Just In
Don't Miss!
- Movies
Prakruti K Prasad:'ಬೆಟ್ಟದ ಹೂ'ನಲ್ಲಿ ಮಾಲಿನಿ ಧರಿಸಿದ್ದ ಸೀರೆಗಳು ಹರಾಜು.. ಬೇಕಿದ್ರೆ ಹೀಗೆ ಸಂಪರ್ಕಿಸಿ!
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಹನಗಳನ್ನು ಸುರಕ್ಷಿತವಾಗಿಡಲು ಈ ಸಿಂಪಲ್ ಟಿಪ್ಸ್ ಅನುಸರಿಸಿ..
ವರುಣಾರ್ಭಟದಿಂದ ಕಳೆದೆರಡು ದಿನಗಳಿಂದ ನಮ್ಮ ಬೆಂಗಳೂರು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜಲ ಪ್ರಳಯಕ್ಕೆ ಜನ ತತ್ತರಿಸಿ ಹೋಗಿದ್ದು, ಸಾವಿರಾರು ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ನೀರು ಪಾಲಾಗಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನಮ್ಮ ಬೆಂಗಳೂರಿನಲ್ಲಿ ಇನ್ನು ಮುಂದಿನ 4-5 ದಿನಗಳ ಅಂತರದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ಸರ್ಕಾರವು ಅಗತ್ಯ ಕಡೆಗಳಲ್ಲಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳ ಮೂಲಕ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದೆ.

ಮಾಹಾಮಳೆಯ ಅಬ್ಬರದಲ್ಲಿ ಸಾವಿರಾರು ಕುಟುಂಬಗಳು ಅತಂತ್ರದಲ್ಲಿದ್ದು, ಪ್ರತಿಷ್ಠಿತ ಬಡಾವಣೆಗಳು ಮಳೆ ನೀರಿನಿಂದ ಮುಳುಗಡೆಯಾಗಿವೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗತ್ತ ಸಾಗಿಸಲಾಗುತ್ತಿದ್ದು, ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.

ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಸಂದರ್ಭದಲ್ಲಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದು ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ವಾಹನಗಳಿಗೆ ಆಗಬಹುದಾದ ಹಾನಿಯನ್ನು ತಪ್ಪಿಸಲು ಅಥವಾ ಕಡಿಮೆಗೊಳಿಸಲು ಕೆಲವು ಸಲಹೆಗಳನ್ನು ನಾವಿಲ್ಲಿ ಹಂಚಿಕೊಂಡಿದ್ದೇವೆ.

ಸಹಜವಾಗಿಯೇ ಮಳೆಯ ಸಂದರ್ಭದಲ್ಲಿ ವಾಹನ ಚಾಲನೆ ಮಾಡುವುದು ದುಸ್ತರ ಎಂದರೆ ತಪ್ಪಾಗುವುದಿಲ್ಲ. ಹೀಗಿರುವಾಗ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಬೇಡ
ಹೆಚ್ಚಿನ ಪ್ರಮಾಣದ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತ ಸಂದರ್ಭದಲ್ಲಿ ನೀರಿನ ಆಳವನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾವು ನೀಡುವ ಮೊದಲನೇ ಸಲಹೆಯೆಂದರೆ ಹೆಚ್ಚಿನ ಮಳೆಯಿಂದಾಗಿ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ಅಂತಹ ರಸ್ತೆಗಳಲ್ಲಿ ಸಾಧ್ಯವಾದಷ್ಟು ವಾಹನ ಸಂಚಾರವನ್ನು ತಪ್ಪಿಸಿರಿ.

ಆಳವನ್ನು ಅರಿಯಿರಿ
ಪ್ರವಾಹದ ಸಂದರ್ಭದಲ್ಲಿ ಭಯ, ಆತಂಕಕ್ಕಿಂತಲೂ ಹೆಚ್ಚು ಬುದ್ಧಿವಂತಿಕೆಯಿಂದ ಪ್ರಯಾಣಿಸಬೇಕು. ಪ್ರವಾಹ ಪೀಡಿತ ರಸ್ತೆಗಳಲ್ಲಿ ಸಾಗಲೇಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಆಳವನ್ನು ಅರಿಯಲು ನಿಮ್ಮ ಮುಂದೆ ಸಂಚರಿಸುವ ವಾಹನಗಳನ್ನು ಅಥವಾ ಪಾದಚಾರಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮುಂದೆ ಸಾಗಿರಿ.

