ಬೈಕ್ ಸೌಂಡ್ ಚೇಂಜ್ ಮಾಡಿದ ಮಾಮನ ಮಗ

By * ಪ್ರವೀಣ ಚಂದ್ರ

Get The Best Sounding Bike In A Flash
ಅಪರೂಪಕ್ಕೆ ಮಡಿಕೇರಿಯಲ್ಲಿರುವ ಮಾಮನ ಮಗ ಮೋಹಿತ್ ಊರಿಗೆ ಬೈಕಿನಲ್ಲಿ ಬಂದಿದ್ದ. ನಾವು ಅವನನ್ನು ಚಿಕ್ಕದಿನಿಂದ ಕರೆಯೋದು ಮನು ಅಂತ. ಅಪ್ಪ ಕಾರನ್ನು ಸ್ಲೋ ಆಗಿ ಡ್ರೈವ್ ಮಾಡ್ತಾರೆ ಮತ್ತು ಸದಾ ಬಯ್ಯುತ್ತಾರೆ ಅನ್ನೋದು ಅವನ ಕಂಪ್ಲೇಂಟ್. ಅದೇ ಕಾರಣಕ್ಕೆ ಬೈಕ್ ಖರೀದಿಸಿದ್ದ. ಅವನಿಗೆ ಇನ್ನೂ ಇಪ್ಪತ್ತರ ಹರೆಯು. ಪಾದರಸಕ್ಕಿಂತ ಜಾಸ್ತಿ ಚುರುಕು.

ಅವನು ವಿರಾಜಪೇಟೆಯಿಂದ ಪುತ್ತೂರಿಗೆ ತಲುಪಿದ್ದು ಕೇವಲ ಎರಡೂವರೆ ಗಂಟೆಯಲ್ಲಿ. ಬಸ್ಸಿನಲ್ಲಿ ಬರೋದಾದ್ರೆ ಕಡಿಮೆಯೆಂದರೂ ಆರೇಳುಗಂಟೆ ಬೇಕು. ಅಣ್ಣಾ... ಮಡಿಕೇರಿಯಿಂದ ಇನ್ನೋವಾ ಕಾರನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದ್ದೆ.. ಆಗಲೇ ಇಲ್ಲ.. ಅಂತ ಅವ ತುಂಬಾ ದುಃಖದಿಂದ ದಿನಕ್ಕೆ ಹತ್ತು ಬಾರಿ ಹೇಳುತ್ತಿದ್ದ.

ನನಗೆ ಒಮ್ಮೆ ಅವನ ಬೈಕ್ ನೋಡಿ ಅಚ್ಚರಿಯಾಯಿತು. ಅದ್ಯಾವ ಕಂಪನಿಯ ಬೈಕ್ ಅಂತ ಕಂಪನಿ ಲೊಗೊ ಹುಡುಕಿದೆ. ಕೊನೆಗದು ಹೀರೋ ಹೋಂಡಾ ಸ್ಪ್ಲೆಂಡರ್ ಅಂತ ಗೊತ್ತಾಯಿತು. ಆದರೆ ಅದಕ್ಕೆ ಬಿಳಿ ಮತ್ತು ಕಪ್ಪು ಬಣ್ಣದ ಸ್ಟಿಕರ್ ಅಂಟಿಸಿ ಗುರುತು ಸಿಗದ ಹಾಗೇ ಸ್ಪೋರ್ಟ್ ಲುಕ್ ನೀಡಿದ್ದ.

ಈ ಹೊಸ ಬೈಕ್ ಖರೀದಿಸಿ ಮೂರು ತಿಂಗಳು ಭರ್ತಿಯಾಗಿರಲಿಲ್ಲ. ಹಿಂಭಾಗದ ಮಡ್ ಗಾಡ್ ಕಿತ್ಹಾಕಿ ಗಮ್ ಟೇಪ್ ಅಂಟಿಸಿದ್ದ. ಎರಡು ಉದ್ದದ ಹಾರ್ನ್ ಅಳವಡಿಸಿದ್ದ. ಅದರಲ್ಲಿ ಇಪ್ಪತ್ನಾಲ್ಕು ಬಗೆಯ ಸದ್ದು ಹೊರಡುತ್ತಿತ್ತು.

