ಆಕ್ಟಿವಾ ತ್ರಿಜಿ vs ಮಹೀಂದ್ರ ಗಸ್ಟೊ; ಯಾವ ಸ್ಕೂಟರ್ ಬೆಸ್ಟ್?
ಮಗದೊಂದು ಆಕರ್ಷಕ ಟೆಸ್ಟ್ ಡ್ರೈವ್ ವಿಮರ್ಶೆ ಲೇಖನದೊಂದಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಅದುವೇ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಆಕ್ಟಿವಾ ತ್ರಿಜಿ ಹಾಗೂ ಮಹೀಂದ್ರ ಗಸ್ಟೊ. ಈ ಎರಡು 110 ಸಿಸಿ ಸ್ಕೂಟರ್ ಗಳು ತಮ್ಮದೇ ಆದ ವೈಶಿಷ್ಟ್ಯಗಳೊಂದಿಗೆ ವಿಶಿಷ್ಟವಾಗಿ ಗುರುತಿಸಿದರೂ ಯಾವುದು ಶ್ರೇಷ್ಠ ಸ್ಕೂಟರ್ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಕೊಡುವುದು ನಮ್ಮ ಕರ್ತವ್ಯವಾಗಿರುತ್ತದೆ.
ಹೀಗೆ ಎರಡೂ ಬೈಕ್ ಗಳೊಂದಿಗೆ ನಮ್ಮ ತಂಡ ಬೆಂಗಳೂರಿನ ಸುತ್ತಾಟದ ಬಳಿಕ ಚಿಕ್ಕಬಳ್ಳಾಪುರದತ್ತ ಪಯಣ ಬೆಳೆಸಿತ್ತು. ಮಾರುಕಟ್ಟೆಯಲ್ಲಿ ಬೈಕ್ ಗಳನ್ನು ಹೋಲಿಸಿದಾಗ ಸ್ಕೂಟರ್ ಬೇಡಿಕೆ ಶಿಪ್ರ ಗತಿಯಲ್ಲಿ ಬೆಳೆಯುತ್ತಿದೆ. ಇನ್ನೊಂದೆಡೆ ಆಕ್ಟಿವಾ ತನ್ನ ನಂಬರ್ ವನ್ ಪದವಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತ್ರಿಜಿ ಎಂಬ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಜಪಾನ್ ಮೂಲದ ಸ್ಕೂಟರ್ ಗೆ ತನ್ನದೇ ಆದ ಶೈಲಿಯಲ್ಲಿ ಸೆಡ್ಡು ನೀಡುವ ಪ್ರಯತ್ನವನ್ನು ಗಸ್ಟೊ ಮಾಡಿದೆ. ಸಂಪೂರ್ಣ ವಿಮರ್ಶೆಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಪರೀಕ್ಷಾರ್ಥ ಮಾದರಿ, ಆನ್ ರೋಡ್ ಬೆಲೆ (ಬೆಂಗಳೂರು)
ಆಕ್ಟಿವಾ ತ್ರಿಜಿ: 58,739 ರು.
ಮಹೀಂದ್ರ ಗಸ್ಟೊ: 57,152 ರು.

ವಿನ್ಯಾಸ
ಒಂದೇ ವಾಕ್ಯದಲ್ಲಿ ವಿವರಿಸುವುದಾದರೆ ಆಕ್ಟಿವಾ ತ್ರಿಜಿ ವಿನ್ಯಾಸ ಸರಳ ಹಾಗೂ ನಾಜೂಕಾಗಿದೆ. ಇನ್ನೊಂದೆಡೆ ಆಕ್ಟಿವಾವನ್ನು ಮೀರಿಸುವ ರೀತಿಯಲ್ಲಿ ಮೇಕಪ್ ಹಚ್ಚಿಕೊಂಡಿರುವ ಮಹೀಂದ್ರ ಗಸ್ಟೊ ನೋಟ, ಅಲ್ಯೂಮಿನಿಯಂ ಗ್ರಿಲ್, ರಿಯರ್ ಟೈಲ್ ಲ್ಯಾಂಪ್, ಎಲ್ ಇಡಿ ಲ್ಯಾಂಪ್ ಎಲ್ಲವೂ ಬಹಳ ಅತ್ಯುತ್ತಮವಾಗಿದೆ.

