ಸಿಎನ್‌ಜಿ-ಎಲ್‌ಪಿಜಿ ಕಿಟ್ ಅಳವಡಿಕೆಯಿಂದ ವಿಮಾ ಪಾಲಿಸಿಯಲ್ಲಿ ಸಮಸ್ಯೆ ಆಗಲಿದೆಯೇ?
ಆಫ್ಟರ್ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಸಿಎನ್‌ಜಿ ಅಥವಾ ಎಲ್‌ಪಿಜಿ ಕಿಟ್‌ಗಳೊಂದಿಗೆ ವಾಹನವನ್ನು ಮಾರ್ಪಡಿಸುವುದರಿಂದ ವಿಮಾ ಪಾಲಿಸಿಯಲ್ಲಿ ಸಮಸ್ಯೆಗಳು ಉದ್ಭವಿಸಲಿದೆಯೇ ಎಂಬ ಸಂದೇಹ ಸದ್ಯ ಬಹುತೇರನ್ನು ಕಾಡುತ್ತಿದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಶೀಘ್ರದಲ್ಲೇ ಅದರ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆಯೂ ಇದೆ. ಈ ಬೆಲೆ ಏರಿಕೆಯನ್ನು ನಿಭಾಯಿಸಲು ಜನರು ಎಲೆಕ್ಟ್ರಿಕ್ ವಾಹನಗಳು, ಸಿಎನ್‌ಜಿ ಮತ್ತು ಆಟೋ ಎಲ್‌ಪಿಜಿಗಳ ಮೊರೆ ಹೋಗುತ್ತಿದ್ದಾರೆ.

ಕೆಲವರು ತಮ್ಮ ಸಾಂಪ್ರದಾಯಿಕ ವಾಹನಗಳನ್ನೇ ಸಿಎನ್‌ಜಿ ಮತ್ತು ಎಲ್‌ಪಿಜಿಯಲ್ಲಿ ಚಲಿಸುವ ವಾಹನಗಳಾಗಿ ಪರಿವರ್ತಿಸಲು ಮುಂದಾಗುತ್ತಿದ್ದಾರೆ. ಇವುಗಳು ಹೆಚ್ಚು ಕೈಗೆಟುಕುವ ಮತ್ತು ಪೆಟ್ರೋಲ್, ಡೀಸೆಲ್‌ಗಿಂತ ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುತ್ತವೆ. ಇದರಿಂದ ತಮ್ಮ ಆರ್ಥಿಕ ಹೊರೆಯನ್ನು ತಕ್ಕಮಟ್ಟಿಗೆ ನಿಭಾಯಿಸಲು ಅನುಕೂಲವಾಗಲಿದೆ.

ಅಲ್ಲದೇ ಪರಿಸರವನ್ನು ಹೆಚ್ಚು ಕಲುಷಿತಗೊಳಿಸುವ ವಾಹನಗಳಿಂದ ಪರ್ಯಾಯ ಆಯ್ಕೆ ಎಂದೂ ಕೂಡ ಜನರು ಭಾವಿಸುತ್ತಿಸುತ್ತಿದ್ದಾರೆ. ಇಂತಹ ಹಲವಾರು ಕಾರಣಗಳಿಂದ ಜನರಲ್ಲಿ ಸಿಎನ್‌ಜಿ-ಎಲ್‌ಪಿಜಿ ಕಿಟ್ ಜನಪ್ರಿಯವಾಗುತ್ತಿದೆ. ಕಡಿಮೆ ವೆಚ್ಚವೂ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದ್ದು, ತಮ್ಮ ವಾಹನಗಳನ್ನು LPG ಅಥವಾ CNG ವಾಹನಗಳಿಗೆ ಆಫ್ಟರ್ ಮಾರ್ಕೆಟ್ ಕಿಟ್‌ಗಳನ್ನು ಬಳಸಿಕೊಂಡು ಪರಿವರ್ತಿಸಲು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಇವು ಮಾರಾಟಕ್ಕೆ ಲಭ್ಯವಿದೆ. ಕೆಲ ವಾಹನ ತಯಾರಕರು ತಮ್ಮ ಕಾರ್ಖಾನೆಯಲ್ಲಿ ತಯಾರಿಸಿದ ಸಿಎನ್‌ಜಿ ಕಿಟ್‌ಗಳನ್ನು ಹೊಂದಿರುವ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದರೂ, ಆಫ್ಟರ್ ಮಾರ್ಕೆಟ್‌ನ CNG ಕಿಟ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದಕ್ಕೆ ಕಾರಣ ಇತ್ತೀಚೆಗೆ ಬರುತ್ತಿರುವ ಇ-ಬೈಕ್‌ಗಳ ಬೆಲೆಯು ಸಿಎನ್‌ಜಿ ಕಿಟ್‌ಗಳಿಗೆ ಹೋಲಿಸಿಕೊಂಡರೆ ತುಂಬಾ ಹೆಚ್ಚಾಗಿರುವುದು. ಇದರಿಂದ ಗ್ರಾಹಕರು ತಮ್ಮಲ್ಲಿನ ಹಳೆಯ ವಾಹನಗಳನ್ನೇ ಮಾಡಿಫೈ ಮಾಡಿಕೊಂಡು ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸುತ್ತಿದ್ದಾರೆ.

