ಸಿಂಗಲ್ ಚಾರ್ಜ್‌ಗೆ 323 Km ರೇಂಜ್, ಟಾಪ್ ಸ್ಟೀಡ್ 155 km: ವೇಗದ ಕುದುರೆ, ಅಲ್ಟ್ರಾವೈಲೆಟ್ F77 ಮ್ಯಾಕ್ 2 ರಿವ್ಯೂ
ಬೆಂಗಳೂರು ಮೂಲದ ಪ್ರಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನಿರ್ಮಾಣ ಕಂಪನಿ ಅಲ್ಟ್ರಾವೈಲೆಟ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗಾಗಲೇ ಮಾರುಕಟ್ಟೆಯಲ್ಲಿ ಅಲ್ಟ್ರಾವೈಲೆಟ್ F77 ಎಂಬ ಬೈಕ್ ಅನ್ನು ಲಾಂಚ್ ಮಾಡಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು. F77 ಎಂಬ ಬೈಕ್ ಅನ್ನು ಕಾನ್ಸೆಪ್ಟ್‌ನಿಂದ, ಮಾರುಕಟ್ಟೆಗೆ ತರಲು ಅಲ್ಟ್ರಾವೈಲೆಟ್ ಕಂಪನಿಯು ಸುಮಾರು 6 ವರ್ಷಗಳ ಸಮಯಾವಕಶವನ್ನು ತೆಗೆದುಕೊಂಡಿತು. ಇದೀಗ ಕಂಪನಿಯು ಭಾರತದಲ್ಲಿ ತನ್ನ ಹೊಸ ಬೈಕ್ ಮಾದರಿಯಾದ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಂಬ ಬೈಕ್ ಅನ್ನು ಲಾಂಚ್ ಮಾಡಿದೆ.
ಹಿಂದಿನ ಮಾದರಿಗಿಂತ ಸಾಕಷ್ಟು ಬದಲಾವಣೆಯೇನೂ ಈ ಬೈಕ್‌ನಲ್ಲಿ ಇಲ್ಲವಾದರೂ, ಅಲ್ಟ್ರಾವೈಲೆಟ್ F77 ಗಿಂತ ಕೆಲವೊಂದು ಬದಲಾವಣೆಗಳೊಂದಿಗೆ ಮತ್ತು ಹೆಚ್ಚಿನ ಬಣ್ಣಗಳೊಂದಿಗೆ ಬಂದಿದ್ದು, ಖರೀದಿದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ. ಅಲ್ಟ್ರಾವೈಲೆಟ್ F77 ಬೈಕ್ ಓಡಿಸಿದವರಿಗೆ ಗೊತ್ತು ಅದೆಷ್ಟು ಪವರ್ ಮತ್ತು ಟಾರ್ಕ್ ಆ ಬೈಕ್‌ನಲ್ಲಿ ಅಡಗಿದೆ ಎಂಬುದು.

ಅದೇ ರೀತಿ ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಸಹ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಿದ್ದರೂ ಅದು ಮೊದಲ ಬೈಕ್ ರೀತಿಯಲ್ಲೇ ಪವರ್ ಮತ್ತು ಟಾರ್ಕ್ ಹಾಗೂ ವಿನ್ಯಾಸ ಶೈಲಿಗಳನ್ನು ಉಳಿಸಿಕೊಂಡಿದೆಯೇ ಎಂಬುದು ಎಲ್ಲರ ಕುತೂಹಲ. ಆ ಕುತೂಹಲಕ್ಕೆ ನಾವಿಂದು ತೆರೆ ಎಳೆಯಲಿದ್ದು, ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕ್‌ನ ವಿವರವಾದ ರಿವ್ಯೂವ್ ಅನ್ನು ನಿಮಗೆ ಅರ್ಪಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ, ಮತ್ತು ಗೆಳೆಯರೊಂದಿಗೆ ಹಂಚಿಕೊಳ್ಳಿ.
