ಕಸ ವಿಲೇವಾರಿ ನಿರ್ವಹಣಾ ವೆಚ್ಚವನ್ನು ತಗ್ಗಿಸಿದ ಎಲೆಕ್ಟ್ರಿಕ್ ವಾಹನಗಳ ಬಳಕೆ
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಯಾಣಿಕ ವಾಹನಗಳ ಜೊತೆಗೆ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ವಿಶೇಷ ಹಣಕಾಸು ನೆರವು ನೀಡುತ್ತಿದೆ. ಇದರಿಂದ ಸಾರಿಗೆ ವೆಚ್ಚಗಳಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದ್ದು, ಕಸವಿಲೇವಾರಿ ನಿರ್ವಹಣೆಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಮಾಡುತ್ತಿರುವುದು ವರದಾನವಾಗಿ ಪರಿಣಮಿಸಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಇಂಧನ ಆಧರಿತ ವಾಹನಗಳ ಬಳಕೆಯನ್ನು ತಗ್ಗಿಸಿ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನಗರಪ್ರದೇಶಗಳನ್ನು ಪೆಡಂಭೂತವಾಗಿ ಕಾಡುತ್ತಿರುವ ಕಸದ ಸಮಸ್ಯೆಯನ್ನು ನಿಗಿಸಲು ಡೀಸೆಲ್ ವಾಹನಗಳ ಬದಲಾಗಿ ಇದೀಗ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗಮನಹರಿಸಲಾಗುತ್ತಿದೆ. ಇದು ಇಂಧನ ಆಧರಿತ ವಾಹನ ನಿರ್ವಹಣಾ ವೆಚ್ಚಕ್ಕಿಂತೂ ಅತಿ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಬಹುದಾಗಿದ್ದು, ಕಸದ ಸಮಸ್ಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಗ್ಗಿಸಬಹುದಾಗಿದೆ.

ಹೌದು, ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕಸ ವಿಲೇವಾರಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಕಸ ವಿಲೇವಾರಿ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಕಳೆದ ವರ್ಷದ ಕಸ ವಿಲೇವಾರಿಗಾಗಿ 50 ಮೂರು ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಿದ್ದ ಕೊಯಿಮತ್ತೂರು ಮುನ್ಸಿಪಲ್ ಕಾರ್ಪೊರೇಷನ್ ಇದೀಗ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಿದ್ದು, ಅಧಿಕ ನಿರ್ವಹಣಾ ವೆಚ್ಚದ ಡೀಸೆಲ್ ಎಂಜಿನ್ ವಾಹನಗಳನ್ನು ಕಡಿತ ಮಾಡಲಾಗುತ್ತಿದೆ.

ಕಸ ವಿಲೇವಾರಿಯನ್ನು ಸಮರ್ಥವಾಗಿ ನಿಭಾಯಿಸಲು ಈ ಬಾರಿ 280ಕ್ಕೂ ಹೆಚ್ಚು ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಪೂರೈಕೆಗಾಗಿ ಟೆಂಡರ್ ಕರೆದಿರುವ ಕೊಯಿಮತ್ತೂರು ಮುನ್ಸಿಪಲ್ ಕಾರ್ಪೊರೇಷನ್, 1 ಟನ್ ಕಸ ವಿಲೇವಾರಿ ಸಾಮರ್ಥ್ಯದ ವಾಹನಗಳನ್ನು ಖರೀದಿ ಮಾಡುತ್ತಿದೆ. ಇದರಿಂದಾಗಿ ಕಸದ ವಾಹನಗಳಿಂದ ಉಂಟಾಗುತ್ತಿದ್ದ ಭಾರೀ ಪ್ರಮಾಣದ ಮಾಲಿನ್ಯ ತಗ್ಗಲಿದ್ದು, ನಿರ್ವಹಣಾ ವೆಚ್ಚವೂ ಕಡಿಮೆಯಾಗುವುದರಿಂದ ಪಾಲಿಕೆಯ ಆದಾಯವು ಹೆಚ್ಚಲಿದೆ.

