ಮಾರುತಿ ಬೆಸ್ಟ್; ಟಾಪ್ 10 ಪಟ್ಟಿಯಲ್ಲಿ ಹ್ಯುಂಡೈ, ನ್ಯಾನೋ
2012ನೇ ಸಾಲಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಸಣ್ಣ ಕಾರುಗಳು ಮತ್ತೊಮ್ಮೆ ಅಧಿಪತ್ಯ ಸಾಧಿಸಿವೆ. ಅಂದರೆ ದೇಶದ ಮಧ್ಯಮ ವರ್ಗದ ಜನರು ಸಣ್ಣ ಕಾರುಗಳತ್ತ ಹೆಚ್ಚು ಮೊರೆ ಹೋಗುತ್ತಿರುವ ಪ್ರಕ್ರಿಯೆ ಕಂಡುಬಂದಿದೆ.
2012ನೇ ಇಸವಿ ಅಂತ್ಯಗೊಂಡಿರುವಂತೆಯೇ ಬಿಡುಗಡೆಗೊಂಡಿರುವ ಪಟ್ಟಿಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಮತ್ತೊಮ್ಮೆ ಅಧಿಪತ್ಯ ಸಾಧಿಸಿದೆ. ಹಾಗಿದ್ದರೂ ಮಾರುತಿ ಬೇಡಿಕೆ ಕುಸಿದಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ.
ಈ ನಡುವೆ ದೇಶಕ್ಕೆ ಅತಿ ಚಿಕ್ಕ ಬಜೆಟ್ ಕಾರು ಪರಿಚಯಿಸಿದ್ದ ಟಾಟಾ ಮೋಟಾರ್ಸ್‌ನ ನ್ಯಾನೋ ಅಮೋಘ ಸಾಧನೆ ಮಾಡಿದ್ದು, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ನ್ಯಾನೋ ಡೀಸೆಲ್ ಹಾಗೂ ಮತ್ತಷ್ಟು ಪವರ್‌ಫುಲ್ ಎಂಜಿನ್ ಜೋಡಣೆಯಾಗಲಿರುವಂತೆಯೇ ಉತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದೇಶದ ಕಾರು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪಾರುಪತ್ಯ ಮೆರೆದಿರುವ ಮಾರುತಿಯ ಅತಿ ಜನಪ್ರಿಯ ಆಲ್ಟೊ ಕಾರು ನಂ. 1 ಸ್ಥಾನ ಆಲಂಕರಿಸಿದೆ. ಹಾಗಿದ್ದರೂ 2011ನೇ ಸಾಲಿಗೆ ಹೋಲಿಸಿದಾಗ ಶೇಕಡಾ 9.28ರಷ್ಟು ಕುಸಿತ ಅನುಭವಿಸಿದೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿಯ ಬ್ರಾಂಡ್‌ಗಳು ಕಾಣಿಸಿಕೊಂಡಿರುವುದು ನಿರೀಕ್ಷಿತ ಬೆಳವಣಿಗೆಯಾಗಿದೆ. ಆಲ್ಟೊ ಬಳಿಕ ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಹಾಗೂ ವಾಗನ್ ಆರ್ ಅನುಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳನ್ನು ಆಲಂಕರಿಸಿಕೊಂಡಿದೆ. ಹಾಗೆಯೇ ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್ ಕಾರುಗಳು ಕ್ರಮವಾಗಿ ಶೇ. 51.83 ಹಾಗೂ 56.31ರಷ್ಟು ಭರ್ಜರಿ ಏರಿಕೆಯನ್ನು ದಾಖಲಿಸಿವೆ.
ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕೂಡಾ ಉತ್ತಮ ಪ್ರಗತಿ ದಾಖಲಿಸಿದೆ. ಈ ಪೈಕಿ ಐ10 ಶೇ. 29.85ರಷ್ಟು ಕುಸಿತ ದಾಖಲಿಸಿದ್ದರೂ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಆಲ್ಟೊಗೆ ಪ್ರಬಲ ಪೈಪೋಟಿ ಎನಿಸಿಕೊಂಡಿರುವ ಹ್ಯುಂಡೈ ಇಯಾನ್ ಹಾಗೂ ಐ20 ಆವೃತ್ತಿಗಳು ಕ್ರಮವಾಗಿ ಏಳು ಹಾಗೂ ಎಂಟನೇ ಸ್ಥಾಗಳಲ್ಲಿವೆ. ಕಳೆದ ಬಾರಿ ಒಂಬತ್ತನೇ ಸ್ಥಾನದಲ್ಲಿದ್ದ ಸಾಂಟ್ರೊ ಈ ಬಾರಿ ಟಾಪ್ 10 ಪಟ್ಟಿಯಿಂದ ಹೊರದಬ್ಬಲ್ಪಟ್ಟಿದೆ.
ಈ ನಡುವೆ ಭಾರಿ ಅಚ್ಚರಿ ಮೂಡಿಸಿರುವ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಕಳೆದ ಸಾಲಿನಲ್ಲಿ ಶೇ. 17.73ರಷ್ಟು ಏರಿಕೆ ದಾಖಲಿಸಿರುವ ನ್ಯಾನೋ ಒಂಬತ್ತನೇ ಸ್ಥಾನ ಆಲಂಕರಿಸಿದೆ. ಟಾಟಾ ಮೋಟಾರ್ಸ್‌ನ ಇತರ ಆವೃತ್ತಿಗಳಾದ ಇಂಡಿಕಾ ಆರನೇ ಸ್ಥಾನದಲ್ಲಿದೆ. ಆದರೆ ಟಾಟಾ ಇಂಡಿಗೊ ಕೂಡಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಏತನ್ಮಧ್ಯೆ ಭಾರತೀಯ ರಸ್ತೆಗಳಲ್ಲಿ ಸ್ಥಿರತೆ ಪ್ರದರ್ಶಿಸಿರುವ ಫೋರ್ಡ್ ಕಂಪನಿಯ ಜನಪ್ರಿಯ ಫಿಗೊ ಆವೃತ್ತಿ ಸತತ ಎರಡನೇ ಬಾರಿ ಹತ್ತನೇ ಸ್ಥಾನ ಉಳಿಸಿಕೊಂಡಿದೆ. ಹಾಗಿದ್ದರೂ ಮಾರಾಟದಲ್ಲಿ ಶೇ. 8.65ರಷ್ಟು ಕುಸಿತ ದಾಖಲಿಸಿದೆ.