ವಿನ್ಯಾಸ: ಮೊದಲ ನೋಟದಲ್ಲಿ, ಮ್ಯಾಕ್ 2 ಗೆ ಬದಲಾವಣೆಗಳನ್ನು ಗುರುತು ಹಿಡಿಯುವುದು ಅಷ್ಟೊಂದು ಸುಲಭವಲ್ಲ. ಆದರೆ ನೀವು ಹೊಸ F77 ಮ್ಯಾಕ್ 2 ಬೈಕ್ ಅನ್ನು ವಿವರವಾಗಿ ಅವಲೋಕಿಸಿದಾಗ ಮಾತ್ರ ಈ ಬೈಕ್‌ನಲ್ಲಿ ಆಗಿರುವ ನೀವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಸಾಧ್ಯ.

ಈ ಬೈಕ್‌ನ ನೋಟದ ವಿಚಾರದಲ್ಲಿ ನೋಡುವುದಾದರೆ, ತನ್ನ ಫ್ಯೂಚರಿಸ್ಟಿಕ್ ಲುಕ್ ಅನ್ನು ಮುಂದುವರೆಸುತ್ತಿದೆ. ನಿಮಗೆಲ್ಲಾ ತಿಳಿದಿರಿವಂತೆ ಅಲ್ಟ್ರಾವೈಲೆಟ್ ತನ್ನ ಮೊದಲ ಮಾದರಿಯಾದ ಎಫ್‌೭೭ ಬೈಕ್‌ಗೆ ಕೇವಲ ಮೂರು ಬಣ್ಣದ ಆಯ್ಕೆಗಳನ್ನಷ್ಟೇ ನೀಡುತ್ತಿತ್ತು. ಒಂದು ರೀತಿಯಲ್ಲಿ ಹೇಳುವುದಾದರೆ ಗ್ರಾಹಕರೂ ಸಹ ಅಧಿಕ ಬಣ್ಣಗಳ ಆಯ್ಕೆಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಿದ್ದರು.
ಈ ಕಾರಣದಿಂದಲೇ ಈ ಬಾರಿ ಕಂಪನಿಯು ಹೊಸ ಬೈಕ್‌ಗೆ ಹೊಸ ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಲೈಟಿಂಗ್ ಬ್ಲೂ, ಬೂದು, ಟರ್ಬೊ ರೆಡ್, ಆಫ್ಟರ್‌ಬರ್ನರ್ ಹಳದಿ, ಸ್ಟೆಲ್ತ್ ಗ್ರೇ, ಕಾಸ್ಮಿಕ್ ಬ್ಲಾಕ್, ಪ್ಲಾಸ್ಮಾ ರೆಡ್, ಸೂಪರ್‌ಸಾನಿಕ್ ಸಿಲ್ವರ್ , ಮತ್ತು ಸ್ಟೆಲ್ಲರ್ ವೈಟ್.

ಫೀಚರ್‌ಗಳು: ಇನ್ನು ಇತರ ಹೊಸ F77 ಮ್ಯಾಕ್ 2 ಬೈಕ್‌ನಲ್ಲಿರುವ ಇತರ ಬದಲಾವಣೆಗಳು ನಿಮಗೆ ತಿಳಿಯಬೇಕಾದರೆ ನೀವು ಈ ಬೈಕ್ ಅನ್ನು ಉಪಯೋಗಿಸಲು ಆರಂಭಿಸಬೇಕು. ಈ ಬೈಕ್‌ನ ಚಾರ್ಜಿಂಗ್ ಪೋರ್ಟ್‌ನಲ್ಲಿ ಹೊಸ ಅಲ್ಯುಮಿನಿಯಂ ಲಿಡ್ ಅನ್ನು ನೀಡಲಾಗಿದೆ. ಮತ್ತು ರೈಡರ್‌ಗಳ ರೈಡಿಂಗ್ ಅನುಭವವನ್ನು ಮತ್ತಷ್ಟು ಅಹ್ಲಾದಕರವಾಗಿಸಲು ಕೊಂಚ ಅಗ್ರೆಸಿವ್ ಪೊಸಿಷನ್ ಅನ್ನು ನೀಡಲಾಗಿದೆ. ಇದು ರೈಡರ್‌ಗಳುಬೈಕ್ ಓಡಿಸುವಾಗ ಹೆಚ್ಚಿನ ಬ್ಯಾಲೆನ್ಸ್ ಅನ್ನು ಹೊಂದಲು ನೆರವಾಗುತ್ತದೆ.
