YouTube

ಭಾರತದಲ್ಲಿ ಬರಲಿದೆ ಭಾರೀ ಅಗ್ಗದ ಬೆಲೆಯ ಹೋಂಡಾ 100 ಸಿಸಿ ಮೋಟಾರ್‌ಸೈಕಲ್..!

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ, ಮಾರ್ಚ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಎಂಟ್ರಿ ಲೆವೆಲ್ 100 ಸಿಸಿ ಮೋಟಾರ್‌ಸೈಕಲ್ ಅನ್ನು ಪರಿಚಯಿಸಲಿದೆ ಎಂದು ಸದ್ಯ ವರದಿಯಾಗಿದೆ. ಈ ಮೋಟಾರ್‌ಸೈಕಲ್ ರೆಡಿ ಮಾಡಲು ಹಲವು ದಿನಗಳಿಂದ ಕಂಪನಿ ಕೆಲಸ ಮಾಡುತ್ತಿದೆ.

2021ರಲ್ಲಿ, ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಅಧ್ಯಕ್ಷ, ಅಟ್ಸುಶಿ ಒಗಾಟಾ, ಕಂಪನಿಯು ನೂತನ 100 ಸಿಸಿ ಮೋಟಾರ್‌ಸೈಕಲ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಪ್ರಸ್ತುತ, ಹೊಂಡಾ ಕಂಪನಿ ಶೈನ್, ಎಸ್‌ಪಿ 125 ಮತ್ತು ಯುನಿಕಾರ್ನ್‌ ಬೈಕ್ ಮಾರಾಟದೊಂದಿಗೆ ಉತ್ತಮ ಪ್ರಗತಿಯನ್ನು ದಾಖಲಿಸುತ್ತಿದೆ. ಸಿಡಿ 110 ಹೋಂಡಾದಿಂದ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿದ್ದು, ಇದರ ಬೆಲೆ ಸುಮಾರು ರೂ.71,000 (ಎಕ್ಸ್ ಶೋ ರೂಂ) ಇದೆ.

ಹೊಸ ಸಿಡಿ 110 ಬೈಕ್, 110 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 7,500 rpmನಲ್ಲಿ 8.7 bhp ಗರಿಷ್ಠ ಪವರ್ ಮತ್ತು 5,500 rpmನಲ್ಲಿ 9.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮುಂಬರುವ 100 ಸಿಸಿ ಆಧಾರಿತ ಹೋಂಡಾದ ನೂತನ ಮೋಟಾರ್‌ಸೈಕಲ್, ಹೀರೋ ಮೋಟೋಕಾರ್ಪ್‌ನ ಅತ್ಯಂತ ಜನಪ್ರಿಯ ಮಾದರಿಯಾದ ಸ್ಪ್ಲೆಂಡರ್ ಗೆ ಭಾರೀ ಪೈಪೋಟಿ ನೀಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಹೀರೋ ಸ್ಪ್ಲೆಂಡರ್ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನವಾಗಿದೆ. ಇದು ಮಾಸಿಕ ಮಾರಾಟ ಪಟ್ಟಿಯಲ್ಲಿ ಕೆಲವೊಮ್ಮೆ ಹೋಂಡಾ ಆಕ್ಟಿವಾಕ್ಕಿಂತ ಮುಂದಿರುತ್ತದೆ. ಹೋಂಡಾದ ಹೊಸ ಬೈಕ್ ಅನ್ನು ಸ್ಪ್ಲೆಂಡರ್ ಪ್ಲಸ್‌ಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುವಂತೆ ರೆಡಿ ಮಾಡಲಾಗುತ್ತಿದೆ. ಜೊತೆಗೆ ಮುಂಬರುವ ಮಾದರಿಯನ್ನು ಹೆಚ್ಚು ಇಂಧನ ಕಾರ್ಯಕ್ಷಮತೆ ನೀಡುವಂತೆ ವಿನ್ಯಾಸಗೊಳಿಸಲಾಗುತ್ತಿದ್ದು, ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುವಂತೆ ಮಾಡಲು ಕಂಪನಿ ಮುಂದಾಗಿದೆಯಂತೆ. ಮುಂದಿನ ವರ್ಷ ಆಕ್ಟಿವಾವನ್ನು ಆಧರಿಸಿ, ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ ಲಾಂಚ್ ಮಾಡಲು ಹೋಂಡಾ ತಯಾರಿ ನಡೆಸಿದೆ.

