ಬೆಂಗಳೂರು ಟ್ರಾಫಿಕ್‌ನಲ್ಲಿ ಶ್ರೀ ರಾಮಚಂದ್ರ ದರ್ಶನ
ಎಲ್ಲರೂ ಟ್ರಾಫಿಕ್ ಜಾಮ್ ಕುರಿತು ಅಸಹನೆಯಿಂದ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಬನ್ನೇರುಘಟ್ಟ ಸಮೀಪ 64 ವರ್ಷದ ರಾಮಚಂದ್ರರೆಂಬ ಹಿರಿಯರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಂಚಾರ ದಟ್ಟಣೆ ನಿಯಂತ್ರಿಸುವ ಕಾರ್ಯವನ್ನು ಕಳೆದ ಐದು ವರ್ಷಗಳಿಂದ ತಪಸ್ಸಿನಂತೆ ಮಾಡುತ್ತಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಅರಿಕೆರೆ ಬಡಾವಣೆಯ 5ನೇ ಮೇನ್ ಅಡ್ಡರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವ ಈ ಅಜ್ಜನನ್ನು ಹೆಚ್ಚಿನವರು ನೋಡಿರಬಹುದು. ಮುಂಜಾನೆ 6 ಗಂಟೆಯಿಂದ 10 ಗಂಟೆವರೆಗೆ, ಸಂಜೆ ಐದೂವರೆಯಿಂದ ಏಳುವರೆ ಗಂಟೆವರೆಗೆ ಪ್ರತಿದಿನ ತಪ್ಪದೇ ವಾಹನಗಳು ಮತ್ತು ಪಾದಚಾರಿಗಳು ಸರಾಗವಾಗಿ ಸಾಗುವಂತೆ ಮಾಡುವ ಈ ಅಜ್ಜ ಯಾರು ಎಂಬ ಕುತೂಹಲ ಹೆಚ್ಚಿನವರಿಗೆ ಇರಬಹುದು.
ಹೆಸರು ರಾಮಚಂದ್ರ ಬಿಎಂ. ವಯಸ್ಸು 64 ಕಳೆದಿದೆ. ಬಾಷ್ ಕಂಪನಿಯಲ್ಲಿ ಕಳೆದ 39 ವರ್ಷಗಳಿಂದ ಸಹಾಯಕ ಹಣಕಾಸು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿ ನಂತರ ಕಳೆದ ಐದು ವರ್ಷಗಳಿಂದ ಅರಿಕೆರೆ ಬಡಾವಣೆಯಲ್ಲಿ ಸಂಚಾರ ನಿಯಂತ್ರಣ ಕೆಲಸವನ್ನು ಮಾಡುತ್ತಿದ್ದಾರೆ.
ಬಹುಶಃ ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗ ಇವರಿಗೆ ಪಾರ್ಟ್ ಟೈಂ ಕೆಲಸ ನೀಡಿದೆ ಎಂದು ನೀವು ಭಾವಿಸಿದರೆ ಅದು ತಪ್ಪು. ಅವರು ಸ್ವಯಂಸ್ಪೂರ್ತಿಯಿಂದ, ಸ್ವಯಂ ಸೇವಕನಂತೆ ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಿಸುವುದು ಸುಲಭವಲ್ಲ. ಹೊಗೆ, ಧೂಳು, ಮಾಲಿನ್ಯಗಳ ನಡುವೆ ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ನಿಂತುಕೊಳ್ಳಬೇಕಾಗುತ್ತದೆ. ರಾಮಚಂದ್ರರೆಂಬ ಈ 64 ವರ್ಷದ ಹಿರಿಯರಿಗೂ ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆಯಂತೆ.
"ಇದರಿಂದ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಕಾಲು ನೋಯುತ್ತದೆ. ವಿಪರೀತ ಆಯಾಸವಾಗುತ್ತದೆ. ಆದರೆ ನಾನು ಇಲ್ಲಿರದಿದ್ದರೆ ರಸ್ತೆ ಬ್ಲಾಕ್ ಆಗೋದು ಹೆಚ್ಚಾಗುತ್ತದೆ. ಸರಿಯಾದ ಸಮಯಕ್ಕೆ ಜನರಿಗೆ ಮನೆಗೆ ಮತ್ತು ಆಫೀಸಿಗೆ ಮುಟ್ಟಲು ಕಷ್ಟವಾಗುತ್ತದೆಯಲ್ಲ. ಅದಕ್ಕೆ ಇಲ್ಲಿದ್ದೇನೆ" ಎಂದು ಹೇಳುತ್ತಾರೆ.
"ನಾನು ಸಾಯುವರೆಗೂ ಈ ಕೆಲಸ ಮಾಡುತ್ತೇನೆ. ನನ್ನ ನಂತರ ಯಾರಾದರೂ ಇಲ್ಲಿ ಈ ಕೆಲಸ ಮುಂದುವರೆಸಬಹುದು" ಎಂದು ಹೇಳಿದ 64ರ ಹರೆಯದ ರಾಮಚಂದ್ರ ಸೀಟಿ ಊದುತ್ತ ಟ್ರಾಫಿಕ್ ನಿಯಂತ್ರಿಸುವಲ್ಲಿ ಬ್ಯುಸಿಯಾದರು. ಉದ್ಯೋಗದಿಂದ ನಿವೃತ್ತಿಯಾಗಿ ಆರಾಮವಾಗಿರುವುದನ್ನು ಬಿಟ್ಟು, ಸಮಾಜ ಸೇವೆಗೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬದುಕು ಮೀಸಲಿಟ್ಟ ಅಜ್ಜನಿಗೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಒಂದು ಸಲ್ಯೂಟ್.


Click it and Unblock the Notifications









