Bajaj Pulsar NS400Z: ಯುವಕರ ನೆಚ್ಚಿನ ಬಜಾಜ್ ಪಲ್ಸರ್ ಎನ್ಎಸ್400ಝಡ್ ರಿವ್ಯೂ.. ಹೇಗಿದೆ?
ಭಾರತದ ಯುವಕರಿಗೆ ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ 'ಬಜಾಜ್ ಪಲ್ಸರ್' ಎಂದು. ಅಷ್ಟರಮಟ್ಟಿಗೆ ಈ ಮೋಟಾರ್‌ಸೈಕಲ್ ಮನೆಮಾತಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ವಿಶೇಷವಾಗಿ ಪಲ್ಸರ್‌ನ್ನು 'ದೇಶೀಯ ರಸ್ತೆಯ ರಾಜ' ಎಂದು ಕರೆದರೂ ತಪ್ಪಾಗುವುದಿಲ್ಲ.
2001ರಲ್ಲಿ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದ 'ಬಜಾಜ್ ಪಲ್ಸರ್' ಗೇಮ್ ಚೇಂಜರ್ ಬೈಕ್ ಆಗಿದೆ. ಈವರೆಗೆ ಪಲ್ಸರ್ ಸರಣಿಯ ಹಲವು ಮೋಟಾರ್‌ಸೈಕಲ್‌ಗಳು ಬಿಡುಗಡೆಗೊಂಡಿದ್ದು, ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದಿವೆ. ಇತ್ತೀಚೆಗೆ ನೂತನ ಬಜಾಜ್ ಪಲ್ಸರ್ ಎನ್ಎಸ್400ಝಡ್ ಬೈಕ್‌ನ್ನು ಪರಿಚಯಿಸಲಾಗಿತ್ತು. ಪುಣೆಯ ಚಕನ್‌ನಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ಈ ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ ಮಾಡುವ ಅವಕಾಶ ದೊರೆಯಿತು. ಬನ್ನಿ.. ಹೇಗಿದೆ ಎಂಬುದನ್ನು ತಿಳಿಯೋಣ.

ಬಜಾಜ್ ಪಲ್ಸರ್ ಎನ್ಎಸ್400ಝಡ್ ವಿನ್ಯಾಸ ಹಾಗೂ ವೈಶಿಷ್ಟ್ಯಗಳು: ಈ ಬೈಕ್ ಸಾಕಷ್ಟು ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಪಡೆದಿದ್ದು, 'ಸ್ಟ್ರೀಟ್‌ಫೈಟರ್' ಲುಕ್‌ನಿಂದಲೇ ಎಲ್ಲರ ಮನವನ್ನು ಸೆಳೆಯುತ್ತದೆ. ನೂತನ ಪಲ್ಸರ್ ಎನ್ಎಸ್400ಝಡ್ ವಿನ್ಯಾಸವು ಒಂದಷ್ಟು ಮಟ್ಟಿಗೆ ಪಲ್ಸರ್ ಎನ್ಎಸ್200 ಬೈಕ್‌ಗೆ ಹೋಲಿಕೆಯಾದರೂ, ಇವೆರೆಡು ಬೇರೆ - ಬೇರೆ ಎಂದು ಸುಲಭವಾಗಿ ಗುರುತಿಸಬಹುದು.
ಹೊಸ ಬಜಾಜ್ ಪಲ್ಸರ್ ಎನ್ಎಸ್400ಝಡ್ (Bajaj Pulsar NS400Z) ಮೋಟಾರ್‌ಸೈಕಲ್, ಮುಂಭಾಗ (ಫ್ರಂಟ್)ದಲ್ಲಿರುವ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟಪ್‌ನ ಎರಡೂ ಬದಿಗಳಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳಿವೆ. ಷಾಂಪೇನ್ ಬಣ್ಣ (ಕಲರ್)ದಲ್ಲಿ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳಿದ್ದು, ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಎಂಜಿನ್ ಗಾರ್ಡ್‌ನಲ್ಲಿ ವಿಶಿಷ್ಟ ಶೈಲಿಯ ಗ್ರಾಫಿಕ್ಸ್ ವಿನ್ಯಾಸವನ್ನು ಕಾಣಬಹುದು.

