ಬೆಂಗಳೂರು ಸೈಕಲ್ ಪಥ, ಹೇಳಿ ನಿಮ್ಮ ಅಭಿಮತ

ಇಲ್ಲಿನ ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ ಸಮಸ್ಯೆಯನ್ನು ತಗ್ಗಿಸಲು ಹಲವು ಕ್ರಮಗಳು ಸರಕಾರದ ಮುಂದಿದೆ. ಅದರಲ್ಲಿ ಸೈಕಲ್ ಪಥವೂ ಒಂದು. ಈ ಯೋಜನೆ ಬಹಳಷ್ಟು ವರ್ಷಗಳ ಹಿಂದಿನದ್ದು. ಮಾಲಿನ್ಯ ನಿಯಂತ್ರಣಕ್ಕಾಗಿ ನಗರವನ್ನು ಸೈಕಲ್ ಸ್ನೇಹಿಯಾಗಿಸಲು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮುಂದಾಗಿರುವುದು ಸದ್ಯ ಪರಿಸರ ಸ್ನೇಹಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ರಸ್ತೆ ಬದಿಯಲ್ಲಿ ಸೈಕಲ್ ಸವಾರರಿಗಾಗಿ ಪ್ರತ್ಯೇಕ ಪಥ ನಿರ್ಮಿಸುವ ಯೋಜನೆ ಶೀಘ್ರದಲ್ಲಿ ಜಾರಿಗೆ ಬರಲಿದೆ. ಬಿಡಿಎ, ಬಿಬಿಎಂಪಿ, ಬಿಎಂಟಿಸಿ, ಸಾರಿಗೆ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಸೇರಿದಂತೆ ಪ್ರಮುಖ ವಿಭಾಗಗಳ ಹಲವು ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯನ್ನೂ ನಿರ್ಮಿಸಲಾಗುತ್ತದಂತೆ. ಈ ಯೋಜನೆಗಾಗಿ ಸರಕಾರ ಪ್ರತಿ ವರ್ಷ ಸುಮಾರು 60 ಕೋಟಿ ರು. ನೀಡಲು ತೀರ್ಮಾನಿಸಿದೆ.
ಆರಂಭದಲ್ಲಿ ಜಯನಗರ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ಸೈಕಲ್ ಪಥ ನಿರ್ಮಾಣವಾಗಲಿದೆ. ಇದಕ್ಕೆ ಸುಮಾರು ಎರಡುವರೆ ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಮಡಿವಾಳದ ಸುಮಾರು 11.15 ಕಿ.ಮಿ.ನಲ್ಲೂ ಸೈಕಲ್ ಪಥ ನಿರ್ಮಿಸಲು ನಿರ್ಧರಿಸಲಾಗಿದೆ. ಉಳಿದಂತೆ ಎಂಜಿ ರಸ್ತೆ, ಇಂದಿರಾನಗರ, ಆರ್.ಟಿ. ನಗರ, ಕೋರಮಂಗಲ, ಆರ್.ಎಂ. ಮೊಹಲ್ಲಾ ಮತ್ತು ಮಲ್ಲೇಶ್ವರಗಳಲ್ಲೂ ಸೈಕಲ್ ಪಥ ನಿರ್ಮಿಸುವ ಸಾಧ್ಯತೆಯ ಕುರಿತು ಆಲೋಚಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ. ರೈಡ್ ಎ ಸೈಕಲ್ ಪೌಂಡೇಶನ್ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಈಗ ನಾವೆಲ್ಲ ತುಸು ಯೋಚಿಸಬೇಕು. ಖಂಡಿತಾ ಕೆಲವೇ ರಸ್ತೆಗಳಲ್ಲಿ ನಮ್ಮ ಬೆಂಗಳೂರು ರಸ್ತೆಗೆ ಅಂಟಿಕೊಂಡು ಸೈಕಲ್ ಪಥವಿರಲಿದೆ. ಸದ್ಯ ರಸ್ತೆಯಲ್ಲಿ ದೃಷ್ಟಿ ಹರಿಸಿದರೆ ಬೆರಳೆಣಿಕೆಯ ಸಂಖ್ಯೆಯ ಸೈಕಲ್ ಗಳು ಕಾಣುತ್ತಿವೆ. ಹೆಚ್ಚು ಹೆಚ್ಚು ಜನರು ಬೈಸಿಕಲ್ ಉಪಯೋಗಿಸುವಂತಾಗಲು ಏನು ಮಾಡಬೇಕು? ಈ ಯೋಜನೆ ಯಶಸ್ವಿಯಾಗುವುದೇ? ಬೆಂಗಳೂರಿಗೆ ಈ ಯೋಜನೆ ಅನಿವಾರ್ಯವೇ? ನೀವು ಬೈಕ್, ಕಾರು, ಬಸ್ ಬಿಟ್ಟು ಬೈಸಿಕಲ್ ತುಳಿಯಲು ರೆಡಿ ಇದ್ದೀರಾ? ಬೆಂಗಳೂರು ಸೈಕಲ್ ಪಥದ ಕುರಿತು ನಿಮ್ಮ ಅಭಿಮತ ಅನಿಸಿಕೆಗಳಿಗೆ ಸ್ವಾಗತ..


Click it and Unblock the Notifications








