ಮತ್ತೆ ಬರಲಿದೆ ಯಮಹಾ RX 100 ಬೈಕ್... ಭಾರತದಲ್ಲಿ ನವಯುಗ ಸೃಷ್ಟಿಯಾಗುತ್ತಾ?

ಯಮಹಾ ತನ್ನ 'RX 100' ಬೈಕ್ ಅನ್ನು ಶೀಘ್ರದಲ್ಲಿ ರೀ-ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಈ ಬೈಕ್ ಯಾವಾಗ ಮಾರುಕಟ್ಟೆಗೆ ಬರಲಿದೆ? ಹಳೆ ಮಾಡೆಲ್ ಬೈಕ್ ಮತ್ತೆ ವಾಪಸ್ ಬರುತ್ತಾ ಅಥವಾ ಕೆಲವು ಬದಲಾವಣೆಗಳು ಇದೆಯೇ? ಯಾವ ಎಂಜಿನ್ ಬಳಕೆ ಮಾಡಲಾಗಿದೆ ಸೇರಿದಂತೆ ಹೆಚ್ಚಿನ ವಿವರವನ್ನು ತಿಳಿಯೋಣ ಬನ್ನಿ.

'ಯಮಹಾ ಆರ್‌ಎಕ್ಸ್ 100' ಎನ್ನುವುದು ಕೇವಲ ಪದವಲ್ಲ.. ಇದು ಅನೇಕ ಬೈಕ್ ಪ್ರೇಮಿಗಳ ಹಾಟ್ ಫೆವರೇಟ್ ಎಂದು ಹೇಳಬಹುದು. 2000ಕ್ಕೂ ಮುನ್ನ ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಮಾರಾಟವಾಗುತ್ತಿದ್ದ ಈ ಬೈಕ್, ಹಲವಾರು ಅಭಿಮಾನಿಗಳನ್ನು ಪಡೆದುಕೊಂಡಿತ್ತು. ಇಂದಿಗೂ ಅನೇಕ ಮಂದಿ ಈ ಬೈಕ್ ಅನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ನಿರ್ವಹಣೆ ಮಾಡುತ್ತಿರುವುದನ್ನು ಕಾಣಬಹುದು. ರಸ್ತೆಯಲ್ಲಿ ಈ ಬೈಕ್ ಸಂಚರಿಸಿದ ತಕ್ಷಣ, ಎಲ್ಲರ ಕಣ್ಣುಗಳು ಇದರ ಕಡೆಗೆ ತಿರುಗಿ ನೋಡುವಂತೆ ಮಾಡುತ್ತದೆ.

ಮತ್ತೆ ಬರಲಿದೆ ಯಮಹಾ RX 100 ಬೈಕ್... ಭಾರತದಲ್ಲಿ ನವಯುಗ ಸೃಷ್ಟಿಯಾಗುತ್ತಾ?

ಬಹುತೇಕ ಯುವ ಜನರಿಗೆ ಈ ಬೈಕ್ ಆಕರ್ಷಣೆಯಾಗಲು ಕಾರಣ, ಅದರ ಎಂಜಿನ್ ಒಳಗಿನಿಂದ ಬರುವ ಶಬ್ದ. ಪ್ರಸ್ತುತ ಯಮಹಾ ಕಂಪನಿ, ಈ ಬೈಕಿನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ಹೇಳಬಹುದು. ಅಷ್ಟೊಂದು ಜನಪ್ರಿಯತೆಯ ಹೊರತಾಗಿಯೂ ಯಮಹಾ ಕಂಪನಿ, ಈ ಬೈಕ್ ಮಾದರಿ ಉತ್ಪಾದನೆಯನ್ನು ನಿಲ್ಲಿಸಲು ಪ್ರಮುಖ ಕಾರಣವೆಂದರೆ, ಅದರ ಎಂಜಿನ್ನೇ ಆಗಿದೆ. ಈ ಬೈಕಿನಲ್ಲಿ 2 - ಸ್ಟೋಕ್ ಎಂಜಿನ್ ಅನ್ನು ಉಪಯೋಗ ಮಾಡಲಾಗಿತ್ತು.

ಭಾರತದಲ್ಲಿ ಸದ್ಯ ಸ್ಟೋಕ್ ಎಂಜಿನ್ ಬಳಕೆ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಯಲ್ಲಿವೆ. ಇದರಿಂದಾಗಿ ಸ್ಟೋಕ್ ಎಂಜಿನ್ ಹೊಂದಿರುವ ಬೈಕುಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ. ಇನ್ನು, ಈ ಯಮಹಾ RX 100 ಬೈಕ್ ಇಂದಿಗೂ ಎಲ್ಲರನ್ನು ತನ್ನತ್ತ ಆಕರ್ಷಿಸಲಿದ್ದು, ಹಲವು ಮಂದಿ ಈ ಬೈಕ್ ಅನ್ನು ಲೈಕ್ ಮಾಡುತ್ತಾರೆ. ಅಲ್ಲದೆ, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಕೇಳಿದಷ್ಟು ದುಪ್ಪಟ್ಟು ಹಣ ಕೊಟ್ಟು ಖರೀದಿಸುತ್ತಿದ್ದಾರೆ.