ಇದರಿಂದ ರಸ್ತೆಯಲ್ಲಿರುವ ಸಣ್ಣ, ಪುಟ್ಟ ಗುಂಡಿಗಳಲ್ಲಿ ವಾಹನಗಳು ಸಿಲುಕುವುದನ್ನು ತಪ್ಪಿಸಬಹುದಾಗಿದೆ. ಹಾಗೊಂದು ವೇಳೆ ನೀರಿನ ಪ್ರಮಾಣವು ಚಕ್ರದ ಮಟ್ಟಕ್ಕಿಂತಲೂ ಹೆಚ್ಚಾಗಿದ್ದಲ್ಲಿ ಅಂತಹ ರಸ್ತೆಗಳಲ್ಲಿ ಮುಂದಕ್ಕೆ ಚಲಿಸುವ ಪ್ರಯತ್ನಕ್ಕೆ ಹೋಗದಿರಿ.

ಮೊದಲ ನಮ್ಮ ರಕ್ಷಣೆ ಮುಖ್ಯ
ಪ್ರವಾಹದ ನೀರಿನಲ್ಲಿ ವಾಹನ ಸಿಲುಕಿಕೊಂಡಾಗ ಪರಿಸ್ಥಿತಿ ಕೈ ಮೀರುವುದಕ್ಕಿಂತಲೂ ಮುನ್ನ ಕಾರನ್ನು ರಿವರ್ಸ್ ತೆಗೆದು ಪರ್ಯಾಯ ಮಾರ್ಗ ಹಿಡಿಯಲು ಪ್ರಯತ್ನಿಸಿ. ಇಲ್ಲವಾದರೆ ನಿಮ್ಮ ವಾಹನವನ್ನು ಅಲ್ಲಿಯೇ ಕೈಬಿಟ್ಟು ನೀವು ಮೊದಲು ಸುರಕ್ಷಿತ ಪ್ರದೇಶದತ್ತ ತೆರಳಿ. ಯಾಕೆಂದರೆ ನಿಮ್ಮ ವಾಹನಕ್ಕಿಂತ ನಿಮ್ಮ ಜೀವ ಮುಖ್ಯ. ಜೀವ ಗಟ್ಟಿಯಿದ್ದರೆ ಅಂತಹ ಮತ್ತೊಂದು ವಾಹನ ಖರೀದಿಸಬಹುದು.

ಫಸ್ಟ್ ಗೇರ್‌ನಲ್ಲಿ ಚಲಿಸಿ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚಲಿಸುವಾಗ ಯಾವಾಗಲೂ ಮೊದಲ ಗೇರ್ ನಲ್ಲೇ ಪ್ರಯಾಣಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇದು ನೀರಿನಲ್ಲಿ ವಾಹನದ ಸ್ಥಿರತೆ ಕಾಪಾಡುವುದರೊಂದಿಗೆ ನಿಧಾನವಾಗಿ ಮುಂದಕ್ಕೆ ಚಲಿಸಲು ನೆರವಾಗುತ್ತದೆ.

ಸ್ಪೀಡ್ ಡ್ರೈವ್ ಬೇಡ
ಅಪಾಯ ಎನ್ನಿಸುವ ನೀರಿನ ಪ್ರಮಾಣವಿದ್ದಾಗ ಯಾವಾಗಲೂ ಮೊದಲ ಗೇರ್ ನಲ್ಲಿ ಚಲಿಸುವುದಿಂದ ಸ್ಪೀಡಿಂಗ್ ಅಪಾಯವನ್ನು ತಪ್ಪಿಸಬಹುದಾಗಿದೆ. ಒಂದು ವೇಳೆ ಹೆಚ್ಚಿನ ನೀರಿನ ಮಟ್ಟದಲ್ಲಿ ವೇಗವಾಗಿ ಚಲಿಸಲು ಮುಂದಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು.

ಹೈಡ್ರೋಸ್ಟಾಟಿಕ್ ಲಾಕ್
ತಜ್ಞರ ಪ್ರಕಾರ ನೀರಿನ ಮಟ್ಟ ಜಾಸ್ತಿಯಿದ್ದ ಸಂದರ್ಭದಲ್ಲಿ ಕಾರು ಚಾಲನೆ ಮುಂದಾದಾಗ ಸಡನ್ ಆಗಿ ನೀರಲ್ಲಿ ಆಫ್ ಆದ್ದಲ್ಲಿ ಆಗ ಕಾರನ್ನು ಮತ್ತೆ ಸ್ಟ್ಯಾರ್ಟ್ ಮಾಡುವ ಪ್ರಯತ್ನಕ್ಕೆ ಹೋಗಲೇಬಾರದು.

