ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?
ಭಾರತೀಯ ಆಟೋ ಉದ್ಯಮದಲ್ಲಿ ನ್ಯಾನೋ ಕಾರು ಮಾಡಿದ ಸದ್ದು ಅಷ್ಟಿಷ್ಟಲ್ಲ. ಯಾಕೆಂದ್ರೆ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿ ಕನಸನ್ನು ನನಸು ಮಾಡಿದ್ದ ನ್ಯಾನೋ ಇಂದಿಗೂ ಕೂಡಾ ಹಲವರ ಪಾಲಿಗೆ ಅಚ್ಚುಮೆಚ್ಚು. ಆದ್ರೆ ನ್ಯಾನೋ ಬರುವುದಕ್ಕೂ ಮುನ್ನ ಮೀರಾ ಎನ್ನುವ ಕಾರೊಂದು ಬಿಡುಗಡೆಯ ಸನಿಹಕ್ಕೆ ಬಂದು ಮರೆಯಾದ ಕಥೆ ಬಹುತೇಕರಿಗೆ ಗೊತ್ತಿಲ್ಲದ ವಿಚಾರ ಎನ್ನಬಹುದು.

ಹೌದು, ಒಂದು ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದ ನ್ಯಾನೋ ಮಾದರಿಯಲ್ಲೇ ಕೇವಲ 12 ಸಾವಿರಕ್ಕೆ ಅಗ್ಗದ ಕಾರೊಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗಿ ತದನಂತರ ಆದ ಬೆಳವಣಿಯಿಂದಾಗಿ ಮಾರುಕಟ್ಟೆಯಿಂದಲೇ ನಿರ್ಗಮನಗೊಂಡ ಮೀರಾ ಕಾರಿನ ನಿರ್ಮಾಣದ ಹಿಂದಿನ ರೋಚಕ ಸ್ಟೋರಿಯನ್ನು ನೀವು ಓದಲೇಬೇಕು.

ಭಾರತದಲ್ಲಿ ಅಗ್ಗದ ಬೆಲೆ ಕಾರುಗಳನ್ನು ಉತ್ಪಾದನೆ ಮಾಡುವ ಹಲವು ಪ್ರಯತ್ನ ನಡೆದಿದ್ದು, ಕೇವಲ ಲಕ್ಷಕ್ಕೆ ಖರೀದಿಗೆ ಲಭ್ಯವಾದ ನ್ಯಾನೋ ಕಾರು ಉತ್ಪಾದನೆಗೂ ಮುನ್ನ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ಅಗ್ಗದ ಬೆಲೆಯ ಕಾರು ಉತ್ಪಾದನೆಗೆ ಕೈಹಾಕಿದ್ದವು.

ಪ್ರತಿಯೊಬ್ಬರು ಕಾರು ಖರೀದಿ ಮಾಡಬೇಕೆಂಬ ಪರಿಕಲ್ಪನೆಯೊಂದಿಗೆ ಹೊರತರಲಾಗಿದ್ದ ನ್ಯಾನೋ ಕಾರು ಮಾರುಕಟ್ಟೆಗೆ ಬರುವುದಕ್ಕೂ ಮುನ್ನ ಮೀರಾ ಎನ್ನುವ ಕಾರು ಭಾರೀ ಕುತೂಹಲ ಹುಟ್ಟುಹಾಕಿತ್ತಲ್ಲದೇ ಬಂದಷ್ಟೇ ವೇಗದಲ್ಲಿ ಹೊಸ ಕಾರಿನ ಪರಿಕಲ್ಪನೆ ಹಳ್ಳಹಿಡಿದ್ದು ಮಾತ್ರ ಬೇಸರದ ಸಂಗತಿ.

ಅದು 1975 ಅವಧಿ. ಆಗೆಲ್ಲಾ ವಿದೇಶಿ ಮಾರುಕಟ್ಟೆಗಳ ಮೇಲೆ ಅವಲಂಬನೆಯಾಗಿದ್ದ ಭಾರತೀಯ ಕಾರು ಖರೀದಿದಾರರಿಗೆ ದೇಶದಲ್ಲಿ ಆದ ಆಟೋ ಕ್ರಾಂತಿ ಅಚ್ಚರಿ ತರಿಸಿತ್ತು. ಕೇವಲ 12 ಸಾವಿರಕ್ಕೆ ಕಾರು ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದ ಮುಂಬೈ ಮೂಲದ ಉದ್ಯಮಿಯೊಬ್ಬರ ಹೇಳಿಕೆ ಹೊಸ ಸಂಚಲನವನ್ನೇ ಸೃಷ್ಠಿಸಿತ್ತು.