F77 ಮ್ಯಾಕ್ 2 ಬೈಕ್‌ನಲ್ಲೂ (Ultraviolette F77 Mach 2) ಮೂರು ಲೆವೆಲ್‌ಗಳ ರೀಜಿನ್ ಬ್ರೇಕಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಆದರೆ ಮಾಲೀಕರಿಗೆ ಬೇಕಾದರೆ ಇದನ್ನು ಹತ್ತು ಸ್ಟೆಪ್‌ಗಳ ವರೆಗೆ ಸೆಟ್ ಮಾಡಬಹುದಾಗಿದ್ದು, ಬೈಕ್ ರೈಡ್ ಮಾಡುವಾಗ ಹೆಚ್ಚಿನ ಎನರ್ಜಿಯನ್ನು ಉತ್ಪಾದಿಸಬಹುದಾಗಿದೆ. ಇದಕ್ಕಾಗಿಯೇ ಬಹುತೇಕ ಎಲೆಕ್ಟ್ರಿಕ್ ವಾಹನದಲ್ಲಿ ರೀಜೆನ್ ಬ್ರೇಕಿಂಗ್ ಅನ್ನು ನೀಡಲಾಗುತ್ತದೆ.

ಕಂಪನಿ ರೀಜೆನ್ ಬ್ರೇಕಿಂಗ್ ಜೊತೆಗೆ ಎಬಿಎಸ್ ಅನ್ನು ಸಹ ಈ ಬೈಕ್‌ನಲ್ಲಿ ನೀಡುತ್ತಿದೆ. ಇದನ್ನು ಹೊಸ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್‌ನ ಭಾಗವಾಗಿ ಕಂಪನಿ ನೀಡಿದ್ದು, ಇದರಿಂದಾಗಿ ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕಿದರೆ ಬೈಕ್‌ನ ಚಕ್ರಳು ಲಾಕ್ ಆಗುವುದನ್ನು ತಪ್ಪಿಸಬಹುದಾಗಿದೆ. ಇದರಿಂದಾಗಿ ಬೈಕ್‌ನ ಸುರಕ್ಷತೆಯೂ ಸಹ ಹೆಚ್ಚುತ್ತದೆ ಎಂಬುದನ್ನು ಕಂಪನಿ ಇಲ್ಲಿ ಒತ್ತಿ ಹೇಳಬೇಕಾಗಿಲ್ಲ.
ಈ ಬೈಕ್‌ಗೆ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಇದು ಬೈಕ್ ಅನ್ನು ಜಾರುವ ಪ್ರದೇಶ ಮತ್ತು ಹೆಚ್ಚು ಮರಳಿರುವ ಪ್ರದೇಶಗಳಲ್ಲಿ ಓಡಿಸುವಾಗ ಹೆಚ್ಚಿನ ಸಹಾಯ ಮಾಡುತ್ತದೆ. ಈ ಸಂಧರ್ಭದಲ್ಲಿ ನಿಮ್ಮ ಬೈಕ್‌ನ ಜಾರದಂತೆ ಮತ್ತು ವ್ಹೀಲ್ ಸ್ಪಿನ್ ಆಗದಂತೆ ಅಥವಾ ಅದನ್ನು ಕಡಿಮೆ ಮಾಡಲು F77 ಮ್ಯಾಕ್ 2 ಬೈಕ್‌ನ ಈ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಸಹಾಯ ಮಾಡುತ್ತದೆ.