ವಿನ್ಯಾಸ
ಹಿಂಭಾಗದ ವಿನ್ಯಾಸದಲ್ಲೂ ಆಕ್ಟಿವಾವನ್ನು ಹಿಮ್ಮೆಟ್ಟಿಸುವಲ್ಲಿ ಗಸ್ಟೊ ಯಶ ಕಂಡಿದೆ. ಇದು ಕ್ಷಣ ಮಾತ್ರದಲ್ಲಿ ವಾಹನ ಪ್ರೇಮಿಗಳ ಆಕರ್ಷಣೆ ಸೆಳೆಯುವ ಸಾಮರ್ಥ್ಯ ಹೊಂದಿದೆ. ಆದರೆ ಗ್ರಾಬ್ ರೈಲ್ ವಿಚಾರಕ್ಕೆ ಬಂದಾಗ ಗಸ್ಟೊ ನೋಡಲು ಸುಂದರವಾದರೂ ಪ್ರಾಯೋಗಿಕ ವಿಚಾರಕ್ಕೆ ಬಂದಾಗ ಆಕ್ಟಿವಾ ತ್ರಿಜಿ ಉಪಯುಕ್ತವೆನಿಸುತ್ತದೆ.

ಎಂಜಿನ್
ಆಕ್ಟಿವಾ ತ್ರಿಜಿ: 109 ಸಿಸಿ, ಏರ್ ಕೂಲ್ಡ್ (8 ಅಶ್ವಶಕ್ತಿ, 9 ತಿರುಗುಬಲ)
ಮಹೀಂದ್ರ ಗಸ್ಟೊ: 109 ಸಿಸಿ, ಏರ್ ಕೂಲ್ಡ್ (8 ಅಶ್ವಶಕ್ತಿ, 9 ತಿರುಗುಬಲ)

ಚಾಲನಾ ಅನುಭವ
ಇಲ್ಲಿಂದಲೇ ಗಸ್ಟೊಗೆ ನಿಜವಾದ ಸಮಸ್ಯೆ ಆರಂಭವಾಗುತ್ತಿರುವುದು. ವಿನ್ಯಾಸದ ವಿಚಾರದಲ್ಲಿ ಮೇಲುಗೈ ಕಾಯ್ದುಕೊಂಡಿರುವ ಗಸ್ಟೊ ಚಾಲನಾ ಅನುಭವದ ವಿಚಾರಕ್ಕೆ ಬಂದಾಗ ಬಹಳ ಹಿಂದೆ ಬಿಂದಿದೆ. ಅತ್ಯಂತ ನಯವಾದ ಚಾಲನಾ ಅನುಭವ ನೀಡುವ ಆಕ್ಟಿವಾ ತ್ರಿಜಿಗೆ ಹೋಲಿಸಿದಾಗ ಗಸ್ಟೊದಲ್ಲಿ ವೈಬ್ರೇಷನ್ ಕಂಡುಬರುತ್ತದೆ. ಅಲ್ಲದೆ ಪಿಕಪ್ ಸಮಸ್ಯೆಯೂ ಇದರಲ್ಲಿದೆ.

ಹ್ಯಾಂಡ್ಲಿಂಗ್
ಇನ್ನು ತಿರುವಿನಲ್ಲೂ ಅತ್ಯುತ್ತಮ ಗ್ರಿಪ್ ಆಕ್ಟಿವಾ ಕಾಪಾಡಿಕೊಂಡಿದೆ. ಆದರೆ ಇಲ್ಲೂ ಗಸ್ಟೊ ವೈಫಲ್ಯತೆ ಅನುಭವಿಸಿದೆ.

ಚಾಲನಾ ಸ್ಥಾನ
ನಿಮ್ಮ ಪಯಣ ಉಲ್ಲಾಸದಾಯಕವಾಗಿರಬೇಕಾದರೆ ಅತ್ಯುತ್ತಮ ಚಾಲನಾ ಸ್ಥಾನ (Riding Position) ಹೊಂದಿರಬೇಕು. ಆಕ್ಟಿವಾ ತ್ರಿಜಿಯಲ್ಲಿ ಇದನ್ನು ಕಾಣಬಹುದು. ಆದರೆ ಗಸ್ಟೊ ಹ್ಯಾಂಡಲ್ ಬಾರ್ ನಿಂದ ಹಿಡಿದು ಸಂಯೋಜನೆಯ ಕೊರತೆ ಅನುಭವಿಸುತ್ತದೆ.

