ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭಾರೀ ಕುಸಿತ ಕಂಡ ಟೊಯೊಟಾ
ಕರೋನಾ ವೈರಸ್ ಪರಿಣಾಮ ತೀವ್ರವಾಗಿ ಕುಸಿತ ಕಂಡಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೆಲವೇ ಕೆಲವು ಆಟೋ ಕಂಪನಿಗಳ ವಾಹನ ಮಾರಾಟವು ಬೆಳವಣಿಗೆಯನ್ನು ಹೊರತುಪಡಿಸಿ ಹಲವು ಆಟೋ ಕಂಪನಿಗಳ ವಾಹನ ಮಾರಾಟವು ಇನ್ನು ಕೂಡಾ ಶೋಚನೀಯವಾಗಿದೆ.

ಹೊಸ ವಾಹನಗಳ ನೋಂದಣಿಯು 2020ರ ಅಗಸ್ಟ್ ಅವಧಿಯಲ್ಲಿ ಶೇ. 26.81ರಷ್ಟು ಕುಸಿತ ಕಂಡುಬಂದಿದ್ದು, ಪ್ಯಾಸೆಂಜರ್ ಕಾರುಗಳು, ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಮಾರಾಟವು ಒಟ್ಟಾರೆಯಾಗಿ 11,88,087 ಯುನಿಟ್ ಮಾರಾಟ ದಾಖಲಿಸಿವೆ. ಇದರಲ್ಲಿ ಟ್ರ್ಯಾಕ್ಟರ್ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲೂ ಕುಸಿತ ಕಂಡುಬಂದಿದೆ.

2019ರ ಅಗಸ್ಟ್ ಅವಧಿಯಲ್ಲಿ 16,23,218 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ. 26.81ರಷ್ಟು ಕುಸಿತ ಅನುಭವಿಸಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ ಎನ್ನಬಹುದು.

ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಶೇ. 40ರಿಂದ ಶೇ.65ರಷ್ಟು ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹೊಸ ವಾಹನ ಮಾರಾಟದಲ್ಲಿ ನಿಧಾನವಾಗಿ ಬೆಳವಣಿಗೆ ಕಾರಣುತ್ತಿದ್ದು, ಹೊಸ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಮರಳಲು ಇನ್ನು ಎರಡು ವರ್ಷಗಳ ಕಾಲಾವಕಾಶ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಅಗಸ್ಟ್ ಅವಧಿಯಲ್ಲಿ 1,78,513 ಯುನಿಟ್ ಪ್ಯಾಸೆಂಜರ್ ಕಾರುಗಳು, 8,98,775 ಯುನಿಟ್ ದ್ವಿಚಕ್ರ ವಾಹನಗಳು, 26,536 ಯುನಿಟ್ ವಾಣಿಜ್ಯ ವಾಹನಗಳು, 16,857 ಯುನಿಟ್ ತ್ರಿ ಚಕ್ರ ವಾಹನಗಳು ಮತ್ತು
67,406 ಯನಿಟ್ ಟ್ರ್ಯಾಕ್ಟರ್‌ಗಳು ಮಾರಾಟಗೊಂಡಿವೆ. ಇದರಲ್ಲಿ ಟೊಯೊಟಾ ಕಂಪನಿಯು 5,555 ಕಾರುಗಳನ್ನು ಮಾರಾಟ ಮಾಡಿದ್ದು, ಇದು 2019ರ ಅಗಸ್ಟ್ ಅವಧಿಯಲ್ಲಿ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ.48.1ರಷ್ಟು ಕುಸಿತ ಕಂಡುಬಂದಿದೆ.

ಟೊಯೊಟಾ ನಿರ್ಮಾಣದ ಪ್ರಮುಖ ಕಾರು ಮಾದರಿಗಳಾದ ಗ್ಲಾಂಝಾ, ಯಾರಿಸ್, ಇನೋವಾ ಕ್ರಿಸ್ಟಾ, ಫಾರ್ಚೂನರ್, ಕ್ಯಾಮ್ರಿ, ವೆಲ್‌ಫೈರ್ ಕಾರು ಮಾರಾಟದಲ್ಲಿ ಕುಸಿತ ಕಂಡುಬಂದಿದ್ದು, ಗ್ಲಾಂಝಾ, ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರು ಮಾರಾಟವು ಕಳೆದ ಎರಡು ತಿಂಗಳ ಅವಧಿಗಿಂತಲೂ ಉತ್ತಮ ಬೇಡಿಕೆ ದಾಖಲಿಸಿವೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಗ್ಲಾಂಝಾ ಕಾರು ಈ ವರ್ಷದ ಅಗಸ್ಟ್‌ನಲ್ಲಿ 2,322 ಯುನಿಟ್ ಮಾರಾಟದೊಂದಿದೆ ಶೇ.39ರಷ್ಟು ಕುಸಿತ ದಾಖಲಿಸಿದರೆ ಇನೋವಾ ಕ್ರಿಸ್ಟಾ ಕಾರು ಮಾದರಿಯು 2,943 ಯನಿಟ್ ಮಾರಾಟದೊಂದಿಗೆ ಶೇ.40 ರಷ್ಟು ಕುಸಿತ ಕಂಡಿದೆ.

ಫಾರ್ಚೂನರ್ ಕಾರು ಮಾದರಿಯು ಅಗಸ್ಟ್ ಅವಧಿಯಲ್ಲಿ 733 ಯುನಿಟ್ ಮಾರಾಟದೊಂದಿಗೆ ಶೇ.17ರಷ್ಟು ಹಿನ್ನಡೆ ಅನುಭವಿಸಿದ್ದರೆ ಯಾರಿಸ್ ಸೆಡಾನ್ ಕಾರು ಮಾದರಿಯು ಅಗಸ್ಟ್ ಅವಧಿಯಲ್ಲಿ 438 ಯುನಿಟ್ ಮಾರಾಟದೊಂದಿಗೆ ಶೇ. 104ರಷ್ಟು ಬೆಳವಣಿಗೆ ಕಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇನ್ನುಳಿದ ಎರಡು ಐಷಾರಾಮಿ ಕಾರು ಮಾದರಿಗಳಾದ ಕ್ಯಾಮ್ರಿ ಹೈಬ್ರಿಡ್ ಕಾರು ಮಾದರಿಯು ಶೇ.95ರಷ್ಟು ಮಾರಾಟ ಕುಸಿತ ಕಂಡರೆ ವೆಲ್‌ಫೈರ್ ಕಾರು ಮಾದರಿಯು ಶೇ.93ರಷ್ಟು ಕುಸಿತ ದಾಖಲಿಸಿದ್ದು, ಮುಂಬರುವ ದಿನಗಳಲ್ಲಿ ಕಾರು ಮಾರಾಟವು ಹೆಚ್ಚಳವಾಗುವ ನೀರಿಕ್ಷೆಯಿದೆ.


Click it and Unblock the Notifications