'ಚೆರ್ರಿ ಆನ್ ದಿ ಕೇಕ್' ಎನ್ನುವ ರೀತಿಯಲ್ಲಿ ಇದೆಲ್ಲದರ ಜೊತೆಗೆ ಕಂಪನಿ ಈ ಬೈಕ್‌ನಲ್ಲಿ ಹಿಲ್ ಹೋಲ್ಡ್ ಸೆಟ್ಅಪ್ ಅನ್ನು ಸಹ ನೀಡುತ್ತಿದೆ. ಇದರಿಂದ ನೀವು ಏರಾದ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸುವಾಗ ಈ ಫೀಚರ್ ಅನ್ನು ಉಪಯೋಗಿಸಿದರೆ ಬೈಕ್ ಹಿಂದಕ್ಕೆ ಜಾರುವುದನ್ನು ತಡೆಯಬಹುದಾಗಿದೆ. ಈ ಫೀಚರ್ ಇತ್ತೀಚೆಗೆ ಬಹುತೇಕ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಂಪನಿಗಳು ನೀಡುತ್ತಿವೆ.
ಮಾತ್ರವಲ್ಲದೇ ಈ ಬೈಕ್‌ನಲ್ಲಿ ಟೆಕ್ ಅಪ್‌ಗ್ರೇಡ್‌ಗಳು ಸಹ ದದೊರಕಿದ್ದು ಜಿಯೋಫೆನ್ಸಿಂಗ್/ಡೆಲ್ಟಾ ವಾಚ್, ಕ್ರ್ಯಾಶ್ ಅಲರ್ಟ್‌ಗಳು, ವೈಲೆಟ್ ಎಐ, ರೈಡ್ ಅನಾಲಿಟಿಕ್ಸ್, ಚಾರ್ಜ್ ಮಿತಿ, ಡೀಪ್ ಸ್ಲೀಪ್/ವೆಕೇಶನ್ ಮೋಡ್, ಪಾರ್ಕ್ ಅಸಿಸ್ಟ್, ಲಾಕ್‌ಡೌನ್, ಮತ್ತು ಫೈಂಡ್ ಮೈ ಫಿಚರ್‌ಗಳು ಅಪ್‌ಗ್ರೇಡ್ ಆಗಿದೆ ಎನ್ನುವುದು ಪ್ರಮುಖವಾದ ವಿಚಾರ.

ಪವರ್‌ಟ್ರೇನ್‌ಗೂ ಕೊಂಚ ಟ್ವೀಕ್‌ಗಳನ್ನು ಮಾಡಲಾಗಿದೆ. ಬ್ಯಾಟರಿ ಸಾಮರ್ಥ್ಯವು (ರೀಕಾನ್‌ನ) ಮೊದಲಿನ 10.3kWh ಆಗಿದ್ದರೂ, IDC ಶ್ರೇಣಿಯು ಒಂದೇ ಚಾರ್ಜ್‌ನಲ್ಲಿ ಸಿಗುವ ರೇಂಜ್ ಸುಮಾರು 16 ಕಿಮೀನಷ್ಟು ಹೆಚ್ಚಾಗಿದ್ದು ಈಗ 323 ಕಿಮೀ ನಷ್ಟು ಓಡುತ್ತದೆ. ಅಲ್ಟ್ರಾವಯೊಲೆಟ್‌ನ ಸ್ವಂತ ಸೂಪರ್‌ನೋವಾ ಚಾರ್ಜರ್ ಕೇವಲ 45 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ರೀಚಾರ್ಜ್‌ಗೆ ಅವಕಾಶ ನೀಡುವ ಜೊತೆಗೆ ಈಗ ವೇಗವಾಗಿ ಚಾರ್ಜಿಂಗ್ ಆಯ್ಕೆಗಳು ಲಭ್ಯವಿದೆ.