ನ್ಯಾನೋ ಕಾರು 1 ಲಕ್ಷಕ್ಕೆ ಮಾರಾಟ ಮಾಡುವುದಾಗಿ ಟಾಟಾ ಘೋಷಣೆ ಮಾಡಿದಾಗ ಕಾರು ಖರೀದಿದಾರರಲ್ಲಿ ಯಾವ ಮಟ್ಟಿಗೆ ಕುತೂಹಲ ಹುಟ್ಟುಹಾಕಿತ್ತೊ ಅದೇ ರೀತಿಯಾಗಿ ಮೀರಾ ಕಾರನ್ನು ಕೇವಲ 12 ಸಾವಿರಕ್ಕೆ ಸಿಗಲಿದೆ ಎನ್ನುವ ಸುದ್ದಿ ಕೂಡಾ 1975ರಲ್ಲಿ ಕಾಡ್ಗಿಚ್ಚಿನಂತೆ ಹರಡಿಕೊಂಡಿದ್ದು ಮಾತ್ರ ಸುಳ್ಳಲ್ಲ.

ಮುಂಬೈ ಮೂಲದ ಉದ್ಯಮಿ ಶಂಕರ್ ರಾವ್ ಕುಲಕರ್ಣಿ ಎನ್ನುವವರು ತಮ್ಮ ಸತತ ಪ್ರಯತ್ನ ಫಲವಾಗಿ ಮೀರಾ ಕಾರನ್ನು ಸಿದ್ದಗೊಳಿಸಿದ್ದಲ್ಲದೇ 1949ರಲ್ಲೇ ಹೊಸ ಕಾರ್ ಬ್ರಾಂಡ್ ಅನ್ನು ಜಾರಿಗೆ ತಂದಿದ್ದರು. ಅದುವರೆಗೂ ಕೇವಲ ತಮ್ಮ ಸ್ವಂತಕ್ಕೆ ಮಾತ್ರ ಬಳಕೆ ಮಾಡುತ್ತಿದ್ದ ಮೀರಾ ಕಾರುಗಳನ್ನು ದೇಶವ್ಯಾಪಿ ಬಿಡುಗಡೆ ಮಾಡಬೇಕೆಂಬ ಕನಸು ಮಾತ್ರ ಹಾಗೆಯೇ ಉಳಿಯಿತು.

1949ರಿಂದಲೇ ಸಣ್ಣ ಕಾರು ನಿರ್ಮಾಣಕ್ಕೆ ಸತತ ಪ್ರಯತ್ನ ನಡೆಸುತ್ತಲೇ ಬಂದಿದ್ದ ಶಂಕರ್ ರಾವ್ ಅವರು ತಮ್ಮ ಸ್ವಂತಕ್ಕೆ ಮಾತ್ರವಲ್ಲದೇ ಐದು ವಿವಿಧ ಬಗೆಯ ಸಣ್ಣಕಾರು ಮಾದರಿಗಳನ್ನು ಸಿದ್ದಗೊಳಿಸಿದ್ದರು. ಆದಾದ ಬಳಿಕ 1970ರ ಸುಮಾರಿಗೆ ಮೀರಾ ಕಾರನ್ನುಅಭಿವೃದ್ಧಿಗೊಳಿಸಿದ್ದರು.

ಆರ್ಟಿಒದಿಂದಲೂ ಹೊಸ ಕಾರುಗಳಿಗೆ ನೋಂದಣಿ ಪಡೆದಿದ್ದ ಶಂಕರ್ ರಾವ್ ಅವರು ಒಟ್ಟು 11 ಸದಸ್ಯರ ತಂಡದೊಂದಿಗೆ ಹೊಸ ಕಾರು ಉತ್ಪಾದನೆ ಮೇಲೆ ನಿರಂತರ ಪ್ರಯತ್ನ ಮಾಡಿದ್ದಲ್ಲದೇ ಅತಿ ಕಡಿಮೆ ಬೆಲೆಯಲ್ಲಿ ಕಾರು ಅಭಿವೃದ್ಧಿಗೊಳಿಸುವ ಬಗ್ಗೆ ತಹರೇವಾರಿ ಪ್ರಯತ್ನಗಳನ್ನು ಮಾಡಿದ್ದರು.

