ಭವಿಷ್ಯದ ನೇರ, ದಿಟ್ಟ ಪಯಣಕ್ಕೆ ಹೋಂಡಾ ಹೈಡ್ರೋಜನ್ ಕಾರು
ಈ ಬಾರಿಯ ಟೊಕಿಯೊ ಮೋಟಾರ್ ಶೋ ಹಲವಾರು ಕಾರಣಗಳಿಗಾಗಿ ಅತಿ ಹೆಚ್ಚಿನ ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತದೆ. ಈಗಾಗಲೇ ನಾವು 90 ಕೀ.ಮೀ.ಗಳಷ್ಟು ಮೈಲೇಜ್ ನೀಡಬಲ್ಲ ಫೋಕ್ಸ್‌ವ್ಯಾಗನ್ ಟ್ವಿನ್ ಅಪ್ ಕಾರಿನ ಕುರಿತು ಮಾಹಿತಿ ಪಡೆದಿದ್ದೆವು.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇದರ ಬೆನ್ನಲ್ಲೇ ಇನ್ನೊಂದು ವೈವಿಧ್ಯಮಯ ಕಾರಿನ ಪರಿಕಲ್ಪನೆ ಸೃಷ್ಟಿ ಮಾಡುವುದರಲ್ಲಿ ಜಪಾನ್ ಮೂಲದವರೇ ಆದ ಹೋಂಡಾ ಸಂಸ್ಥೆ ಯಶಸ್ವಿಯಾಗಿದೆ. ಹೌದು, ಹೋಂಡಾ ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಕಾನ್ಸೆಪ್ಟ್ ಟೊಕಿಯೊ ಮೋಟಾರ್ ಶೋದಲ್ಲಿ ಅನಾವರಣಗೊಂಡಿದ್ದು, ಭವಿಷ್ಯದ ಕಾರು ಎಂಬ ಪ್ರತೀತಿ ಪಡೆದಿದೆ.
ಇನ್ನು ಇತಿಹಾಸದತ್ತ ಒಮ್ಮೆ ಇಣುಕಿ ನೋಡಿದರೆ ಹೈಡ್ರಜನ್ ಕಾರು ಉತ್ಪಾದಿಸುವುದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಹೋಂಡಾ, ತನ್ನ ಮೊದಲ ಫ್ಯೂಯೆಲ್ ಸೆಲ್ ಕಾರನ್ನು 1999ನೇ ಇಸವಿಯಲ್ಲಿ ಹೊರತಂದಿತ್ತು. ಇದೀಗ ಮುಂದಿನ ತಲೆಮಾರಿನ ಹೈಡ್ರಜನ್ ಫ್ಯೂಯೆಲ್ ಸೆಲ್ ಕಾರನ್ನು ಸಿದ್ಧಗೊಳಿಸುತ್ತಿದೆ.

ಅಷ್ಟಕ್ಕೂ ಹೋಂಡಾ ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ವರ್ಷನ್ ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅಂದರೆ 2015ರಲ್ಲೇ ಇದು ತವರೂರಾದ ಜಪಾನ್, ಅಮೆರಿಕ ಮತ್ತು ಯುರೋಪ್ ದೇಶಗಳಿಗೆ ಕಾಲಿಡಲಿದೆ. ಹಾಗಿದ್ದರೂ ಇದು ನಿಗದಿತ ಆವೃತ್ತಿಗಳಿಗಷ್ಟೇ ಸೀಮಿತವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ನೂತನ ತಲೆಮಾರಿನ ಹೈಡ್ರೋಜನ್ ಕಾರು, ಡಿಸೈನ್‌ನಿಂದ ಹಿಡಿದು ಎಂಜಿನ್ ಮಾನದಂಡಗಳ ವರೆಗೆ ಹಿಂದಿನ ಆವೃತ್ತಿಗಿಂತ ಸಾಕಷ್ಟು ವಿಭಿನ್ನತೆಯನ್ನು ಹೊಂದಿರಲಿದೆ.

ನೂತನ ಹೋಂಡಾ ಹೈಡ್ರೋಜನ್ ಕಾರಿನ ಒಳಮೈಯಲ್ಲಿ ಹೆಚ್ಚಿನ ಕ್ಯಾಬಿನ್ ಸ್ಪೇಸ್ ಕೊಡಲಾಗಿದೆ. ಅಂದರೆ ಐದು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ಇನ್ನು ಹೆಚ್ಚು ಹೇಳಬೇಕೆಂದರೆ ಹೈಡ್ರೋಜನ್ ಫ್ಯೂಯೆಲ್ ಸೆಲ್ ನಿರ್ವಹಣೆಯತ್ತ ಹೋಂಡಾ ಹೆಚ್ಚು ಗಮನ ಹರಿಸಿದೆ. ಅಂದರೆ ಹಿಂದಿನ ಆವೃತ್ತಿಗಿಂತಲೂ ಶೇಕಡಾ 60ರಷ್ಟು ಹೆಚ್ಚು ನಿರ್ವಹಣೆಯನ್ನು ಇದು ನೀಡಲಿದೆ ಎಂದು ತಯಾರಕರು ಅಭಿಪ್ರಾಯಪಡುತ್ತಾರೆ.

ಅಷ್ಟೇ ಯಾಕೆ ಹೋಂಡಾ ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವಾಹನ, 500 ಕೀ.ಮೀ. ರೇಂಜ್ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಆ ಬಳಿಕ ದ್ರವ ರೂಪದ ಹೈಡ್ರೋಜನ್ ಅನಿಲವನ್ನು ಮತ್ತೆ ತುಂಬಿಸಬೇಕಾಗುತ್ತದೆ.

ಹೋಂಡಾದ ಫ್ಯೂಚರ್ ಡೈರಕ್ಷನ್ ಫಾರ್ ಫ್ಯೂಯೆಲ್ ಸೆಲ್ ವೆಹಿಕಲ್ ಅಂಗವಾಗಿ ನೂತನ ವಾಹನ ಸಿದ್ಧಗೊಳಿಸಲಾಗುತ್ತದೆ. ಇದು ಪ್ರಾಯೋಗಿಕವಾಗಿ ನೈಜ ಭವಿಷ್ಯವನ್ನು ಸಾರುತ್ತದೆ ಎಂದಿದೆ.

ಇವೆಲ್ಲವೂ ಎಲೆಕ್ಟ್ರಿಕ್ ಡ್ರೈವ್ ತಂತ್ರಜ್ಞಾನದ ವಾಹನಗಳಲ್ಲಿ ಸುಧಾರಣೆ ಮಾಡಲು ನೆರವಾಗಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಪಯಣವನ್ನು ಖಾತ್ರಿಪಡಿಸಲಿದೆ.


Click it and Unblock the Notifications