ಬ್ಯಾಟರಿಯು ಈಗ 40.23bhp (1.35bhp ಯಿಂದ) ಮತ್ತು 100Nm (5Nm ವರೆಗೆ) ಉತ್ಪಾದಿಸುವ ಸ್ವಲ್ಪ ಹೆಚ್ಚು ಶಕ್ತಿಯುತ ಮೋಟಾರ್‌ಗೆ ಸಂಪರ್ಕ ಹೊಂದಿದೆ. ಈ ನವೀಕರಣಗಳ ಪ್ರಕಾರ ಹೊಸ ಮ್ಯಾಕ್ 2 ಕೇವಲ 2.8 ಸೆಕೆಂಡ್‌ಗಳಲ್ಲಿ 0-60 ಕಿಮೀ/ಗಂ ವೇಗವನ್ನು ಪಡೆಯುತ್ತದೆ ಮತ್ತು 0-100 ಕಿಮೀ/ಗಂ ವೇಗವನ್ನು ಈಗ ಕೇವಲ 7.7 ಸೆಕೆಂಡುಗಳಲ್ಲಿ ತಲುಪುತ್ತದೆ. ಗರಿಷ್ಠ ವೇಗವು 8 ಕಿಮೀ ಹೆಚ್ಚಾಗಿದ್ದು ಈ ಬೈಕ್ 155 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ರೈಡಿಂಗ್ ಇಂಪ್ರೆಷನ್: ಈಗ ನಾವು ಪ್ರಮುಖ ವಿಷಯಕ್ಕೆ ಬರೋಣ. ಈ ಹೊಸ ಮ್ಯಾಕ್ 2, F77 ಬೈಕ್‌ಗಿಂತ ಹೆಚ್ಚಿನ ರೇಂಜ್, ಪವರ್ ಮತ್ತು ಟಾರ್ಕ್ ಅನ್ನು ಪಡೆದಿರುವುದು ಕೇವಲ ಪೇಪರ್‌ನಲ್ಲಿ ಮಾತ್ರ ಅಲ್ಲ. ಈ ಬದಲಾವಣೆಗಳು ನಾವು ಈ ಬೈಕ್ ಅನ್ನು ಓಡಿಸುವಾಗಲೂ ಅನುಭವಕ್ಕೆ ಬರುತ್ತದೆ.
ಬೈಕ್ ರೈಡ್ ಮಾಡುವಾಗ ಹೆಚ್ಚಾಗಿ ಗಮನಕ್ಕೆ ಬರುವ ಅಂಶದಲ್ಲಿ ಪ್ರಮುಖವಾದುದು ಇದರ ಫೋರ್ ವೇ ಟ್ರಾಕ್ಷನ್ ಕಂಟ್ರೋಲ್. ಇದು ಈ ಬೈಕ್‌ನ ಸಾಟಿಯಿಲ್ಲದ ವೇಗವನ್ನು ಆತ್ಮ ವಿಶ್ವಾಸದಿಂದ ಓಡಿಸಲು ಸಹಾಯ ಮಾಡುತ್ತದೆ. ಇದರ ಲೆವೆಲ್ 1, ಈ ಬೈಕ್‌ನ ವ್ಹೀಲ್ ಸ್ಪಿನ್ ಅನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವುದಿಲ್ಲ. ನೀವೇನಾದರೂ ಈ ಬೈಕ್ ಅನ್ನು ದಿನವೂ ಓಡಿಸುವವರಾಗಿದ್ದರೆ ಇದರ ಲೆವೆಲ್ 2 ನಿಮಗೆ ಹೇಳಿ ಮಾಡಿಸಿದ್ದು.

ಇನ್ನು ಹೊಸ F77 ಮ್ಯಾಕ್ 2 ಬೈಕ್‌ನ ರೈಡಿಂಗ್ ಮೋಡ್ ಬಗ್ಗೆ ಹೇಳಲೇ ಬೇಕು. ಇದರಲ್ಲಿ ನಿಮಗೆ ಗ್ಲೈಡ್, ಕಾಂಬಾಟ್, ಬಲಾಸ್ಟಿಕ್ ಎಂಬ ಮೂರು ರೈಡಿಂಗ್ ಮೋಡ್‌ಗಳು ಸಿಗುತ್ತದೆ. ನೀವು ಓಡಿಸುತ್ತಿರುವ ಪ್ರದೇಶ, ಮತ್ತು ವೇಗಕ್ಕೆ ಅನುಗುಣವಾಗಿ ನೀವು ಈ ಮೋಡ್‌ಗಳನ್ನು ಬಳಸಲಬಹುದಾಗಿದೆ. ಇವುಗಳಲ್ಲಿ ಅತೀ ಹೆಚ್ಚು ಪವರ್ ನೀಡುವ ರೈಡಿಂಗ್ ಮೋಡ್ ಎಂದರೆ ಅದು ಬಲಾಸ್ಟಿಕ್.
