ಪೆಟ್ರೋಲ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾಡಲಿದೆ ಈ ಸಾಧನ..!
ಮೆಲಾದತ್ ಆಟೋ ಕಾಂಪೊನೆಂಟ್ಸ್ ಕಂಪನಿಯನ್ನು 2016ರಲ್ಲಿ ಆರಂಭಿಸಲಾಯಿತು. ಈ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಬಿಡಿಭಾಗವು ಪೆಟ್ರೋಲ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಹೈಬ್ರಿಡ್ ಸ್ಕೂಟರ್ ಆಗಿ ಬದಲಿಸುತ್ತದೆ.

ಈ ಕಂಪನಿಯನ್ನು ರಾಕೇಶ್ ಮೆಲಾದತ್ ಕರುಣಾಕರನ್‍ರವರು ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುವ ಮುಂದಾಲೋಚನೆಯಿಂದ ಶುರು ಮಾಡಿದರು. ಕರುಣಾಕರನ್‍ರವರ ಪ್ರಕಾರ ನಿಜವಾದ ಸಮಸ್ಯೆಯು ಎಲೆಕ್ಟ್ರಿಕ್ ವಾಹನಗಳಿಗೆ ಅಳವಡಿಸಿಕೊಳ್ಳುವಾಗ ಬರುವುದಿಲ್ಲ. ಬದಲಿಗೆ ಅಳವಡಿಸಿಕೊಂಡ ನಂತರ ಎದುರಾಗಲಿದೆ.

ಡೀಸೆಲ್ ಪೆಟ್ರೋಲ್ ಎಂಜಿನ್‍ಗಳಿಂದ ಏನು ಮಾಡಲು ಸಾಧ್ಯವಿದೆ ಎಂದು ಕರುಣಾಕರನ್‍ರವರು ಹೇಳುತ್ತಾರೆ. ಅಂದ ಹಾಗೆ ಕರುಣಾಕರನ್‍ರವರು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮಾಜಿ ಉದ್ಯೋಗಿಯಾಗಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಮಾರುಕಟ್ಟೆಯಲ್ಲಿರುವ ವಾಹನಗಳನ್ನು ವಿಲೇವಾರಿ ಮಾಡುವ ದೊಡ್ಡ ಸಮಸ್ಯೆ ಎದುರಾಗಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುವುದರಿಂದ ವಾಹನಗಳ ಸಂಖ್ಯೆಯು ಸಹ ಹೆಚ್ಚಾಗುತ್ತದೆ.

ಇದರಿಂದ ಸೀಮಿತ ಸಂಖ್ಯೆಯಲ್ಲಿರುವ ಸೌಲಭ್ಯಗಳ ಮೇಲೆ ಒತ್ತಡ ಬೀಳುವುದರ ಜೊತೆಗೆ ಸಂಚಾರ ದಟ್ಟಣೆಯು ಹೆಚ್ಚಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಮೆಲಾದತ್ ಆಟೋ ಕಾಂಪೊನೆಂಟ್ ಕಂಪನಿಯು ಇ-ಕಿಟ್ ಅನ್ನು ತಯಾರಿಸಿದೆ.

ಈ ಇ-ಕಿಟ್‍ಗಳನ್ನು ಪೆಟ್ರೋಲ್ ಎಂಜಿನ್ ಹೊಂದಿರುವ ಸ್ಕೂಟರ್‍ಗಳಲ್ಲಿ ಅಳವಡಿಸಬಹುದು. ಅಳವಡಿಸಿದ ನಂತರ ಪೆಟ್ರೋಲ್ ಸ್ಕೂಟರ್ ಎಲೆಕ್ಟ್ರಿಕ್ ಹೈಬ್ರಿಡ್ ಸ್ಕೂಟರ್ ಆಗಿ ಬದಲಾಗುತ್ತದೆ. ಹೈಬ್ರಿಡ್ ಸ್ಕೂಟರ್ ಬ್ಯಾಟರಿ ಹಾಗೂ ಪೆಟ್ರೋಲ್‍ನಿಂದ ಚಲಿಸುತ್ತದೆ.

