ಅಪಘಾತರಹಿತ ಸ್ವಯಂಚಾಲಿತ ಕಾರಿಗೆ ಸ್ವಾಗತ ಸುಸ್ವಾಗತ

ಚಾಲಕನ ನೆರವಿಲ್ಲದೇ ಬ್ರೇಕ್, ಸ್ಟಿಯರಿಂಗ್ ಮತ್ತು ಗರಿಷ್ಠ 80 ಕಿ.ಮೀ. ವೇಗದವರೆಗೆ ಸ್ವಯಂ ಚಾಲಿತವಾಗಿ ಚಲಿಸುವ ಆಟೋ ಪೈಲೆಟ್ ಸಿಸ್ಟಮ್ ನ್ನು ಪ್ರಮುಖ ಕಾರು ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಈ ಕಾರು ಚಲಿಸುವಾಗ ಚಾಲಕನಿಗೆ ಏನೂ ಕೆಲಸವಿರುವುದಿಲ್ಲ. ಅಂಬಿಗಾ ನಾ ನಿನ್ನ ನಂಬಿದೆ ಎಂದು ಚಾಲಕನ ಮೇಲೆ ಪ್ರಾಣದ ಭಾರ ಹಾಕಿ ಪ್ರಯಾಣಿಸುವ ಅಗತ್ಯವೂ ಇಲ್ಲ.
ಈ ಸಿಸ್ಟಮ್ ಅಳವಡಿಸಿದ ಕಾರುಗಳನ್ನು ಟೆಸ್ಟ್ ಮಾಡುತ್ತಿರುವುದು ಫೋಕ್ಸ್ ವ್ಯಾಗನ್ ಕಂಪನಿ. ಮುಂದಿನ ದಿನಗಳಲ್ಲಿ ಕಂಪನಿಯ ಕಾರುಗಳು ಇಂತಹ ಆಟೋ ಪೈಲೆಟ್ ಸಿಸ್ಟಮ್ ನೊಂದಿಗೆ ಬರುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ.
ಈಗಾಗಲೇ ನೂತನ ಫೋಕ್ಸ್ ವ್ಯಾಗನ್ "ಅಪ್" ಕಾರು ಲೇಸರ್ ಅಸಿಸ್ಟೆಡ್ ಸಿಟಿ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ತಕ್ಷಣ ಯಾವುದಾದರೂ ವಸ್ತು, ವ್ಯಕ್ತಿ ಅಡ್ಡಬಂದರೆ ಸ್ವಯಂಚಾಲಿತವಾಗಿ ಕಾರು ಬ್ರೇಕ್ ಹಾಕಿಕೊಳ್ಳುತ್ತದೆ.
ಇದೇ ತಂತ್ರಜ್ಞಾನ ಆಧರಿತವಾಗಿ ನೂತನ ಆಟೋ ಪೈಲೆಟ್ ಕಾರುಗಳು ಆಗಮಿಸಲಿವೆ. ಈ ಕಾರುಗಳಲ್ಲಿ ಲೇಸರ್ ಸೆನ್ಸಾರುಗಳಿದ್ದು ವಾಹನದ ಆಸುಪಾಸಿನ ಚಟುವಟಿಕೆಗಳನ್ನು ಗಮನಿಸುತ್ತದಂತೆ. ಜೊತೆಗೆ ಬೇರೆ ಕಾರುಗಳು, ಬೈಕುಗಳು ಬ್ರೇಕ್ ಹಾಕುವುದನ್ನು ಕೂಡ ಸ್ಕ್ಯಾನ್ ಮಾಡುವುದರ ಮೂಲಕ ಈ ಸಿಸ್ಟಮ್ ತಿಳಿದುಕೊಳ್ಳುತ್ತದೆಯಂತೆ.
ಇದರಲ್ಲಿ ಕುಳಿತ ಚಾಲಕ ಬಯಸಿದ್ದಷ್ಟು ವೇಗಕ್ಕೆ ಆಕ್ಸಿಲರೇಟರ್ ಕೊಡಬಹುದು, ಕ್ರೂಸ್ ಕಂಟ್ರೋಲ್ ತಿರುಗಿಸಬಹುದು. ನಂತರ ಸ್ಟಿಯರಿಂಗ್ ಮತ್ತು ಪೆಡಲಿನಿಂದ ಕಾಲು ತೆಗೆದು ಪೇಪರ್ ಓದುತ್ತಿರಬಹುದು. ಕಾರು ತನ್ನಷ್ಟಕ್ಕೆ ಚಲಿಸುತ್ತದೆ.
"ಸಂಪೂರ್ಣ ಆಟೋಮ್ಯಾಟಿಕ್ ಮತ್ತು ಅಪಘಾತರಹಿತ ಕಾರು ಚಾಲನೆ ಸಾಧನೆಗೆ ನಾವೀಗ ಸಾಧಿಸಿರುವುದು ಪ್ರಮುಖ ಹೆಜ್ಜೆಯಾಗಲಿದೆ" ಎಂದು ಫೋಕ್ಸ್ ವ್ಯಾಗನ್ ಸಂಶೋಧನಾ ವಿಭಾಗದ ನಿರ್ದೇಶಕರಾದ ಪ್ರೊ. ಜಾರ್ಗೆನ್ ಲಿಯೊಹೋಲ್ಡ್ ಹೇಳಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