ಇನ್ನು ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಫೇಮ್ 2 ಯೋಜನೆ ಅಡಿ ಸಬ್ಸಡಿ, ಜಿಎಸ್‌ಟಿಯಲ್ಲಿ ಇಳಿಕೆ, ಆದಾಯ ತೆರಿಗೆಯಲ್ಲಿ ವಿನಾಯ್ತಿ ಸೇರಿದಂತೆ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕೂ ವಿಶೇಷ ಸೌಲತ್ತುಗಳನ್ನು ಘೋಷಣೆ ಮಾಡಿದೆ.

ಈ ಹಿಂದೆ ಫೇಮ್ 2ನೇ ಹಂತದ ಯೋಜನೆಯ ಮೂಲಕ ಭಾರೀ ಪ್ರಮಾಣದ ಸಬ್ಸಡಿ ಯೋಜನೆಯನ್ನು ಘೋಷಿಸಿದ್ದ ಕೇಂದ್ರವು ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.
MOST READ: ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ನೀತಿ ಆಯೋಗದ ಶಿಫಾರಸ್ಸು ಮೇರೆಗೆ ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೂ ಸಾಕಷ್ಟು ಸಹಕಾರಿಯಾಗಲಿದೆ.
MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಅಗಸ್ಟ್ 1ರಿಂದಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಇದಕ್ಕೆ ಹರ್ಷ ವ್ಯಕ್ತಪಡಿಸಿವೆ. ಯಾಕೆಂದ್ರೆ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಿ ಮಾರಾಟ ಪ್ರಮಾಣವು ಹೆಚ್ಚಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಗ್ರಿನ್ ಸೆಸ್ ಹೆಚ್ಚಾಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೂ ಇದು ಪೂರಕವಾಗಿದೆ.
MOST READ: ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು

2018ರಲ್ಲಿ ಘೋಷಣೆ ಮಾಡಲಾಗಿರುವ ಫೇಮ್ 2 ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಬೆಳವಣಿಗಾಗಿ ರೂ. 10 ಸಾವಿರ ಕೋಟಿ ಮೀಸಲು ಇರಿಸಲಾಗಿದ್ದು, 2018-19, 2019-20 ಮತ್ತು 2020-21ರ ಆರ್ಥಿಕ ವರ್ಷದ ಅವಧಿಗಾಗಿ ಈ ಮೀಸಲು ಹಣವನ್ನು ಖರ್ಚು ಮಾಡಲು ನಿರ್ಧರಿಸಲಾಗಿದೆ.

ಫೇಮ್ 2 ಯೋಜನೆ ಅಡಿ ಸಬ್ಸಡಿ ಸೇರಿದಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ಹಣ ವಿನಿಯೋಗ ಮಾಡಲಾಗುತ್ತಿದ್ದು, ಇದೀಗ ಜಿಟಿಎಸ್ ತಗ್ಗಿಸಿರುವುದು ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಲಿದೆ.

ಈ ಮೂಲಕ 2030ರ ವೇಳೆಗೆ ಶೇ.100 ರಷ್ಟು ವಾಹನಗಳನ್ನು ರಸ್ತೆಗಿಳಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಜಿಎಸ್‌ಟಿ ಇಳಿಕೆ ಪೂರಕವಾಗಿದ್ದು, ವ್ಯಯಕ್ತಿಕ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಜೊತೆ ಜೊತೆಗೆ ವಾಣಿಜ್ಯ ಬಳಕೆಯ ವಾಹನಗಳನ್ನು ಸಹ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯತ್ತ ಸೆಳೆಯುವುದೇ ಕೇಂದ್ರ ಸರ್ಕಾರದ ಮುಂದಿರುವುದು ಬಹುದೊಡ್ಡ ಸವಾಲಾಗಿದೆ.


Click it and Unblock the Notifications