ಬಿಎಸ್ 4 ವಾಹನ ಮಾರಾಟ ಅವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್ ನಕಾರ
ವಾಹನಗಳ ಹೊಗೆಯಿಂದಾಗಿ ವಾಯು ಮಾಲಿನ್ಯವು ಹದಗೆಡುತ್ತಿದೆ. ಈ ಕಾರಣಕ್ಕೆ ಹಾಲಿ ಇರುವ ಬಿಎಸ್ 4 ವಾಹನಗಳ ಮಾರಾಟವನ್ನು ಏಪ್ರಿಲ್ 1ರಿಂದ ಸ್ಥಗಿತಗೊಳಿಸಲಾಗುವುದು. ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಬಿಎಸ್ 4 ವಾಹನಗಳನ್ನು ಮಾರ್ಚ್ 31ರವರೆಗೆ ಮಾತ್ರ ರಿಜಿಸ್ಟರ್ ಮಾಡಿಸಬಹುದು. ಕೆಲವು ರಾಜ್ಯಗಳಲ್ಲಿ, ಬಿಎಸ್ 4 ವಾಹನಗಳನ್ನು ಮಾರ್ಚ್ 25ರವರೆಗೆ ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಈ ಕಾರಣಕ್ಕೆ ಡೀಲರ್ ಗಳು ಮಾರಾಟವಾಗದೇ ಉಳಿದಿರುವ ಬಿಎಸ್ 4 ವಾಹನಗಳ ಮಾರಾಟವನ್ನು ತೀವ್ರಗೊಳಿಸಿದ್ದಾರೆ.

ಈ ನಡುವೆ ಕರೋನಾ ವೈರಸ್ ನಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಶೋರೂಂಗಳಿಗೆ ಹೋಗುವ ಗ್ರಾಹಕರ ಸಂಖ್ಯೆ ಕುಸಿದಿದೆ. ಈ ಪ್ರಮಾಣವು ಸಾಮಾನ್ಯ ದಿನಗಳಿಗೆ ಹೋಲಿಸಿದರೆ 70%ನಷ್ಟು ಕಡಿಮೆಯಾಗಿದೆ ಎಂದು ಡೀಲರ್ ಕನ್ಸೋರ್ಟಿಯಂ ಹೇಳಿದೆ.

ನೌಕರರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಶೋರೂಂಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ವಾಹನ ತಯಾರಕ ಕಂಪನಿಗಳಿಗೆ ಹಾಗೂ ಡೀಲರ್ ಗಳಿಗೆ ನಷ್ಟ ಉಂಟಾಗುತ್ತಿದೆ.

ಬಿಎಸ್ 4 ವಾಹನಗಳ ಮಾರಾಟದ ಗಡುವನ್ನು ಮೇ 31ರವರೆಗೆ ಎರಡು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಭಾರತೀಯ ಆಟೋಮೊಬೈಲ್ ವಿತರಕರ ಸಂಘ (ಎಫ್‌ಎಡಿಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಕರೋನಾ ವೈರಸ್ ಸಮಸ್ಯೆಯಿಂದಾಗಿ, ಸದ್ಯದ ಸನ್ನಿವೇಶದಲ್ಲಿ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಡೀಲರ್ ಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅರ್ಜಿಯನ್ನು ತುರ್ತು ಪ್ರಕರಣವೆಂದು ಪರಿಗಣಿಸಬೇಕೆಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಆದರೆ ಈ ಅರ್ಜಿಯನ್ನು ತುರ್ತು ಅರ್ಜಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೊದಲೇ ಹೇಳಿದಂತೆ ಬಿಎಸ್ 4 ವಾಹನಗಳ ನೋಂದಣಿಯ ಗಡುವು ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಕರೋನಾ ವೈರಸ್ ಭಯದಿಂದಾಗಿ ಜನರು ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇದರಿಂದಾಗಿ ಡೀಲರ್ ಗಳು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಬಿಎಸ್ 4 ವಾಹನಗಳ ಮಾರಾಟದ ಗಡುವನ್ನು ವಿಸ್ತರಿಸುವಂತೆ ಅರ್ಜಿ ಸಲ್ಲಿಸಲಾಗಿದೆ.


Click it and Unblock the Notifications