ಸೀಟು ಎತ್ತರ ಹೊಂದಾಣಿಕೆ
ಗಸ್ಟೊದಲ್ಲಿ ಕಂಡುಬಂದಿರುವ ಹೊಸ ವೈಶಿಷ್ಟ್ಯ ಇದಾಗಿದ್ದು, ಎರಡು ವಿಧಗಳಲ್ಲಿ ಚಾಲನಾ ಸ್ಥಾನದ ಎತ್ತರವನ್ನು ಹೊಂದಾಣಿಕೆ ಮಾಡಬಹುದಾಗಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ದೊರಕುವುದಿಲ್ಲ ಎಂಬುದು ಅಷ್ಟೇ ಸತ್ಯ.

ಸಸ್ಪೆಷನ್
ಆಕ್ಟಿವಾ ತ್ರಿಜಿ ಸಸ್ಪೆಷನ್ ವ್ಯವಸ್ಥೆ ನಿಖರತೆಯನ್ನು ಕಾಯ್ದುಕೊಂಡಿದ್ದು, ಆರಾಮದಾಯಕ ಚಾಲನೆ ಪ್ರದಾನ ಮಾಡುತ್ತದೆ. ಇನ್ನೊಂದೆಡೆ ರಸ್ತೆಗಳಲ್ಲಿ ಚಿಕ್ಕ ಚಿಕ್ಕ ಗುಂಡಿಗಳು ಎದುರಾದರೆ ಗಸ್ಟೊ ಸಮತೋಲನ ಕಾಪಾಡಲು ಪೇಚಾಡುತ್ತಿದೆ.

ಬ್ರೇಕ್ ಸಿಸ್ಟಂ
ಗಸ್ಟೊ ಬ್ರೇಕ್ ವ್ಯವಸ್ಥೆಗೆ ನಾವಿಲ್ಲಿ ಹ್ಯಾಟ್ಸಪ್ ಹೇಳಬೇಕಾಗುತ್ತದೆ. ಡ್ರಮ್ ಬ್ರೇಕ್ ಇರುವ ಹೊರತಾಗಿಯೂ ಗಸ್ಟೊ ಆತ್ಮವಿಶ್ವಾಸದಾಯಕ ಚಾಲನೆಯನ್ನು ನೀಡುತ್ತದೆ. ಇದೇ ಸಂದರ್ಭದಲ್ಲಿ ಕೊಂಬಿ ಬ್ರೇಕ್ ವ್ಯವಸ್ಥೆ ಹೊಂದಿರುವ ಆಕ್ಟಿವಾದಲ್ಲಿ ಎಲ್ಲೋ ನಿಖರತೆಯ ಕೊರತೆ ಕಂಡುಬಂದಿದೆ.

ಮೈಲೇಜ್
ನಮ್ಮ ಚಾಲನಾ ಅನುಭವದ ಪ್ರಕಾರ ನೈಜ ರಸ್ತೆ ಪರಿಸ್ಥಿತಿಯಲ್ಲಿ ಆಕ್ಟಿವಾ ತ್ರಿಜಿ ಪ್ರತಿ ಲೀಟರ್ ಗೆ 41 ಕೀ.ಮೀ. ಹಾಗೂ ಮಹೀಂದ್ರ ಗಸ್ಟೊ 28 ಕೀ.ಮೀ.ಗಳಷ್ಟು ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್
ಯುವ ವಾಹನ ಪ್ರೇಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಗಸ್ಟೊದಲ್ಲಿ ಸ್ಟೈಲಿಷ್ ಇನ್ಸ್ಟ್ರಮೆಂಟ್ ಕ್ಲಸ್ಟರ್ ಕೊಡಲಾಗಿದೆ. ಆದರೆ ನಿಜಸ್ಥಿತಿಯಲ್ಲಿ ಇದನ್ನು ಗ್ರಹಿಸುವುದು ಕಷ್ಟಕರವೆನಿಸುತ್ತದೆ.

ಇಂಧನ ತುಂಬುವುದು ಹೇಗೆ?
ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಎರಡೂ ಸ್ಕೂಟರ್ ಗಳು ತದ್ವಿರುದ್ಧವಾಗಿ ಸೀಟು ಓಪನ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಇಂಧನ ತುಂಬುವುದಕ್ಕಾಗಿ ನೀವಿದನ್ನು ತೆರೆಯಲೇ ಬೇಕಾಗುತ್ತದೆ.

