ಪ್ರಪ್ರಥಮ ದೇಶಿ ಸೂಪರ್ ಕಾರು ರಸ್ತೆಗಿಳಿಯಲು ಕ್ಷಣಗಣನೆ
ದೇಶದ ಪ್ರಖ್ಯಾತ ವಿನ್ಯಾಸ ಸಂಸ್ಥೆ, ಪುಣೆ ಮೂಲದ ಡಿಸಿ ಡಿಸೈನ್ ಕಂಪನಿಯು ನೂತನ ಸೂಪರ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಪ್ರಪ್ರಥಮ ಸೂಪರ್ ಕಾರಾಗಿದ್ದು, ಕಂಪನಿಯು ವಿನ್ಯಾಸ ವಿಭಾಗದಿಂದ ಉತ್ಪಾದನಾ ವಿಭಾಗಕ್ಕೆ ನೆಗೆಯಲು ರೆಡಿಯಾಗಿದೆ.

ನೂತನ ಸೂಪರ್ ಕಾರಿಗೆ ಕಂಪನಿಯು ಇನ್ನೂ ಹೆಸರಿಟ್ಟಿಲ್ಲ. ಆದರೆ ಈ ಕಾರನ್ನು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲು ಕಂಪನಿ ನಿರ್ಧರಿಸಿದೆ. ಈ ಸೂಪರ್ ಕಾರನ್ನು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅನಾವರಣ ಮಾಡಲಿದ್ದಾರಂತೆ.
ಮೊದಲ ನೋಟಕ್ಕೆ ಈ ಸೂಪರ್ ಕಾರು ಲಂಬೊರ್ಗಿನಿ ಮುರ್ಸಿಲಾಗೊ ಅಥವಾ ಅವೆಂಟಡೊರ್ ಕಾರುಗಳಂತೆ ಕಾಣಲಿದೆ ಎಂದು ಕಂಪನಿ ಹೇಳಿದೆ. ಈ ದೇಶಿ ಸೂಪರ್ ಕಾರು ಟರ್ಬೊಚಾರ್ಜ್ ಡ್ ವಿ6 ಹೋಂಡಾ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಕಂಪನಿಯು ವರ್ಷಕ್ಕೆ ಸುಮಾರು 3 ಸಾವಿರ ಕಾರುಗಳನ್ನು ಉತ್ಪಾದಿಸಲು ನಿರ್ಧರಿಸಿದೆ.
ಈ ಶಕ್ತಿಶಾಲಿ ಎಂಜಿನ್ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಎರಡು ಆಕ್ಸೆಲ್ ನಡುವೆ ಇರಲಿದೆ. ಈ ರೀತಿ ಹೆಚ್ಚಿನ ಯುರೋಪ್ ಸೂಪರ್ ಕಾರುಗಳ ಡೀಸೆಲ್ ಎಂಜಿನ್ ಅಳವಡಿಸಲಾಗುತ್ತದೆ. ಈ ಕಾರಿನ ತೂಕ ಸುಮಾರು 1,550 ಕೆ.ಜಿ ಇರಲಿದೆ. ದರ ಸುಮಾರು 30 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.
ಈ ಕಾರಿನ ಮಾರಾಟ ಆರಂಭವಾಗಲು 2013ರವರೆಗೆ ಕಾಯಬೇಕು. "ನಾವು ಡಿಸೈನ್ ಹೌಸಿನಿಂದ ಪ್ರೊಡಕ್ಷನ್ ಹೌಸಿಗೆ ಹೋಗಲಿದ್ದೇವೆ. ನೂತನ ಸೂಪರ್ ಕಾರು ನೋಡಲು ಆಕರ್ಷಕವಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಅಭಿವೃದ್ಧಿಪಡಿಸಲಾಗಿದೆ" ಎಂದು ಡಿಸಿ ಡಿಸೈನ್ ವಿನ್ಯಾಸಕರಾದ ದಿಲಿಪ್ ಚೌಬ್ರಿಯಾ ಹೇಳಿದ್ದಾರೆ.


Click it and Unblock the Notifications








