ಎರಡು ದಶಕಗಳ ನಂತರ ಭಾರತದಲ್ಲಿ ಮತ್ತೆ ಶುರುವಾಯ್ತು ಜಾವಾ ಅಬ್ಬರ..!
2018ರ ನವೆಂಬರ್‌ನಲ್ಲಿ ಬಿಡುಗಡೆಯಾಗಿರುವ ಜಾವಾ ಹೊಸ ಮೋಟಾರ್‌ಸೈಕಲ್‌ಗಳ ಖರೀದಿಗಾಗಿ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದು, ಅಂತೂ ಇಂತೂ ನಾಲ್ಕು ತಿಂಗಳು ನಂತರ ಹೊಸ ಬೈಕ್‌ಗಳ ವಿತರಣೆಗೆ ಚಾಲನೆ ಸಿಕ್ಕಿದೆ. ಬುಕ್ಕಿಂಗ್ ಸಂಖ್ಯೆಯನ್ನು ಆಧಾರಿಸಿ ಬೈಕ್ ವಿತರಣೆ ಮಾಡಲಾಗುತ್ತಿದ್ದು, ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಿಂದ ಮರೆಯಾಗಿದ್ದ ಜಾವಾ ಅಬ್ಬರಕ್ಕೆ ಇದೀಗ ಮತ್ತೆ ಮರುಜೀವ ಬಂದಂತಾಗಿದೆ.

ಸದ್ಯ ಜಾವಾ ಹೊಸ ಬೈಕ್‌ಗಳ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ರೂ.5 ಸಾವಿರ ನೀಡಿ ಬುಕ್ಕಿಂಗ್ ಮಾಡಿದ್ದು, ಮುಂದಿನ ಸೆಪ್ಟೆಂಬರ್ ಅವಧಿಯ ತನಕವು ಬುಕ್ಕಿಂಗ್ ಪ್ರಕ್ರಿಯೆಯು ಭರ್ತಿಯಾಗಿದೆ. ಹೀಗಾಗಿ ಮೊದಲ ಬಾರಿಗೆ ಬುಕ್ಕಿಂಗ್ ಮಾಡಿದ ಕೆಲವೇ ಗ್ರಾಹಕರಿಗೆ ಇದೀಗ ಹೊಸ ಬೈಕ್ ವಿತರಣೆಯಾಗುತ್ತಿದ್ದು, ಪೂರ್ಣ ಪ್ರಮಾಣದ ವಿತರಣೆಗೆ ಇನ್ನು ಐದಾರು ತಿಂಗಳು ಕಾಯಲೇಬೇಕಿದೆ. ಈ ಮಧ್ಯೆ ಹೊಸ ಬೈಕ್ ವಿತರಣೆ ಮಾಡುವುದಕ್ಕೂ ಮುನ್ನ ಜಾವಾ ಸಂಸ್ಥೆಯು ಮಾಡಿದ ಮಹತ್ವದ ಕಾರ್ಯವೊಂದು ಜಾವಾ ಪ್ರಿಯರ ಮೆಚ್ಚುಗೆಗೆ ಕಾರಣವಾಯ್ತು.

ಗ್ರಾಹಕರಿಗೆ ಬೈಕ್ ವಿತರಣೆ ಮಾಡುವುದಕ್ಕೂ ಮುನ್ನ 13 ಹೊಸ ಬೈಕ್‌ಗಳನ್ನು ಹರಾಜು ಮಾಡಿ ರೂ.1.43 ಕೋಟಿ ಹಣ ಸಂಗ್ರಹಿಸಿದ್ದು, ಹರಾಜಿನಿಂದ ಬಂದ ಹಣವನ್ನು ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲು ಮುಂದಾಗಿದೆ.

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.
MOST READ: ಏಪ್ರಿಲ್ 1ರಿಂದ ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ತಪ್ಪದೇ ತಿಳಿಯಿರಿ..!

ರಾಯಲ್ ಎನ್‌ಫೀಲ್ಡ್‌ಗೆ ತಳಮಳ..!
ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ಇದಕ್ಕೆ ಉದಾಹರಣೆ ಅಂದ್ರೆ, ಕಳೆದ ವರ್ಷ ಅಕ್ಟೋಬರ್‌ನಿಂದ ಈ ತನಕ ಬೈಕ್ ಮಾರಾಟದಲ್ಲಿ ಶೇ.10ರಿಂದ 15ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಜಾವಾ ಹೊಸ ಬೈಕ್‌ಗಳ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದೆ.
MOST READ: ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳಲಿವೆ ಹ್ಯುಂಡೈ-ಕಿಯಾ ಇವಿ ಕಾರುಗಳು

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಜಾವಾ ಸಂಸ್ಥೆಯು ಸದ್ಯ ಹೊಸ ಬೈಕ್‌ಗಳ ವಿತರಣೆಗೆ ಚಾಲನೆ ನೀಡಿದ್ದು, ಮತ್ತಷ್ಟು ಹೊಸ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿ ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.


Click it and Unblock the Notifications