ಇನ್ನು ಕಾರಿನಲ್ಲಿ ಸಿಎನ್‌ಜಿ ಕಿಟ್ ಅಳವಡಿಸುವ ಮೊದಲು ಕಾರಿನ ಇಂಧನ ಪ್ರಕಾರವನ್ನು ಪರಿಶೀಲಿಸಬೇಕಾಗುತ್ತದೆ. ಎಲ್ಲಾ ಕಾರುಗಳನ್ನು ಸಿಎನ್‌ಜಿಗೆ ಬದಲಿಸಲು ಸಾಧ್ಯವಿಲ್ಲ. ವಿಶೇಷವಾಗಿ ಹಳೆಯ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವ ಸಾಧ್ಯತೆಗಳು ಕಡಿಮೆ. ಪೆಟ್ರೋಲ್/ಡೀಸೆಲ್ ಕಾರನ್ನು ಸಿಎನ್‌ಜಿ ಕಾರ್ ಆಗಿ ಬದಲಿಸಬಹುದೇ ಎಂಬುದನ್ನು ಪರಿಶೀಲಿಸಬೇಕು.

ಗಮನಿಸಬೇಕಾದ ಸಂಗತಿಯೆಂದರೆ ಪೆಟ್ರೋಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಸುಲಭ. ಆದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಕಷ್ಟ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸಲು ಹೆಚ್ಚಿನ ಮಾಡಿಫೈ ಮಾಡಬೇಕಾಗುತ್ತದೆ.

ಅದೇ ರೀತಿ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸುವುದು ಹೆಚ್ಚು ದುಬಾರಿ. ಕಾರನ್ನು ಸಿಎನ್‌ಜಿಗೆ ಬದಲಿಸುವ ಮುನ್ನ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ. ಯಾವ ಕಾರುಗಳಲ್ಲಿ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಬಹುದು ಎಂಬ ಪಟ್ಟಿಯನ್ನು ಆರ್‌ಟಿಒ ಕಚೇರಿಗಳು ಪ್ರಕಟಿಸುತ್ತವೆ.

ಕಾರಿನ ಮಾದರಿ ಆ ಪಟ್ಟಿಯಲ್ಲಿದ್ದರೆ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳಬಹುದು. ಆದರೆ ಸಿಎನ್‌ಜಿಗೆ ಬದಲಿಸಲು ನೀಡಲಾಗುವ ಕಾರುಗಳ ಪಟ್ಟಿ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಈ ಕಾರಣಕ್ಕೆ ಹತ್ತಿರದ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸುವುದು ಉತ್ತಮ. ಆದರೆ, ವಿಮೆಯ ವಿಷಯದಲ್ಲಿ ಇದು ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಇದಕ್ಕೆ ಪರಿಹಾರವನ್ನು ಈ ಕೆಳಗೆ ನೀಡಲಾಗಿದೆ.

