ರೀ ತಿಂಗಳಿಗೊಮ್ಮೆ ನಮ್ಗೆ ಸ್ನಾನ ಮಾಡ್ಸಿ ಪ್ಲೀಸ್!!

ಹೊಸತನ್ನು ಕೊಳ್ಳುವ ಭರದಲ್ಲಿ ಹಳೆಯದನ್ನು ಮರೆತುಬಿಡುತ್ತೇವೆ. ಉಪಯೋಗಿಸಬಹುದಾದರೂ ಅಂಗಿ ಮೂಲೆ ಸೇರುತ್ತದೆ. ಸುಸ್ಥಿತಿಯಲ್ಲಿರುವ ಹಳೆಯ ಮನೆಯನ್ನು ಕೆಡವಿ ಹೊಸತನ್ನು ಕಟ್ಟುತ್ತೇವೆ. ವೃದ್ಧರನ್ನು ಆಶ್ರಮಕ್ಕೆ ಅಟ್ಟುತ್ತೇವೆ. ಹಳೆಪಾತ್ರ, ಹಳೆ ಕಬ್ಣ ಹಳೆ ಪೇಪರ್ ಗುಜಿರಿ ಮಾರಾಟಗಾರನ ಸದ್ದು ಕೇಳಿಸುತ್ತದೆ.
ಕೆಲವರಿಗೆ ಹಳತೆಂದರೆ ಅಲರ್ಜಿ. ಹೊಸತನ್ನು ಖರೀದಿಸುವಾಗ ಹಳತನ್ನು ಮಾರಿಬಿಡುತ್ತಾರೆ. ಆದರೆ ಕೆಲವರು ಸುತಾರಂ ಹಳೆಯದನ್ನು ಮಾರೋದೆ ಇಲ್ಲ. ಅವರ ಪಾಲಿಗೆ ಯಾವತ್ತಿಗೂ ಓಲ್ಡ್ ಇಸ್ ಗೋಲ್ಡ್. ಇದೇ ಕಾರಣಕ್ಕೆ ಹಳ್ಳಿಯ ಕೆಲವು ಮನೆಯಲ್ಲಿ ಈಗಲೂ ತುಕ್ಕುಹಿಡಿದ ಸೈಕಲ್, ಬಜಾಜ್ ಸ್ಕೂಟರ್ ಅವಶೇಷ ಕಾಣಬಹುದು.
ಸೈಕಲ್, ಸ್ಕೂಟರ್ ವಿಷಯ ಬಿಡಿ. ಅದನ್ನು ಮಾರಿದರೆ ಒಂದೆರಡು ಸಾವಿರ ಸಿಗುವುದು ಕಷ್ಟ. ಆದರೆ ಲಕ್ಷಲಕ್ಷ ಬೆಳೆಬಾಳುವ ಕಾರುಗಳು ಅಲ್ಲಲ್ಲಿ ತುಕ್ಕು ಹಿಡಿಯುತ್ತ ನಿಂತಿರುವುದುನ್ನು ನೀವು ನೋಡಿರಬಹುದು. ದೊಡ್ಡ ದೊಡ್ಡ ಕಂಪನಿಗಳ ಹೊರಗಡೆ ವಿಂಟೇಜ್ ಕಾರೊಂದು ಸುಮ್ಮನೆ ಮಳೆಬಿಸಿಲಿಗೆ ಒಣಗುತ್ತ ಪುಡಿಯುದುರುತ್ತ ನಿಂತಿರುತ್ತದೆ.
ಕಲಾಸಿಪಾಳ್ಯದಂತಹ ಪೊಲೀಸ್ ಸ್ಟೇಷನ್ ಗಳಲ್ಲಿ ಕೇಸ್ ಜಡಿದ ವಾಹನಗಳು ಮಣ್ಣಾಗುತ್ತಿರುತ್ತವೆ. ಅದರ ಹಣೆಬರಹವೇ ಅಷ್ಟು ಅಂತ ಸುಮ್ಮನಾಗಬಹುದು. ಆದರೆ ಕೆಲವು ಮನೆಗಳ ಮುಂದೆ, ಕೆಲವು ಕಚೇರಿಗಳ ಮುಂದೆ ಹಳೆಯ ಕಾರುಗಳು ತುಕ್ಕು ಹಿಡಿಯುತ್ತ ನಿಂತಿರುವುದನ್ನು ನೋಡಿದಾಗ ಅಯ್ಯೋಪಾಪ ಎಂದೆನಿಸುತ್ತದೆ.
ಹಳೆಯ ವಾಹನ ಮಾರಾಟ ಮಾಡದೇ ಇರಲು ಕೆಲವೊಮ್ಮೆ ಭಾವನಾತ್ಮಕ ಕಾರಣಗಳೂ ಇರುತ್ತದೆ. ಮನೆಯ ಹಿರಿಯರು ಬಳಸಿದ್ದು ಅನ್ನೋ ಪ್ರೀತಿಯೂ ಇರುತ್ತದೆ. ಇದು ನನ್ನಪ್ಪನ ಕಾರು ಅಂತ ಹೀಗಲೂ ಕೆಲವರು ಹೇಳುತ್ತಾರೆ. ಆ ಕಾರಿನ ಚಕ್ರಗಳು ಕಾಣೆಯಾಗಿ ಬಂಪರ್ ಮೇಲೆ ಪವಡಿಸಿರುತ್ತವೆ. ಅದನ್ನು ಮಾರಿಬಿಡುವುದು ಭಾವನಾತ್ಮಕವಾಗಿ ಕೆಲವರಿಗೆ ಸಾಧ್ಯವಾಗುವುದಿಲ್ಲ.
ಓಲ್ಡ್ ಇಸ್ ಗೋಲ್ಡ್ ನಿಜ. ಆದರೆ ರಸ್ತೆಯ ಬದಿಯಲ್ಲಿ, ಮನೆಯ ಮುಂದೆ, ಮರದಡಿಯಲ್ಲಿ ಸುಮ್ಮನೆ ಮಣ್ಣಾಗಿ ಪುಡಿಪುಡಿಯಾಗಿ ಉದುರುತ್ತಿರುವ ಕಾರು ಬೈಕುಗಳನ್ನು ನೋಡಿದಾಗ ತುಸು ವೇದನೆಯಾಗುತ್ತದೆ. ಇವುಗಳನ್ನು ತಿಂಗಳಿಗೊಮ್ಮೆಯಾದರೂ ತೊಳೆಯುತ್ತಿರಿ. ಇದೀಗ ಪಾರ್ಕಿಂಗ್ ಸ್ಥಳವೂ ಪ್ರಮುಖ ಸಮಸ್ಯೆ. ಓಲ್ಡ್ ಇಸ್ ಗೋಲ್ಡ್. ಅದನ್ನು ತುಕ್ಕು ಹಿಡಿಯಲು ಬಿಡಬೇಡಿ.


Click it and Unblock the Notifications