ಈ ನೂತನ ಬೈಕ್ ಸ್ಪ್ಲಿಟ್ ಸೀಟ್ ಸೆಟಪ್ ಹೊಂದಿದ್ದು, ಹಿಂಬದಿ (ರೇರ್) ಸಹ ಅತ್ಯುತ್ತಮವಾಗಿರುವ ಸ್ಪ್ಲಿಟ್ ಟೈಲ್‌ಲೈಟ್‌ಗಳನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ ಅಂಡರ್‌ಬೆಲ್ಲಿ ಎಕ್ಸಾಸ್ಟ್ ಸೆಟಪ್ ಅನ್ನು ಒಳಗೊಂಡಿದೆ. ರೈಡ್-ಬೈ-ವೈರ್ ತಂತ್ರಜ್ಞಾನ (ಟೆಕ್ನಾಲಜಿ)ಯನ್ನು ಹೊಂದಿರುವ ಮೊದಲ ಪಲ್ಸರ್ ಇದಾಗಿದ್ದು, ಹೊಸದಾಗಿರುವ ಎಲ್‌ಸಿಡಿ ಸ್ಕ್ರೀನ್ ಮೂಲಕ ಬ್ಲೂಟೂತ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಆಯ್ಕೆಗಳನ್ನು ವೀಕ್ಷಿಸಬಹುದು.
ಬಜಾಜ್ ಪಲ್ಸರ್ ಎನ್ಎಸ್400ಝಡ್ ಕಾರ್ಯಕ್ಷಮತೆ: ಈ ಬೈಕ್ ಅತಿದೊಡ್ಡ ಹಾಗೂ ಶಕ್ತಿಯುತವಾದ ಎಂಜಿನ್‌ನ್ನು ಹೊಂದಿದೆ. ಇದರ 373.3 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್, 8,800 ಆರ್‌ಪಿಎಂಯಲ್ಲಿ 39.45 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 6,500 ಆರ್‌ಪಿಎಂನಲ್ಲಿ 35 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮೋಟಾರ್‌ಸೈಕಲ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಅಸಿಸ್ಟ್ & ಸ್ಲಿಪ್ಪರ್ ಕ್ಲಚ್‌ನ್ನು ಹೊಂದಿದೆ. ಚೈನ್ ಡ್ರೈವ್ ಸೆಟಪ್ ಮೂಲಕ ರೇರ್ (ಹಿಂದಿನ) ವೀಲ್‌ಗೆ ಪವರ್ ವರ್ಗಾಯಿಸುತ್ತದೆ. ರೈಡ್-ಬೈ-ವೈರ್ ಎಂಬ ತಂತ್ರಜ್ಞಾನದ ಭಾಗವಾಗಿ ರೋಡ್, ರೈನ್, ಸ್ಪೋರ್ಟ್ ಹಾಗೂ ಆಫ್-ರೋಡ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದ್ದು, ಡುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಬಜಾಜ್ ಪಲ್ಸರ್ ಎನ್ಎಸ್400ಝಡ್ ಬೈಕ್, ಮುಂಭಾಗ (ಫ್ರಂಟ್) 43 ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗ (ರೇರ್) 6-ಸೆಟಪ್ ಪ್ರಿ-ಲೋಡ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ 320 ಎಂಎಂ ಮತ್ತು ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 17-ಇಂಚಿನ ವೀಲ್ಸ್ ಒಳಗೊಂಡಿದ್ದು, ಫ್ರಂಟ್ 110/70 ಹಾಗೂ ರೇರ್ 140/70 ಅಳತೆಯ ಟೈಯರ್‌ಗಳನ್ನು ಹೊಂದಿದೆ.