ಸ್ಟೋರೆಜ್ ಜಾಗ
ಆಕ್ಟಿವಾ ಸೀಟು ಕೆಳಗಡೆಯ ಸ್ಟೋರೆಜ್ ಜಾಗದಲ್ಲಿ ಒಂದು ಫುಲ್ ಫೇಸ್ ಹೆಲ್ಮೆಟ್ ಜೊತೆಗೆ ಬದಿಯಲ್ಲಿ ಟೂಲ್ ಕಿಟ್ ಇಡುವ ವ್ಯವಸ್ಥೆಯನ್ನು ಹೊಂದಿರುತ್ತದೆ. ಇನ್ನೊಂದೆಡೆ ಗಸ್ಟೊ ಸ್ಟೋರೆಜ್ ಜಾಗ ಕಿರಿದಾಗಿದೆ.

ರಿಯರ್ ವ್ಯೂ ಮಿರರ್
ಹೆಚ್ಚುವರಿ ಆಕ್ಸೆಸರಿಗಳಲ್ಲಿ ಗಸ್ಟೊ ಒಳಗೊಂಡಿರುವ ಒಂದೇ ಒಂದು ಅತ್ಯುತ್ತಮ ಆಯ್ಕೆಯೆಂದರೆ ಅದುವೇ ರಿಯರ್ ವ್ಯೂ ಮಿರರ್. ಈ ಸ್ಟೈಲಿಷ್ ರಿಯರ್ ವ್ಯೂ ಮಿರರ್ ಸವಾರರಿಗೆ ಅತ್ಯುತ್ತಮ ಗೋಚರತೆಯನ್ನು ಪ್ರದಾನ ಮಾಡುತ್ತದೆ. ಇನ್ನೊಂದೆಡೆ ಆಕ್ಟಿವಾ ಹಿನ್ನಡೆ ಅನುಭವಿಸಿದೆ.

ಹೆಡ್ ಲೈಟ್
ಇಲ್ಲೂ ಆಕ್ಟಿವಾಗಿಂತಲೂ ಮುನ್ನಡೆ ಕಾಯ್ದುಕೊಂಡಿರುವ ಗಸ್ಟೊದ ಪ್ರಕಾಶಮಾನವಾದ ಹೆಡ್ ಲೈಟ್ ರಾತ್ರಿ ವೇಳೆಯಲ್ಲಿ ಅತ್ಯುತ್ತಮ ಗೋಚರತೆಯನ್ನು ಕಾಪಾಡಿಕೊಂಡಿದೆ.

ನಿಜಸ್ಥಿತಿ
ನಿಜಸ್ಥಿತಿ ಏನೆಂದರೆ ಆಕ್ಟಿವಾ ತ್ರಿಜಿಗೆ ಪೈಪೋಟಿ ಒಡ್ಡುವ ಪ್ರಯಾಣಿಕ ಪ್ರಯತ್ನ ಮಾಡುವಲ್ಲಿ ಗಸ್ಟೊ ಹಿನ್ನೆಡೆ ಬಿದ್ದಿರುವುದು ಸತ್ಯ. ಚಾಲನೆಯಿಂದ ಹಿಡಿದು ಎಂಜಿನ್ ನಿಖರತೆಯಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಗಸ್ಟೊ - ಮುನ್ನಡೆ
ಸ್ಟೈಲಿಷ್ ವಿನ್ಯಾಸ, ಬ್ರೇಕ್ ವ್ಯವಸ್ಥೆ, ಪ್ರಕಾಶಮಾನವಾದ ಹೆಡ್ ಲೈಟ್ ಹಾಗೂ ರಿಯರ್ ವ್ಯೂ ಮಿರರ್ ಗಳು ಗಸ್ಟೊ ಪಾಲಿಗೆ ಧನಾತ್ಮಕ ಅಂಶವಾಗಿ ಪರಿಣಮಿಸಿದೆ.

ಗಸ್ಟೊ - ಹಿನ್ನೆಡೆ
ಅದೇ ಹೊತ್ತಿಗೆ ಎಂಜಿನ್ ವೈಬ್ರೇಷನ್, ಪಿಕಪ್, ಸಸ್ಪೆಷನ್ ಮುಂತಾದ ವಿಷಯಗಳಲ್ಲಿ ಗಸ್ಟೊ ಹಿನ್ನಡೆ ಅನುಭವಿಸಿದೆ.