ಈ ಬೈಕಿನಲ್ಲಿ ಒಂದು ಸುತ್ಹಾಕಿ ಬಂದ ನನ್ನಣ್ಣ "ಥೂ ಇದ್ರಲ್ಲಿ ಬ್ರೇಕೇ ಇಲ್ಲ. ಹೇಗಪ್ಪ ಅಷ್ಟು ದೂರದಿಂದ ಬಂದೆ ಅಂತ ಪ್ರಶ್ನಿಸಿದ್ದ. ಹೀಗೆ ಈ ಬೈಕ್ ನನ್ನೂರಿನ ಎಲ್ಲರ ಕುತೂಹಲ ಕೆರಳಿಸಿತ್ತು. ಆ ಬೈಕಿನ ಸದ್ದೇ ಒಂದು ಅಚ್ಚರಿ. ಆಕಾಶದಲ್ಲಿ ಹಾರುವ ವಿಮಾನದ ಸದ್ದಿನಂತೆ ಒಂದು ಕಿಲೋಮೀಟರ್ ದೂರದಿಂದಲೇ ಅದರ ಸದ್ದು ಕೇಳುತ್ತಿತ್ತು.

ಹೀರೋ ಹೋಂಡಾ ಸ್ಪ್ಲೆಂಡರಿನ ಸ್ಮೂತ್ ಸದ್ದನ್ನು ಕಿತ್ಹಾಕಿ ಅದಕ್ಕೆ ಸ್ಪೋರ್ಟ್ ಬೈಕ್ ಸದ್ದನ್ನು ಹಾಕಿಸಿದ್ದ. ಸೌಂಡ್ ಚೇಂಜ್ ಮಾಡಿದ್ದು ಹೇಗೆ ಅಂತ ಕೇಳಿದಕ್ಕೆ "ಏರ್ ಫಿಲ್ಟರ್ ಬದಲಾಯಿಸಿದೆ" ಅಂದ. ಏರ್ ಫಿಲ್ಟರ್ ಬದಲಾಯಿಸಿದ ಕ್ಕೆ ಗ್ಯಾರೇಜಿನವ 300 ರುಪಾಯಿ ತೆಗೆದುಕೊಂಡನಂತೆ.

"ಇವ್ನಿಗೆ ಪೆಟ್ಟಿನ ಬಿಸಿ ಕಡಿಮೆಯಾಗಿದೆ ಅದಕ್ಕೆ ಹೀಗೆ ಮಾಡ್ತಾನೆ" ಅವನಪ್ಪ ಮರುದಿನ ನನ್ನಲ್ಲಿ ಹೇಳುತ್ತಿದ್ದರು. "ಯಾಕೆ ಮಾಮ ಹೀಗಂತ್ತೀರಾ.. ಈಗ ಬೈಕ್ ಸೂಪರ್ ಆಗಿದೆಯಲ್ವ? ಅಂತ ಪ್ರಶ್ನಿಸಿದೆ. "ನಿಂಗೊತ್ತ ಪ್ರವೀಣ್, ಈಗ ಈ ಬೈಕ್ ಮೈಲೇಜ್ 30 ಕಿ.ಮೀ. ಮಾತ್ರ" ಮಾಮ ಹತಾಶೆಯಿಂದ ಹೇಳಿದ್ರು.

ಅವರ ಪಕ್ಕದಲ್ಲಿ ಕುಳಿತಿದ್ದ ಮನು "ಇಲ್ಲಣ್ಣ... ಮೈಲೇಜ್ 40 ಕಿ.ಮೀ. ಸಿಗುತ್ತೆ" ಅಂದ

ಪ್ರತಿಲೀಟರ್ ಪೆಟ್ರೋಲಿಗೆ 65 ಕಿ.ಮೀ. ಮೈಲೇಜ್ ಸಿಗೋ ಬೈಕಿನ ಮೈಲೇಜನ್ನು 35ಕ್ಕೆ ಇಳಿಸಿ ಶೋಕಿ ಮಾಡುವ ಮಾಮನ ಮಗನ ನೋಡಿ ನನಗೆ ಅಚ್ಚರಿಯಾಗಲಿಲ್ಲ. ಯಾಕೆಂದರೆ ಇದು ಯುವ ಜಮಾನ.

(ನಿಮ್ಮ ವಾಹನ ಸವಾರಿ ಆಸಕ್ತಿಗೆ ಇನ್ನಷ್ಟು ಅಶ್ವಶಕ್ತಿ)

Most Read Articles

Kannada
English summary
A bike's sound is something that many people love. Manufacturers spend lot of time trying to get the best sound possible. But not many are satisfied with what they get. The modify their bike's parts and add accessories to ensure their bike has a different sound. You can change the bike's sound and look by changing the air filter, silencer and even the engine configuration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X