10-ಹಂತದ ರೀಜೆನ್ ಸೆಟಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ವಿವಿಧ ಹಂತಗಳ ಮೂಲಕ ಚಲಿಸುವಾಗ ನಿಲ್ಲಿಸುವ ಶಕ್ತಿಯಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿ ಕಂಡುಬರುತ್ತದೆ. ನೀವು ಯಾವ ಹಂತದ ರೀಜೆನ್ ಬ್ರೇಕಿಂಗ್ ಅನ್ನು ಬಳಸುತ್ತೀರೋ, ಅದಕ್ಕೆ ಅನುಗುಣವಾಗಿ ನಿಮ್ಮ ಬೈಕ್‌ನಲ್ಲಿ ಶಕ್ತಿಯ ಪುನರುತ್ಪತ್ತಿ ಆಗುತ್ತದೆ.

ಬೈಕ್‌ನ ಸಸ್ಪೆನ್ಷನ್ ನೋಡುವುದಾದರೆ, ಇದು ಸ್ಟಿಫ್ ಆಗಿದ್ದು ಇದರಿಂದಾಗಿ ಬೈಕ್ ಅನ್ನು ಕಾರ್ನರ್‌ಗಳಲ್ಲಿ ಚಲಾಯಿಸುವಾಗ ಉತ್ತಮ ಅನುಭವವನ್ನು ಪಡೆಯಬಹುದಾಗಿದೆ. ಆದರೂ ಸಹ ನೀವು ಬಂಪ್‌ಗಳು ಅಥವಾ ಸ್ಪೀಡ್ ಬ್ರೇಕರ್‌ಗಳ ಮೇಲೆ ಚಲಾಯಿಸುವಾಗಲೂ ಸಹ ಅಷ್ಟೊಂದು ಒತ್ತಡವನ್ನು ನಿಮ್ಮ ಕೈಗಳಿಗೆ ನಿಡುವುದಿಲ್ಲ.
ಕೆಲವೊಂದು ಬಾರಿ ನಾವು ಬ್ರೇಕ್‌ಗಳನ್ನು ಬಳಸುವಾಗ ಇನ್ನೂ ಕೊಂಚ ಬೈಟ್ ಇರಬೇಕಿತ್ತು ಎಂದು ಅನಿಸುವುದರಲ್ಲಿ ಸಂಶಯವಿಲ್ಲ. ಆದರೆ ನಾರ್ಮಲ್ ಕಂಡೀಷನ್‌ಗಳಲ್ಲಿ ಬ್ರೇಕ್‌ಗಳು ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತವೆ. ಕಹೈ ಸ್ಪೀಡ್‌ಗಳಲ್ಲಿ ಬಂದಿ ಬ್ರೇಕ್ ಹಾಕಿದಾಗ ನಮ್ಮ ದೇಹದ ತೂಕವೂ ಬೈಕ್‌ಗೆ ರವಾನೆಯಾಗುತ್ತದೆ. ಪಿಲಿಯನ್ ರೈಡರ್ ಇದ್ದರೆ ಇದನ್ನು ತಪ್ಪಿಸಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಮ್ಮ ಪ್ರಕಾರ ಕೊಂಚ ಅಧಿಕ ಬೆಲೆ ಕೊಡಲು ಸಿದ್ದವಿದ್ದು, ಒಂದೊಳ್ಳೆ ಪವರ್‌ಫುಲ್ ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ. ಈ ಬೈಕ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದ್ದು ಸ್ಟಾಂಡರ್ಡ್ ವೇರಿಯಂಟ್ ನಿಮಗೆ 2.99 ಲಕ್ಷದಲ್ಲೂ, ರೇಕಾನ್ ವೇರಿಯಂಟ್ ನಿಮಗೆ 3.99 ಲಕ್ಷ ಎಕ್ಸ್ ಶೋ ರೂಮ್ ಬೆಲೆಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