ಇದರಿಂದ ಹೈಡ್ರೋಸ್ಟಾಟಿಕ್ ಲಾಕ್ ತೊಂದರೆ ಎದುರಾಗುವ ಭೀತಿಯಿರುತ್ತದೆ. ಒಂದು ವೇಳೆ ಅದು ಕೊಳಚೆ ಎಂಜಿನ್ ಮತ್ತು ಇಂಧನ ಟ್ಯಾಂಕ್‌ನಲ್ಲಿ ಸೇರಿದರೆ ಅದರ ರಿಪೇರಿಗೆ ದುಬಾರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಹೀಗಾಗಿ ಮಳೆ ನೀರಿನಲ್ಲಿ ವಾಹನಗಳು ಸಿಲುಕಿದಾಗ ಆನ್ ಮಾಡುವ ಬದಲು ತಳ್ಳುವ ಮೂಲಕ ನೀರಿನಿಂದ ಹೊರಕ್ಕೆ ತಳ್ಳುವ ಪ್ರಯತ್ನ ಮಾಡಬಹುದಾಗಿದೆ.

ರಸ್ತೆಯಲ್ಲಿ ಇಳಿಜಾರಿನಡಿಗೆ ವಾಹನ ಚಾಲನೆ ಬೇಡ
ರಸ್ತೆಯಲ್ಲಿ ನೀರುವ ತುಂಬಿರುವ ಸಂದರ್ಭದಲ್ಲಿ ಇಳಿಜಾರಿನತ್ತ ಸಂಚರಿಸದೆ ಎತ್ತರ ಇರುವ ಕಡೆಗೆ ವಾಹನವನ್ನು ನಿಧಾನವಾಗಿ ತೆಗೆದುಕೊಂಡು ಹೋಗಿ. ಇದರಿಂದ ನೀರಿನಲ್ಲಿ ಮುಚ್ಚಿಕೊಂಡಿರುವ ಹೊಂಡಗಳಲ್ಲಿ ವಾಹನಗಳಿಗೆ ಆಗಬಹುದಾದ ಹಾನಿಯನ್ನು ತಪ್ಪಿಸಬಹುದು.

ಪ್ರವಾಹದ ಸಂದರ್ಭದಲ್ಲಿ ಕಾರು ಆಫ್ ಮಾಡಿ
ಪ್ರಯಾಣ ಸಂದರ್ಭದಲ್ಲಿ ಜೋರಾದ ಮಳೆಯಿಂದ ರಸ್ತೆಗಳಲ್ಲಿ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ಕಾರಿನ ಎಂಜಿನ್ ಗೆ ನೀರು ಪ್ರವೇಶಿಸುವ ಆತಂಕ ಇದ್ದಲ್ಲಿ ಕಾರನ್ನು ಆಫ್ ಮಾಡಿ. ಇದು ಕಾರಿಗೆ ಆಗಬಹುದಾದ ಹೆಚ್ಚುವರಿ ಹಾನಿಯನ್ನು ತಪ್ಪಿಸಲಿದೆ.

ಪಾರ್ಕ್ ಮಾಡಿದ ಸಂದರ್ಭದಲ್ಲಿ ಎದುರಾಗುವ ಪ್ರವಾಹದ ಸಂದರ್ಭಗಳಲ್ಲಿ ಪಾಲಿಸಬೇಕಾದ ಸಲಹೆಗಳು
ಎತ್ತರದ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿ
ರೋಗ ಬಂದ ನಂತರ ಚಿಕಿತ್ಸೆಗಾಗಿ ಪರದಾಡುವುದಕ್ಕಿಂತ ಅದನ್ನು ತಡೆಯುವುದು ಉತ್ತಮ ಎನ್ನಬಹುದು. ಇದರಿಂದ ಪ್ರವಾಹ ಮುನ್ಸೂಚಣೆ ಇದ್ದಲ್ಲಿ ನಿಮ್ಮ ಅಮೂಲ್ಯವಾದ ವಾಹನಗಳನ್ನು ಅವಕಾಶವಿದ್ದರೆ ಎತ್ತರದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವುದು ಖಾತ್ರಿಪಡಿಸಿಕೊಳ್ಳಿ.