ರೈಡಿಂಗ್ ಇಂಪ್ರೆಷನ್: ಪುಣೆಯ ಚಕನ್‌ನಲ್ಲಿ ನೂತನ ಬಜಾಜ್ ಪಲ್ಸರ್ ಎನ್ಎಸ್400ಝಡ್ ಬೈಕ್ ಓಡಿಸಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು. ಇದರ ಆಕರ್ಷಕವಾದ ವಿನ್ಯಾಸ ನೋಡಿದ ಕೂಡಲೇ ಪ್ರತಿಯೊಬ್ಬರನ್ನು ತನ್ನತ್ತ ಸೆಳೆದು ಬಿಡುತ್ತದೆ. ಚಲಿಸುವಾಗ ಈ ಮೋಟಾರ್‌ಸೈಕಲ್ ಕಾರ್ಯಕ್ಷಮತೆಯು ನಿಜಕ್ಕೂ ಶ್ಲಾಘನೀಯವಾಗಿದೆ. ರೈಡ್-ಬೈ-ವೈರ್ ತಂತ್ರಜ್ಞಾನವು ಪಲ್ಸರ್‌ನ್ನು ಮತ್ತಷ್ಟು ಶಕ್ತಿಯುತಗೊಳಿಸಿದೆ. ಅದರಲ್ಲೂ ಸ್ಪೋರ್ಟ್ಸ್ ಮೋಡ್‌ನಲ್ಲಿ ಮೋಟಾರ್‌ಸೈಕಲ್‌ಗೆ ಸರಿ ಸಾಟಿಯೇ ಇಲ್ಲ.
ಗೇರ್ ಬದಲಾವಣೆಯನ್ನು ಲೀಲಾಜಾಲವಾಗಿ ಮಾಡಬಹುದು. ಸಸ್ಪೆನ್ಷನ್ ಸೆಟಪ್ ಉತ್ತಮವಾಗಿದ್ದು, ಚಕನ್‌ನ ಟ್ರ್ಯಾಕ್‌ನಲ್ಲಿ 110 ಕೆಎಂಪಿಹೆಚ್ ಗರಿಷ್ಠ ವೇಗದಲ್ಲಿ ಇದ್ದರೂ ಸುಲಭವಾಗಿ ತಿರುವುಗಳನ್ನು ಪಡೆಯಬಹುದು. ಇದರಲ್ಲಿರುವ ಎಂಆರ್‌ಎಫ್ ಕಂಪನಿಯ ಟೈಯರ್‌ಗಳು ರಸ್ತೆಯಲ್ಲಿ ಬಿಗಿಯಾದ ಹಿಡಿತವನ್ನು ಒದಗಿಸುತ್ತವೆ. ಡಿಸ್ಕ್ ಬ್ರೇಕ್ ಗಳು ಕೂಡ ಸೊಗಸಾಗಿ ಕೆಲಸ ಮಾಡುತ್ತವೆ. ಆದಾಗ್ಯೂ ಈ ಮೋಟಾರ್‌ಸೈಕಲ್ ಬೆಲೆಗೆ ಮತ್ತಷ್ಟು ವೈಶಿಷ್ಟ್ಯಗಳನ್ನು ನೀಡಬಹುದಿತ್ತು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೂತನ ಬಜಾಜ್ ಪಲ್ಸರ್ ಎನ್ಎಸ್400ಝಡ್ ಬೈಕ್ ಸವಾರರಿಗೆ ಆರಾಮದಾಯಕವಾದ ಪ್ರಯಾಣವನ್ನು ಒದಗಿಸುತ್ತದೆ ಎಂದು ಹೇಳಬಹುದು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಮೋಟಾರ್‌ಸೈಕಲ್, ರೂ.1.85 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯಾಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ಬಹುತೇಕ ಯುವಕರ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