2012 ಜನವರಿಯಿಂದ ನವೆಂಬರ್ ತಿಂಗಳ ವರೆಗಿನ ಮಾರಾಟದ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ. 2011ನೇ ಸಾಲಿಗೆ ಹೋಲಿಸಿದಾಗ ಈ 11 ತಿಂಗಳ ಅವಧಿಯಲ್ಲಿ ಭಾರತೀಯ ಗ್ರಾಹಕರು 1.87 ಮಿಲಿಯನ್ ಕಾರುಗಳ ಮಾಲಿಕರಾಗಿದ್ದಾರೆ. ಇದು ಕಳೆದ ಸಾಲಿನಲ್ಲಿ 1.78 ಮಿಲಿಯನ್ ಆಗಿತ್ತು. ಮಾರುತಿ ಸುಜುಕಿ ಡಿಜೈರ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ಸೆಡಾನ್ ಕಾರಾಗಿದೆ. ಅಂತೆಯೇ ಟಾಪ್ 10 ಪಟ್ಟಿಗಳ ಪೈಕಿ ಆರು ಡೀಸೆಲ್ ಕಾರುಗಳು ಕಾಣಿಸಿಕೊಂಡಿರುವುದು ಈ ಆವೃತ್ತಿಗಳ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಆಲ್ಟೊ ನಂ.1
2012: 1
2011: 1
2010: 1
ಮಾರಾಟದಲ್ಲಿ ಬದಲಾವಣೆ (2012 vs 2011): ಶೇಕಡಾ 9.28ರಷ್ಟು ಕುಸಿತ

ಸ್ವಿಫ್ಟ್ ನಂ. 2
2012: 2
2011: 4
2010: 4
ಮಾರಾಟದಲ್ಲಿ ಬದಲಾವಣೆ (2012 vs 2011): ಶೇಕಡಾ 51.83ರಷ್ಟು ಏರಿಕೆ

ಸ್ವಿಫ್ಟ್ ಡಿಜೈರ್ ನಂ. 3
2012: 3
2011: 6
2010: 6
ಮಾರಾಟದಲ್ಲಿ ಬದಲಾವಣೆ (2012 vs 2011): ಶೇಕಡಾ 56.31ರಷ್ಟು ಏರಿಕೆ

ವಾಗನ್ ಆರ್ ನಂ. 4
2012: 4
2011: 2
2010: 3
ಮಾರಾಟದಲ್ಲಿ ಬದಲಾವಣೆ (2012 vs 2011): ಶೇಕಡಾ 3.49ರಷ್ಟು ಕುಸಿತ

ಐ10 ನಂ. 5
2012: 5
2011: 3
2010: 3
ಮಾರಾಟ ಬದಲಾವಣೆ (2012 vs 2011): ಶೇಕಡಾ 29.85ರಷ್ಟು ಕುಸಿತ

ಇಂಡಿಕಾ ನಂ. 6
2012: 6
2011: 5
2010: 5
ಮಾರಾಟ ಬದಲಾವಣೆ (2012 vs 2011): ಶೇಕಡಾ 1.65ರಷ್ಟು ಕುಸಿತ

ಇಯಾನ್ ನಂ. 7
2012: 7

ಐ20 ನಂ. 8
2012: 8
2011: 7
2010: 9
ಮಾರಾಟ ಬದಲಾವಣೆ (2012 vs 2011): ಶೇಕಡಾ 7ರಷ್ಟು ಏರಿಕೆ

ನ್ಯಾನೋ ನಂ. 9
2012: 9
ಮಾರಾಟ ಬದಲಾವಣೆ (2012 vs 2011): ಶೇಕಡಾ 17.73ರಷ್ಟು ಏರಿಕೆ

ಫಿಗೊ ನಂ. 10
2012: 10
2011: 10
ಮಾರಾಟ ಬದಲಾವಣೆ (2012 vs 2011): ಶೇಕಡಾ 8.65ರಷ್ಟು ಕುಸಿತ

ಇಂಡಿಗೊ
2012: ಟಾಪ್ 10 ಪಟ್ಟಿಯಿಂದ ನಿರ್ಗಮನ
2011: 8
2010: 8
ಮಾರಾಟ ಬದಲಾವಣೆ (2012 vs 2011): ಶೇಕಡಾ 17.68ರಷ್ಟು ಕುಸಿತ

ಸಾಂಟ್ರೊ
2012: ಟಾಪ್ 10 ಪಟ್ಟಿಯಿಂದ ನಿರ್ಗಮನ
2011: 9
2010: 7
ಮಾರಾಟದಲ್ಲಿ ಬದಲಾವಣೆ (2012 vs 2011): ಶೇಕಡಾ 34.54ರಷ್ಟು ಕುಸಿತ


Click it and Unblock the Notifications