ಅದರಲ್ಲೂ ನೀವು ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಅನ್ನು ಹೊಂದಿದ್ದರೆ ಅವುಗಳನ್ನು ವಿಶೇಷವಾಗಿ ಪ್ರವಾಹದ ನೀರಿನಿಂದ ರಕ್ಷಿಸಲು ವಿಶೇಷವಾಗಿ ಕಾಳಜಿ ಮಾಡಬೇಕಾಗುತ್ತದೆ. ಹೀಗಾಗಿ ನಿಮ್ಮ ವಾಹನಗಳನ್ನು ಎತ್ತರದ ಮೈದಾನದಲ್ಲಿ ಪಾರ್ಕ್ ಮಾಡುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಯಾಂತ್ರಿಕ ಭಾಗಗಳಿಗೆ ಆಗುವ ಹಾನಿಯಾಗುವ ಹೆಚ್ಚಿನ ಹಾನಿಯನ್ನು ಕಡಿಮೆ ಮಾಡಬಹುದು.

ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿರಿ
ಪ್ರವಾಹ ನೀರಿನಲ್ಲಿ ನಿಮ್ಮ ಕಾರು ಸಿಲುಕಿದ್ದರೆ ಕಾರಿನ ಎಲ್ಲಾ ನಾಲ್ಕು ಕಿಟಕಿಗಳನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸಣ್ಣದೊಂದು ಅಂತರವೂ ಇರಬಾರದು. ಏಕೆಂದರೆ ಇದು ಕ್ಯಾಬಿನ್‌ಗೆ ನೀರು ನುಗ್ಗಲು ಕಾರಣವಾಗುತ್ತದೆ ಮತ್ತು ಅದು ನಿಮ್ಮ ಕಾರಿಗೆ ಹೆಚ್ಚಿನ ಹಾನಿಉಂಟುಮಾಡಬಹುದು.

ಬ್ಯಾಟರಿ ಸಂಪರ್ಕ ಕಡಿತಗೊಳಿಸಿ
ಒಂದು ವೇಳೆ ನಿಮ್ಮ ವಾಹನವು ಹೆಚ್ಚಿನ ಮಟ್ಟದ ಪ್ರವಾಹ ಅಥವಾ ದಟ್ಟವಾದ ಜಲಾವೃತದಲ್ಲಿ ಸಿಲುಕಿಕೊಂಡರೆ ನೀವು ಕೂಡಲೇ ಕಾರಿನ ಬ್ಯಾಟರಿಗಳನ್ನು ಮುಂಚಿತವಾಗಿ ಅನ್‌ಪ್ಲಗ್ ಮಾಡಲು ಮರೆಯಬೇಡಿ. ನಿಮ್ಮ ಕಾರು ನೀರಿನಲ್ಲೂ ಮುಳುಗಿದರೆ ಅದರ ಎಲ್ಲಾ ಎಲೆಕ್ಟ್ರಿಕಲ್ ಉಪಕರಣಗಳನ್ನು ಸಾಧ್ಯವಿದಷ್ಟು ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಪ್ರವಾಹದ ನಂತರ ಕಾರಿನ ರಕ್ಷಣೆ ಹೇಗೆ?
ಕಾರನ್ನು ತಕ್ಷಣಕ್ಕೆ ಪ್ರಾರಂಭಿಸಬೇಡಿ
ಪ್ರವಾಹದಲ್ಲಿ ನಿಮ್ಮ ಕಾರನ್ನು ಹೊರತೆಗೆದ ನಂತರ ತಕ್ಷಣವೇ ಅದನ್ನು ಸ್ಟಾರ್ಟ್ ಮಾಡುವ ತಪ್ಪನ್ನು ಮಾಡಬೇಡಿ. ಕಾರಿನ ಎಲ್ಲಾ ಯಾಂತ್ರಿಕ ಭಾಗಗಳ ಆಂತರಿಕ ಭಾಗಗಳು ಸಂಪೂರ್ಣವಾಗಿ ಒಣಗಿವೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಬ್ರೇಕ್‌ಗಳನ್ನು ಒಣಗಲು ಬಿಡಿ
ಕೊಳಚೆ ನೀರಿನಲ್ಲಿ ಮುಳುಗಿರುವುದರಿಂದ ನಿಮ್ಮ ಕಾರಿನ ಬ್ರೇಕ್‌ಗಳಲ್ಲಿ ಮಣ್ಣು ಮತ್ತು ಇತರೆ ಕೊಳಚೆ ವಸ್ತುಗಳು ಸಿಲುಕಿಕೊಂಡಿರುತ್ತದೆ. ಅವು ಸರಿಯಾಗಿ ಕಾರ್ಯನಿರ್ವಹಿಸಲು ಬ್ರೇಕಿಂಗ್ ವಿಭಾಗವನ್ನು ಶುಚಿಗೊಳಿಸಿ ನಂತರ ಸಂಪೂರ್ಣವಾಗಿ ಒಣಗಬೇಕಾಗುತ್ತದೆ.