ಇ-ಕಿಟ್ ಅನ್ನು ಸ್ಕೂಟರ್‍ನಲ್ಲಿ ಯಾವುದೇ ಮಾಡಿಫೈ ಮಾಡದೇ ಅಳವಡಿಸಬಹುದು. ಕೇವಲ 30 ನಿಮಿಷದಲ್ಲಿ ಇ-ಕಿಟ್ ಅನ್ನು ಅಳವಡಿಸಬಹುದು. ಕಿಟ್ ಬೇಡದಿದ್ದಲ್ಲಿ ಯಾವುದೇ ಸಮಯದಲ್ಲಿ ಇದನ್ನು ತೆಗೆದುಹಾಕಬಹುದು.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಇ-ಕಿಟ್ ಯೂನಿವರ್ಸಲ್ ಆಗಿದ್ದು, 10 ಹಾಗೂ 12 ಇಂಚಿನ ಸ್ಟೀಲ್ ವ್ಹೀಲ್ ಹೊಂದಿರುವ ಯಾವುದೇ ಸ್ಕೂಟರ್‍ನಲ್ಲಿ ಅಳವಡಿಸಬಹುದು. ಇ ಕಿಟ್‍ನಲ್ಲಿ ಹೊರತೆಗೆಯಬಹುದಾದ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಮನೆಯಲ್ಲಿರುವ ಪವರ್ ಸಾಕೆಟ್ ಹಾಗೂ ರೆಗ್ಯುಲರ್ ಪವರ್ ಪ್ಲಗ್ ಮೂಲಕ ಚಾರ್ಜ್ ಮಾಡಬಹುದು.
MOST READ: ವಾಹನ ಡೀಲರ್‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಇದರಿಂದಾಗಿ ಯಾವುದೇ ಹೆಚ್ಚುವರಿಯಾದ ಚಾರ್ಜಿಂಗ್ ಸೌಲಭ್ಯದ ಅವಶ್ಯಕತೆ ಇರುವುದಿಲ್ಲ. ಈ ಇ-ಕಿಟ್‍ಗಳು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ ಎಂಬುದು ಕರುಣಾಕರನ್‍ರವರ ಅಭಿಪ್ರಾಯ.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಇದರ ಬಳಕೆಯಿಂದಾಗಿ 15%ನಷ್ಟು ವಾಯು ಮಾಲಿನ್ಯವು ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಇ-ಕಿಟ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದನ್ನು ಈಝೀ ಹೈಬ್ರಿಡ್ ಎಂಬ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿದೆ.

ದೇಶ್ಯಾದಂತವಿರುವ 30ಕ್ಕೂ ಹೆಚ್ಚು ಡೀಲರ್‍ಗಳು ಇ-ಕಿಟ್ ಅನ್ನು ಮಾರಾಟ ಮಾಡಲು ಆಸಕ್ತಿ ತೋರಿದ್ದಾರೆ. ಇದರ ಜೊತೆಗೆ ಮೆಲಾದತ್ ಆಟೋ ಕಾಂಪೊನೆಂಟ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ.

ಇದಕ್ಕಾಗಿ ಕಂಪನಿಯು ಬ್ರಷ್‍ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟರ್, ಬಿಎಲ್‍ಡಿಸಿ ಮೋಟರ್ ಕಂಟ್ರೋಲರ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ ಚಾರ್ಜರ್‍ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇವುಗಳೆಲ್ಲವನ್ನೂ ಭಾರತದಲ್ಲಿಯೇ ತಯಾರಿಸಲಿರುವುದು ವಿಶೇಷ.

ಮೆಲಾದತ್ ಕಂಪನಿಯ ಇ-ಕಿಟ್ ಯೋಜನೆಯನ್ನು ವೊಲ್ವೊ ಕನ್‍ಸ್ಟ್ರಕ್ಷನ್ ಎಕ್ವಿಪ್‍ಮೆಂಟ್ ಇಂಡಿಯಾದಂತಹ ಕಂಪನಿಗಳು ಬೆಂಬಲಿಸಿದ್ದು, ಪೆಟ್ರೋಲ್ ಸ್ಕೂಟರ್‍ಗಳಿಗಾಗಿ ಇ-ಕಿಟ್ ಆಟೋ ಉದ್ಯಮದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಇದನ್ನು ಉದ್ಯಮದಲ್ಲಿರುವ ಪ್ರತಿಯೊಬ್ಬರೂ ಬೆಂಬಲಿಸಬೇಕೆಂದು ಹೇಳಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬೇರೆ ಕಂಪನಿಗಳು ಮಾಡದ ಕೆಲಸವನ್ನು ಕರುಣಾಕರನ್‍ರವರ ಮೆಲಾದತ್ ಕಂಪನಿಯು ಮಾಡಿದೆ. ಮೆಲಾದತ್ ಆಟೋ ಕಾಂಪೊನೆಂಟ್ ಮುಂಬರುವ ದಿನಗಳಲ್ಲಿ ಬೇರೆ ವಾಹನಗಳಿಗೂ ಸಹ ಇ-ಕಿಟ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ.


Click it and Unblock the Notifications