ಆಟೋ ಎಕ್ಸ್‌ಪೋ 2020: ರೇಸ್ ಪೊಲೊ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್
ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದ ಮೋಟಾರ್‍ಸ್ಪೋರ್ಟ್ಸ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಭಾರತದಲ್ಲಿ ಮೋಟಾರ್ ರೇಸಿಂಗ್ ನಡೆಸಿದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಮೋಟಾರ್‍ಸ್ಪೋರ್ಟ್ ವಿಭಾಗವು ಭಾರತದಲ್ಲಿರುವ ಹಾಗೂ ಇತರ ದೇಶಗಳಲ್ಲಿರುವ ಯುವ ಮೋಟಾರ್‍ಸ್ಪೋರ್ಟ್ ಉತ್ಸಾಹಿಗಳಿಗೆ ಅಂತರ್‍ರಾಷ್ಟ್ರೀಯ ರೇಸಿಂಗ್‍ನಲ್ಲಿ ಭಾಗವಹಿಸುವ ಬಗ್ಗೆ ತರಬೇತಿಯನ್ನು ನೀಡುತ್ತದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಒನ್ ಮೇಕ್ ಸೀರಿಸ್ ಅನ್ನು ಆಯೋಜಿಸುತ್ತದೆ. ಇದರ ಪ್ರಕಾರ ಇದರಲ್ಲಿ ಭಾಗವಹಿಸುವವರು ಒಂದೇ ಕಂಪನಿಯ ಒಂದೇ ಕಾರು ಮಾದರಿಯನ್ನು ಬಳಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಈ ಸೀರಿಸ್‍ನಲ್ಲಿ ಭಾಗವಹಿಸುವವರಿಗಾಗಿ ರೇಸ್ ಪೊಲೊ ಸೀರಿಸ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ರೇಸ್ ಪೊಲೊ ಕಾರ್ ಅನ್ನು ಅನಾವರಣಗೊಳಿಸಿದೆ.

ವರದಿಗಳ ಪ್ರಕಾರ ಹೊಸ ರೇಸ್ ಪೊಲೊ ಕಾರುಗಳನ್ನು ಫೋಕ್ಸ್‌ವ್ಯಾಗನ್ ಆಮಿಯೊ ರೇಸ್ ಕಾರುಗಳ ಬದಲಿಗೆ ಉಪಯೋಗಿಸಲಾಗುವುದು. ಸದ್ಯಕ್ಕೆ ಒನ್ ಮೇಕ್ ಸೀರಿಸ್‍ನಲ್ಲಿ ಆಮಿಯೊ ರೇಸ್ ಕಾರುಗಳನ್ನು ಬಳಸಲಾಗುತ್ತಿದೆ.

ಹೊಸ ಫೋಕ್ಸ್‌ವ್ಯಾಗನ್ ರೇಸ್ ಪೊಲೊ ಕಾರಿನಲ್ಲಿ 1.8 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 210 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಆಮಿಯೋ ರೇಸ್ ಕಾರಿನಲ್ಲಿಯೂ ಅಳವಡಿಸಲಾಗಿತ್ತು.

ಆದರೆ ರೇಸ್ ಪೊಲೊ ಕಾರಿನಲ್ಲಿರುವ ಈ ಎಂಜಿನ್ ಆಮಿಯೊ ರೇಸ್ ಕಾರಿಗಿಂತ 5 ಬಿಹೆಚ್‍ಪಿ ಪವರ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಈ ಎಂಜಿನ್ ಪವರ್ ಅನ್ನು ಮುಂಭಾಗದ ವ್ಹೀಲ್‍ಗಳಿಗೆ ಕಳುಹಿಸುತ್ತದೆ.

ಈ ಕಾರಿನಲ್ಲಿ ಪುಶ್ ಬೂಸ್ಟ್ ಫೀಚರ್ ಅಳವಡಿಸಲಾಗಿದೆ. ಈ ಬೂಸ್ಟ್ ಮೋಡ್ ಅನ್ನು ಬಳಸಿ ಓವರ್‍ಟೇಕ್ ಮಾಡಿದರೆ, ಎಂಜಿನ್ 20 ಬಿಹೆಚ್‍ಪಿ ಅಧಿಕ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಈ ಕಾರಿನಲ್ಲಿರುವ ಪ್ರಮುಖವಾದ ಸಂಗತಿಯಾಗಿದೆ.


Click it and Unblock the Notifications