'RX 100' ಬೈಕ್ ಅನ್ನು ಮತ್ತೆ ಮಾರುಕಟ್ಟೆಗೆ ತರುವಂತೆ ಹಲವರು ಮಂದಿ ಮನವಿ ಮಾಡಿದ್ದಾರೆ. RX100 ಹೆಸರಿಗೆ ಇಷ್ಟು ದೊಡ್ಡ ಕ್ರೇಜ್ ಹೊಂದಿರುವುದನ್ನು ಮನಗಂಡಿರುವ ಯಮಹಾ ಕಂಪನಿ, ಅದೇ ಹೆಸರಿನಲ್ಲಿ ಮತ್ತೊಂದು ಬೈಕ್ ಅನ್ನು ಲಾಂಚ್ ಮಾಡುವ ನಿರೀಕ್ಷೆಯಿದೆ. ಆದರೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯಮಹಾ ಇಂಡಿಯಾದ ಅಧ್ಯಕ್ಷ ಇಶಿನ್ ಸಿಹಾನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ, ಯಮಹಾ ಕಂಪನಿ 'RX 100' ಬೈಕ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುತ್ತದೆ. ಅದಕ್ಕಾಗಿ ಬೇರೆ ಬೈಕ್‌ಗಳಿಗೆ ಈ ಹೆಸರನ್ನು ಬಳಸುತ್ತಿಲ್ಲ' ಎಂದು ಹೇಳಿದ್ದಾರೆ.

ಇದರೊಂದಿಗೆ ಯಮಹಾ RX 100 ಬೈಕ್ ಮತ್ತೆ ದೇಶೀಯ ಮಾರುಕಟ್ಟೆಯಲ್ಲಿ ಬರುವುದು ಖಚಿತವಾಗಿದೆ. ಯಮಹಾ ಕಂಪನಿ, ಹೊಸ ಬೈಕ್ ಅನ್ನು ಹಿಂದಿನ RX 100 ವಿನ್ಯಾಸದಲ್ಲಿ ಲಾಂಚ್ ಮಾಡಲಿದೆ. ಆದರೆ, ಎಂಜಿನ್ ವಿಷಯಕ್ಕೆ ಬಂದರೆ, ಹಳೆಯ 2 ಸ್ಟೋಕ್ ಎಂಜಿನ್‌ ಬದಲಿಗೆ ಈಗಿರುವ ಎಂಜಿನ್ ಬಳಸಿ ವಿನ್ಯಾಸಗೊಳಿಸಿ, ಗ್ರಾಹಕರಿಗೆ ಖರೀದಿಗೆ ನೀಡಬಹುದು. ಇವನ್ನೆಲ್ಲ ಗಮನಿಸಿದಾಗ ಈ ಬೈಕ್, ನೋಡಲು ಅತ್ಯಾಕರ್ಷಕವಾಗಿ ಇರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯಮಹಾ ಕಂಪನಿ ಈಗಾಗಲೇ 125 ಸಿಸಿ, 150 ಸಿಸಿ ಮತ್ತು 250 ಸಿಸಿ ಬೈಕ್ ಎಂಜಿನ್‌ ಹೊಂದಿರುವ ಬೈಕುಗಳನ್ನು ಮಾರಾಟ ಮಾಡುತ್ತಿದೆ. ಯಮಹಾ, ಹೊಸ RX 100 ಬೈಕಿನಲ್ಲಿ 150 ಅಥವಾ 125 ಸಿಸಿ ಎಂಜಿನ್ ಅನ್ನು ಬಳಕೆ ಮಾಡುವ ಸಾಧ್ಯತೆಯಿದೆ. ಈ ಬೈಕ್ ಯಾವಾಗ ರೆಡಿಯಾಗಲಿದೆ ಮತ್ತು ಮಾರಾಟಕ್ಕೆ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ, ಮೂಲಗಳ ಪ್ರಕಾರ ಗ್ರಾಹಕರು ಬಹಳ ಸಮಯ ಕಾಯಬೇಕಾಗಿದೆ.

ಯಮಹಾ ಕಂಪನಿ ಈ ಬಹುನಿರೀಕ್ಷಿತ RX 100 ಬೈಕ್ ಅನ್ನು 2025 ಅಥವಾ 2026ರ ಅಂತ್ಯದ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. RX 100 ಬೈಕ್ ಮೂಲಕ ಯಮಹಾ ಕಂಪನಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯೋಜಿಸುತ್ತಿದೆ. ಜೊತೆಗೆ ದೇಶದಲ್ಲಿ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕ್ರಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಒಂದೊಮ್ಮೆ ಇದು ಸಾಧ್ಯವಾದರೆ ಯಮಹಾ ಕಂಪನಿಗೆ ಹಿಂದಿಡಲು ಬೇರೆ ಯಾವುದೇ ದ್ವಿಚಕ್ರ ವಾಹನ ತಯಾರಕ ಕಂಪನಿ ಕೈಯಲ್ಲಿ ಆಗುವುದಿಲ್ಲ.

ಈ ಬೈಕ್ ಖರೀದಿಗೆ ಲಭ್ಯವಾದ ಮೇಲೆ ಬಜಾಜ್, ಟಿವಿಎಸ್ ಮತ್ತು ಹೋಂಡಾದ ಹಲವು ಬೈಕ್‌ಗಳಿಗೆ ಭಾರೀ ಪೈಪೋಟಿ ನೀಡುವ ನಿರೀಕ್ಷೆಯಿದೆ. ಅಲ್ಲದೇ, ಹೆಚ್ಚು ಜನರನ್ನು ಸೆಳೆಯಲು ಕಡಿಮೆ ಬೆಲೆಯಲ್ಲಿ ಈ ಬೈಕ್ ತಯಾರಿಸಲು ಕಂಪನಿ ತೀರ್ಮಾನ ಮಾಡಿದೆ. ಹಾಗಾಗಿ, ಈ ಬೈಕ್ ಮಾರುಕಟ್ಟೆಗೆ ಬಂದಾಗ, ಇತರ ಹಲವು ಕಂಪನಿಗಳ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಬಹುದು. ಯಮಹಾ 'RX 100' ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿರಿ.

Most Read Articles

Kannada
Read more on ಯಮಹಾ yamaha
English summary
Yamaha rx 100 relaunch india soon details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X