ಆರ್‌ಟಿಒ ಅನುಮೋದನೆ:
ಪೆಟ್ರೋಲ್ ಅಥವಾ ಡೀಸೆಲ್ ವಾಹನವನ್ನು ಸಿಎನ್‌ಜಿ ಅಥವಾ ಆಟೋ ಎಲ್‌ಪಿಜಿ ಕಿಟ್‌ನೊಂದಿಗೆ ಮಾರ್ಪಡಿಸಿದರೆ, ವಾಹನವನ್ನು ರಾಜ್ಯ ಸಾರಿಗೆ ಇಲಾಖೆ ಅನುಮೋದಿಸಬೇಕು. ಅಂದರೆ ನೋಂದಣಿ ಪ್ರಮಾಣಪತ್ರದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಒದಗಿಸಿ ಮತ್ತು ವಾಹನ ಚಾಲನೆಗೆ ಸೂಕ್ತ ಅನುಮತಿಯನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅದನ್ನು ರಸ್ತೆಯಲ್ಲಿ ಕಾರ್ಯನಿರ್ವಹಿಸಲು ಅಧಿಕೃತ ವಾಹನ ಎಂದು ಪರಿಗಣಿಸುವುದಿಲ್ಲ.

ಅಲ್ಲದೇ ಭವಿಷ್ಯದಲ್ಲಿ ಪೊಲೀಸರೊಂದಿಗೆ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ಎಲ್‌ಪಿಜಿ ಅಥವಾ ಸಿಎನ್‌ಜಿ ಕಿಟ್‌ಗೆ ಪರಿವರ್ತಿಸಲು ದಾಖಲೆ (ಇನ್‌ವಾಯ್ಸ್ ಬಿಲ್), ಆರ್‌ಸಿ ಪುಸ್ತಕದ ಪ್ರತಿ, ವಿಮೆ ಪ್ರಮಾಣಪತ್ರ, ಕೆಒಸಿ ಇತ್ಯಾದಿಗಳನ್ನು ಆರ್‌ಟಿಒಗೆ ಸಲ್ಲಿಸಬೇಕು. ಹೆಚ್ಚುವರಿಯಾಗಿ, ಆರ್‌ಟಿಒ ನೀಡಿದ ಅರ್ಜಿಯನ್ನು ಪೂರ್ಣಗೊಳಿಸಬೇಕು. ನಂತರ ಆರ್‌ಟಿಒ ಸಿಬ್ಬಂದಿ ಮರುಹೊಂದಿಸಿದ ವಾಹನವನ್ನು ಪರಿಶೀಲಿಸಿ ಅನುಮೋದಿಸುತ್ತಾರೆ.

ವಿಮಾ ಕಂಪನಿ ಅನುಮೋದನೆ:
ಆರ್‌ಸಿ ಪುಸ್ತಕವನ್ನು ಮರುವಿನ್ಯಾಸಗೊಳಿಸಿದ್ದೇವೆ, ಇದರೊಂದಿಗೆ ಎಲ್ಲಾ ಸಮಸ್ಯೆಗಳು ದೂರವಾಗಿವೆ ಎಂದುಕೊಂಡರೆ ತಪ್ಪು. ಈ ಎಲ್ಲಾ ಪ್ರಕ್ರಿಯೆ ಬಳಿಕ ವಿಮಾ ಕಂಪನಿಯಿಂದಲೂ ಅನುಮೋದನೆ ಪಡೆಯಬೇಕು. CNG ಅಥವಾ ಆಟೋ LPG ಕಿಟ್‌ನಿಂದ ಮಾರ್ಪಡಿಸಿದ ವಾಹನದ ಮಾಲೀಕರು ಕೆಲವು ಸ್ವಯಂ ದೃಢೀಕೃತ ದಾಖಲೆಗಳನ್ನು ವಿಮಾ ಕಂಪನಿಗೆ ಸಲ್ಲಿಸಬೇಕು.

ಆರ್‌ಸಿ ಪುಸ್ತಕ, ಸಿಎನ್‌ಜಿ ಅಥವಾ ಆಟೋ ಎಲ್‌ಪಿಜಿ ಕಿಟ್‌ನ ವಿನ್ಯಾಸಕ್ಕಾಗಿ ಇನ್‌ವಾಯ್ಸ್‌ನ ಪ್ರತಿ ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಂಪನಿಗೆ ಸಲ್ಲಿಸಬೇಕು. ಇದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ವಿಮೆ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications