ಬಿಸಿರಕ್ತದ ತರುಣ ತರುಣಿಯರಿಗೆ ಡ್ರೈವಿಂಗ್ ಟಿಪ್ಸ್
ಹರೆಯದ ಯುವಕ ಯುವತಿಯರ ಕೇರ್ ಲೆಸ್ ವಾಹನ ಸವಾರಿಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅವರಿಗಿರುವ ಕಡಿಮೆ ವಾಹನ ಚಾಲನಾ ಅನುಭವ ಇದಕ್ಕೆಲ್ಲ ಕಾರಣ. ಇಲ್ಲಿರುವ ಸಲಹೆಗಳು ಪ್ರಮುಖವಾಗಿ ಹರೆಯದ ಯುವಕ/ಯುವತಿಯರಿಗಾಗಿ. ಉಳಿದವರೂ ಅನುಸರಿಸಬಹುದು.
* ಲೋ ಮಗಾ ಬೇಗ ಬಾರೋ ಅಂತ ಒಂದು ಕೈನಲ್ಲಿ ಬೈಕ್ ಹ್ಯಾಂಡಲ್ ಹಿಡಿದು ರೈಡ್ ಮಾಡುತ್ತ ಇನ್ನೊಂದು ಕೈನಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು ಇಂದು ಸಾಮಾನ್ಯ ದೃಷ್ಯ. ದಯವಿಟ್ಟು ಡ್ರೈವಿಂಗ್ ಮಾಡುವಾಗ ಮೊಬೈಲ್ ಕರೆ ಮಾಡಬೇಡಿ. ಬಂದ ಕರೆಗಳನ್ನು ಸ್ವೀಕರಿಸಬೇಡಿ.
* ಡ್ರೈವಿಂಗ್ ಮಾಡುತ್ತ ಮೊಬೈಲ್ ಸಂದೇಶಗಳನ್ನು ಕಳುಹಿಸಬೇಡಿ. ಇದರಿಂದ ನಿಮ್ಮ ಗಮನ ರಸ್ತೆಯಿಂದ ಬೇರೆ ಕಡೆ ಸರಿಯುತ್ತದೆ. ಅಪಘಾತವಾಗುವ ಸಂಭವ ಹೆಚ್ಚು.
* ವೇಗಕ್ಕೆ ಕಡಿವಾಣ ಹಾಕಿ. ವೇಗವಾಗಿ ಹೋಗುತ್ತಿರುವಾಗ ಅನಿರೀಕ್ಷಿತ ಸಂದರ್ಭಗಳಲ್ಲಿ ಬೈಕ್ ಅಥವಾ ಕಾರನ್ನು ನಿಲ್ಲಿಸೋದು ಕಷ್ಟ. ಅರ್ಜೆಂಟಿನಲ್ಲಿ ಯಾಕೆ ಹೋಗುತ್ತೀರಿ. ಮನೆಯಿಂದ ಬೇಗ ಹೊರಟು ಕ್ಲಪ್ತ ಸಮಯಕ್ಕೆ ಗುರಿ ಮುಟ್ಟಿ. ಹರೆಯದ ವಾಹನ ಅಪಘಾತಕ್ಕೆ ವೇಗದ ಪ್ರಯಾಣ ಪ್ರಮುಖ ಕಾರಣ.
* ಸ್ನೇಹಿತರೊಂದಿಗೆ ವಾಹನ ಸವಾರಿ ಮಾಡುತ್ತಿರುವಾಗ ಗಾಸೀಪ್ ಸುದ್ದಿ ಮಾತನಾಡಬೇಡಿ. ಅವಳು ಹಾಗಂತೆ! ಅವನಿಗೆ ಅಫೇರ್ ಇದೆಯಂತೆ ಇತ್ಯಾದಿ ಸುದ್ದಿಗಳಿಂದ ನಿಮ್ಮ ಗಮನ ರಸ್ತೆಯಲ್ಲಿರುವುದು ಕಷ್ಟ.
* ಕೋಪ ಬಂದಿದ್ದಾಗ ಅಥವಾ ಅಪ್ ಸೆಟ್ ಆಗಿರೋ ಸಂದರ್ಭದಲ್ಲಿ ವಾಹನ ಚಲಾಯಿಸದಿರಿ. ಭಾವನಾತ್ಮಕ ಸಮಸ್ಯೆಗಳು ಸುರಕ್ಷಿತ ವಾಹನ ಚಾಲನೆಗೆ ಪ್ರಮುಖ ಶತ್ರು. ಕೂಲಾಗಿ ಡ್ರೈವ್ ಮಾಡಿ.
* ಸುಮ್ಮನೆ ಕೂದಲು ಹಾರಿಸುತ್ತ, ಕೂಲಿಂಗ್ ಗ್ಲಾಸ್ ಸರಿಪಡಿಸುತ್ತ, ಮೇಕಪ್ ಮಾಡುತ್ತ ವಾಹನ ಚಾಲನೆ ಮಾಡಬೇಡಿ. ಸುಮ್ಮನೆ ಸ್ಟೈಲ್ ಮಾಡೋಕೆ ಹೋಗಿ ಸೌಂದರ್ಯ ಅಥವಾ ಜೀವ ಕಳೆದುಕೊಳ್ಳಬೇಡಿ.
* ಕುಡಿಯಬೇಡಿ. ಕುಡಿದು ವಾಹನ ಚಲಾಯಿಸಬೇಡಿ.
* ವಾಹನ ಚಾಲನೆ ಮಾಡುವ ಮುನ್ನವೇ ಮ್ಯೂಸಿಕ್ ಸಿಸ್ಟಮ್ ಸೆಟ್ ಮಾಡಿ. ಮೆಲ್ಲಗೆ ಕೇಳುತ್ತಿರಲಿ. ಜೋರಾಗಿ ಮ್ಯೂಸಿಕ್ ಹಾಕಿ ವಾಹನ ಚಾಲನೆ ಮಾಡುವುದು ಕೂಡ ಹರೆಯದ ಯುವಕ ಯುವತಿಯರು ವಾಹನ ಅಪಘಾತ ಮಾಡುವುದಕ್ಕೆ ಪ್ರಮುಖ ಕಾರಣ.
ನಿಮ್ಮ ಪ್ರೀತಿಯ ಅಪ್ಪ ಅಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ ಸ್ನೇಹಿತರಿಗೆ ನೀವಿಲ್ಲದೇ ತುಂಬಾ ದುಃಖವಾಗುತ್ತದೆ. ಹೀಗಾಗಿ ನಿಮ್ಮ ಸಂಪೂರ್ಣ ಗಮನ ವಾಹನ ಚಾಲನೆ ಮೇಲಿರಲಿ. ಹ್ಯಾಪಿ ಡ್ರೈವಿಂಗ್


Click it and Unblock the Notifications