ಈ ನೂತನ ಬೈಕ್ ಮೂಲಕ 100 ಸಿಸಿ ಪ್ರಯಾಣಿಕ ದ್ವಿಚಕ್ರ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಪ್ರಾಬಲ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲದೆ, ಟಿವಿಎಸ್ Ntorq 125ನಂತಹ ಸ್ಪೋರ್ಟಿ ಸ್ಕೂಟರ್‌ಗೆ ಪೈಪೋಟಿ ನೀಡಲು ಹೋಂಡಾ, ನೂತನ 125 ಸಿಸಿ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಜೊತೆಗೆ ಎಲ್ಲರ ಹಾಟ್ ಫೆವರೇಟ್ ಆಗಿರುವ ರಾಯಲ್ ಎನ್‌ಫೀಲ್ಡ್ 350 ಸಿಸಿ ಮೋಟಾರ್‌ಸೈಕಲ್‌ಗಳ ವಿರುದ್ದ ಸ್ಪರ್ಧೆಯೊಡ್ಡಲು ತನ್ನ 350 ಸಿಸಿ ವಿಭಾಗವನ್ನು ಹೋಂಡಾ ಬಲಪಡಿಸಬಹುದು.

ನಿನ್ನೆಯಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6G H-Smart ರೂಪಾಂತರವನ್ನು ಪರಿಚಯಿಸಿದ್ದು, ಒಟ್ಟು ಮೂರು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್. ಇವುಗಳ ಬೆಲೆ ಕ್ರಮವಾಗಿ ರೂ.74,536, ರೂ.77,036 ಮತ್ತು ರೂ.80,537 ರೂ. ಇದೆ. ಆದರೆ, ಗ್ರಾಹಕರು ಕೊಂಚ ಹೆಚ್ಚಿನ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್ ವೇರಿಯಂಟ್‌ ಕೊಳ್ಳಲು ಡಿಲಕ್ಸ್ ವೇರಿಯಂಟ್‌ಗಿಂತ ರೂ.3,001 ಅಧಿಕ ಹಣವನ್ನು ವ್ಯಯಿಸಬೇಕು.

ಈ ನೂತನ ಹೋಂಡಾ ಆಕ್ಟಿವಾ 6G, ತನ್ನ ಹಿಂದಿನ ಮಾದರಿಯಂತೆ ಎಂಜಿನ್ ಅನ್ನು ಹೊಂದಿದೆ. 109.51 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, 7.73 bhp ಗರಿಷ್ಠ ಪವರ್ ಮತ್ತು 8.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, 1 ಕೆಜಿ ಹಗುರವಾಗಿದೆ. ಒಟ್ಟು 6 ಬಣ್ಣಗಳ ಆಯ್ಕೆಗಳಲ್ಲಿ ನೂತನ ಆಕ್ಟಿವಾ 6G ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಡಿಸೆಂಟ್ ಬ್ಲೂ, ರೆಬೆಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಪಿಯರ್ ಸೈರನ್ ಬ್ಲೂ.

ಹೋಂಡಾದ ಅಗ್ಗದ ಬೈಕ್ ಆಗಿರುವ ಸಿಡಿ 110 ಡ್ರೀಮ್ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ . ಅವುಗಳೆಂದರೆ, ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್. ಎರಡು ರೂಪಾಂತರಗಳು ತಲಾ ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಸ್ಟ್ಯಾಂಡರ್ಡ್ ಮಾಡೆಲ್ ಬ್ಲ್ಯಾಕ್ ಜೊತೆಗೆ ಬ್ಲೂ, ಬ್ಲ್ಯಾಕ್ ವಿತ್ ಕ್ಯಾಬಿನ್ ಗೋಲ್ಡ್, ಬ್ಲ್ಯಾಕ್ ವಿತ್ ಗ್ರೇ ಮತ್ತು ಬ್ಲ್ಯಾಕ್ ವಿತ್ ರೆಡ್ ಬಣ್ಣಗಳನ್ನು ಹೊಂದಿದೆ. ಡಿಲಕ್ಸ್ ರೂಪಾಂತರ ಇಂಪೀರಿಯಲ್ ರೆಡ್ ಮೆಟಾಲಿಕ್, ಜೆನಿ ಗ್ರೇ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿದಾರರಿಗೆ ಸಿಗಲಿದೆ.

Most Read Articles

Kannada
English summary
Honda launch new 100cc motorcycle in march details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X