ಆಕ್ಟಿವಾ - ಮುನ್ನಡೆ
ಮತ್ತೊಂದೆಡೆ ಎಂಜಿನ್ ಹಾಗೂ ಚಾಲನಾ ಅನುಭವದ ವಿಚಾರದಲ್ಲಿ ಆಕ್ಟಿವಾ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಆಕ್ಟಿವಾ - ಹಿನ್ನೆಡೆ
ಆದರೆ ಹಿಂಭಾಗದ ವಿನ್ಯಾಸ, ಬ್ರೇಕ್ ವ್ಯವಸ್ಥೆ ಹಾಗೂ ಹೆಡ್ ಲೈಟ್ ವಿಚಾರದಲ್ಲಿ ಗಸ್ಟೊಗಿಂತಲೂ ಹಿಂದೆ ಬಿದ್ದಿದೆ.

ಅಂತಿಮ ತೀರ್ಪು
ಒಟ್ಟಿನಲ್ಲಿ ಅರ್ಧ ತಾಸು ಗಾಡಿ ಓಡಿಸಿದಾಗಲೇ ನೀವು ಸಹ ಅಂತಿಮ ನಿಲುವನ್ನು ಪ್ರಕಟಿಸಬಹುದಾಗಿದೆ. ಇಲ್ಲಿ ಗಸ್ಟೊ ಮಾದರಿಯನ್ನು ಆಕ್ಟಿವಾ 3ಜಿ ಮೀರಿಸಿದೆ ಎಂಬುದರಲ್ಲಿ ಸಂಶಯವೂ ಇಲ್ಲ. ಈ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಮಹೀಂದ್ರ ಇನ್ನು ಸಾಕಷ್ಟು ಅಧ್ಯಯನ ಮಾಡಬೇಕಾಗಿದ್ದು, ಅತ್ಯುತ್ತಮ ಎಂಜಿನ್ ಉತ್ಪನ್ನಗಳತ್ತ ಗಮನ ಕೇಂದ್ರಿಕರಿಸಬೇಕಾಗಿದೆ. ಯಾಕೆಂದರೆ ಭಾರತೀಯ ಗ್ರಾಹಕರನ್ನು ಅಷ್ಟು ಸುಲಭದಲ್ಲಿ ಮನವೊಳಿಸಬಹುದು ಎಂಬುವುದು ಶುದ್ಧ ಮೂರ್ಖತನ.

ತೆರೆಯ ಹಿಂದೆ ನಡೆದಿದ್ದೇನು?
ಗಸ್ಟೊ ಹಾಗೂ ಆಕ್ಟಿವಾ ತ್ರಿಜಿ ಸ್ಕೂಟರ್ ವಿಮರ್ಶೆಗೆ ಸಂಬಂಧಪಟ್ಟಂತೆ ಗರಿಷ್ಠ ಮಾಹಿತಿಯನ್ನು ಓದುಗರಿಗೆ ಒದಗಿಸುವ ಪ್ರಯಾಣಿಕ ಪ್ರಯತ್ನವನ್ನು ನಮ್ಮ ತಂಡ ಮಾಡಿದ್ದು, ಇದರಲ್ಲಿ ನಮಗೆ ಅಭಿಮಾನವಿದೆ.

ತೆರೆಯ ಹಿಂದೆ ನಡೆದಿದ್ದೇನು?
ಚಿತ್ರವೊಂದನ್ನು ಸೆರೆ ಹಿಡಿಯಲು ಎಲ್ಲ ಕೋಣಗಳಿಂದಲೂ ಬಹಳ ಏಕಾಗ್ರತೆಯಿಂದ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಬೇಕಾಗುತ್ತದೆ.

ತೆರೆಯ ಹಿಂದೆ ನಡೆದಿದ್ದೇನು?
ಬೇಗ, ಬೇಗ, ರೈಲು ಬರುತ್ತಿದ್ದು ಸಾಧ್ಯವಾದರೆ ಇಲ್ಲೊಂದು ಫೋಟೊ ಕ್ಲಿಕ್ಕಿಸುವ ಪ್ರಯತ್ನ ಮಾಡೋಣವೇ.?


Click it and Unblock the Notifications








