲ್ಯಾಕ್ಸ್ ಆಗಿರುತ್ತವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಚಾಲನೆಯಂತಹ ಸಂಕೀರ್ಣ ಕಾರ್ಯಗಳ ಕಾರ್ಯಕ್ಷಮತೆ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅಮೆರಿಕದ ವರ್ಜೀನಿಯಾದ ರಿಚ್ಮಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಸಂಶೋಧನೆ ನಡೆಸುತ್ತಿದ್ದಾರೆ. ಉದ್ವೇಗ ಹಾಗೂ ಖಿನ್ನತೆಗೆ ಚಿಕಿತ್ಸೆ ನೀಡುವ ಅತ್ಯುತ್ತಮ ವಿಧಾನಗಳನ್ನು ಗುರುತಿಸಲು ಈ ಸಂಶೋಧನೆಯನ್ನು ನಡೆಸಲಾಗುತ್ತಿದೆ.

ಚಾಲನೆಯಂತಹ ಸಂಕೀರ್ಣ ಕಾರ್ಯಗಳನ್ನು ಇಲಿಗಳು ನಿಭಾಯಿಸುತ್ತವೆಯೇ ಎಂಬುದನ್ನು ಸಂಶೋಧಕರು ಪರೀಕ್ಷಿಸಲು ಬಯಸಿದ್ದರು. ಇದಕ್ಕಾಗಿಯೇ ಸಣ್ಣ ಕಾರನ್ನು ಓಡಿಸಲು ಇಲಿಗಳನ್ನು ಪರೀಕ್ಷಿಸಲಾಯಿತು. ಇದರಲ್ಲಿ, ಆಶ್ಚರ್ಯಕರ ಸಂಗತಿಗಳನ್ನು ಕಂಡುಹಿಡಿಯಲಾಗಿದೆ.

ಮಾನವನ ಮೆದುಳನ್ನು ಅರ್ಥಮಾಡಿಕೊಳ್ಳಲು ಇಲಿಗಳ ಬಗ್ಗೆ ಸಂಶೋಧನೆ ಮಾಡುವುದು ಉತ್ತಮ ಎಂದು ರಿಚ್ಮಂಡ್ ವಿಶ್ವವಿದ್ಯಾಲಯದ ಬಿಹೇವಿಯರಲ್ ನ್ಯೂರೋಸೈನ್ಸ್ ಪ್ರಾಧ್ಯಾಪಕರಾದ ಡಾ. ಕೆಲ್ಲಿ ಲ್ಯಾಂಬರ್ಟ್ ಹೇಳಿದ್ದಾರೆ.
ಮಾನವನ ಮೆದುಳಿನಂತೆಯೇ ಇಲಿಯ ಮೆದುಳು ಸಹ ಒಂದೇ ರೀತಿಯ ನ್ಯೂರೋಕೆಮಿಕಲ್‍ಗಳನ್ನು ಹೊಂದಿದೆ. ಇಲಿಗಳು ಕಾರನ್ನು ಚಾಲನೆ ಮಾಡುತ್ತಿರುವ ದೃಶ್ಯವನ್ನು ಈ ಕೆಳಗಿನ ವೀಡಿಯೊದಲ್ಲಿ ಕಾಣಬಹುದು.

ಈ ಪರೀಕ್ಷೆಗಳು ಪಾರ್ಕಿನ್ಸನ್ ಕಾಯಿಲೆಯ ರೋಗಿಗಳಲ್ಲಿ ಮೋಟಾರ್ ಕೌಶಲ್ಯಗಳನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಸಂಶೋಧಕರಿಗೆ ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ.


Click it and Unblock the Notifications