ಒಳಾಂಗಣವನ್ನು ಒಣಗಿಸಿ
ಪ್ರವಾಹದ ನೀರು ನಿಮ್ಮ ಕಾರಿನ ಒಳಗೂ ನುಗ್ಗಿದ್ದರೆ ಕ್ಯಾಬಿನ್ ಅನ್ನು ಸರಿಯಾಗಿ ಒಣಗಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಕಾರಿನ ಎಲ್ಲಾ ನಾಲ್ಕು ಬಾಗಿಲುಗಳನ್ನು ಮತ್ತು ಬೂಟ್ ಮುಚ್ಚಳವನ್ನು ಮತ್ತು ಬಾನೆಟ್ ಅನ್ನು ತೆರೆದು ಸೂರ್ಯನ ಬೆಳಕಿನಲ್ಲಿ ಒಣಗಿಸಿ.

ಆಸನಗಳನ್ನು ಒಣಗಿಸಲು ನೀವು ಪೋರ್ಟಬಲ್ ಫ್ಯಾನ್‌ಗಳು ಮತ್ತು ಹೀಟರ್‌ಗಳನ್ನು ಸಹ ಬಳಸಬಹುದಾಗಿದ್ದು, ನಿಮ್ಮ ಕಾರಿನ ಒಳಭಾಗದಲ್ಲಿ ಕೊಚ್ಚೆ ತುಂಬಿದ್ದರೆ ಆರ್ದ್ರ/ಒಣ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸಿ ಶುಚಿಗೊಳಿಸಬಹುದು.

ದ್ರವ ಅಂಶಗಳನ್ನು ಬದಲಾಯಿಸುವುದು
ಕಾರಿನಲ್ಲಿ ಮಳೆ ನೀರು ನುಗ್ಗಿದ್ದರೆ ದ್ರವಗಳೊಂದಿಗೆ ನೀರು ಕೂಡಾ ಬೆರೆತಿರುವ ಸಾಧ್ಯತೆಯಿದೆ. ಹೀಗಾಗಿ ಎಂಜಿನ್ ಆಯಿಲ್, ಬ್ರೇಕ್ ಆಯಿಲ್, ಟ್ರಾನ್ಸ್‌ಮಿಷನ್ ಫ್ಲೂಯಿಡ್ ಅನ್ನು ಕಾರು ಚಾಲನೆ ಆರಂಭಿಸುವ ಪ್ರಾರಂಭಿಸುವ ಮೊದಲು ಹೊಸ ದ್ರವಗಳೊಂದಿಗೆ ಬದಲಾಯಿಸುವುದು ಉತ್ತಮ.

ಏರ್ ಫಿಲ್ಟರ್ ಅನ್ನು ಬದಲಾಯಿಸಿ
ಪ್ರವಾಹದ ವೇಳೆ ನಿಮ್ಮ ಕಾರಿನ ಏರ್ ಫಿಲ್ಟರ್ ಕೂಡಾ ಕೊಳಚೆ ನೀರಿನಲ್ಲಿ ನೆನೆದಿರುತ್ತದೆ. ಹೀಗಾಗಿ ಅವಶ್ಯವಾಗಿ ಅದನ್ನು ಬದಲಿ ಮಾಡಬೇಕಾಗುತ್ತದೆ. ವಿಫಲವಾದರೆ ಅದು ತೇವಾಂಶವನ್ನು ದಹನ ಕೊಠಡಿಯೊಳಗೆ ಬಿಡುವ ಮೂಲಕ ಸಂಪೂರ್ಣ ದಹನ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಹಳೆಯ ಫಿಲ್ಟರ್ ಅನ್ನು ಬದಲಾಯಿಸುವುದು ಮತ್ತು ಹೊಸದನ್ನು ಬಳಸುವುದು ಅವಶ್ಯಕವಾಗಿರುತ್ತದೆ.