ಅಂತಿಮವಾಗಿ 1972ರಲ್ಲಿ 12 ಸಾವಿರಕ್ಕೆ ಮೀರಾ ಕಾರನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದ ಶಂಕರ್ ರಾವ್ ಮತ್ತು ಅವರ ತಂಡವು ಹೊಸ ಕಾರು ಮಾರಾಟದ ಅವಕಾಶಕ್ಕಾಗಿ ಭಾರತ ಸರ್ಕಾರದ ಅನುಮತಿಗಾಗಿ ಪತ್ರ ಬರೆದಿತ್ತು. ಆದ್ರೆ 35 ವರ್ಷಗಳ ಸತತ ಪರಿಶ್ರಮಕ್ಕೆ ಅಂದಿನ ಕೇಂದ್ರ ಸಾರಿಗೆ ಇಲಾಖೆಯು ಎಳ್ಳುನೀರು ಬಿಟ್ಟಿತು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

1974ರ ಹೊತ್ತಿಗೆ ಭಾರತಕ್ಕೆ ಲಗ್ಗೆಯಿಡಲು ಸಜ್ಜಾಗಿದ್ದ ಸುಜುಕಿ ಸಂಸ್ಥೆಯು ಮಾರುತಿ ಜೊತೆ ಪಾಲುದಾರಿಕೆಯೊಂದಿಗೆ ಹೊಸ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿತ್ತು. ಹೀಗಾಗಿ ವಿದೇಶಿ ಸಂಸ್ಥೆಯ ಲಾಭಿ ಮುಂದೆ ಮೀರಾ ಆಟ ನಡೆಯಲೇ ಇಲ್ಲ.

ಅಗ್ಗದ ಬೆಲೆಯ ಮೀರಾ ಬಿಡುಗಡೆಯಾದಲ್ಲಿ ತಮ್ಮ ಸಂಸ್ಥೆಯ ಕಾರುಗಳಿಗೆ ಹೊಡೆತ ಬಿಳುವುದನ್ನು ಅರಿತ ಸುಜುಕಿ ಸಂಸ್ಥೆಯು ಮೀರಾ ಬಿಡುಗಡೆಯಾಗದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದರ ಪರಿಣಾಮವೇ ಮೀರಾ ಕಾರು ಬಿಡುಗಡೆಯ ಮನವಿಯನ್ನು ತಳ್ಳಿಹಾಕಲಾಯ್ತು.
MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್ಗೆ ಬಿತ್ತು ರೂ. 50 ಸಾವಿರ ದಂಡ..!

ಅಂದಿನ ಕಾಲದಲ್ಲೇ ಬರೋಬ್ಬರಿ 50 ಲಕ್ಷ ಖರ್ಚು ಮಾಡಿ 5 ವಿವಿಧ ನಮೂನೆಯ ಕಾರುಗಳನ್ನು ನಿರ್ಮಾಣ ಮಾಡಿದ್ದ ಶಂಕರ್ ರಾವ್ ಅವರು ಮೀರಾ ಕಾರನ್ನು ಕೇವಲ 12 ಸಾವಿರಕ್ಕೆ ನಿರ್ಮಾಣ ಮಾಡಿ ಮಾರಾಟ ಸಾಧ್ಯತೆ ಬಗ್ಗೆ ಅವರು ಹಲವಾರು ಅಧ್ಯಯನಗಳನ್ನು ಮಾಡಿದ್ದರು.

ಸದ್ಯ ಮಾರುಕಟ್ಟೆಯಲ್ಲಿರುವ ನ್ಯಾನೋ ಕಾರಿನಂತೆಯೇ ಮೀರಾ ಕಾರು ಕೂಡಾ 4 ಆಸನೊಂದಿಗೆ ವಿ 2 (ಪೆಟ್ರೋಲ್ ಮತ್ತು ಡಿಸೇಲ್ ಆಯ್ಕೆಗೆ ಅನುಗುಣವಾಗಿ) 4 ಸ್ಟೋಕ್ ಎಂಜಿನ್ ಹೊಂದಿದ್ದಲ್ಲದೇ 14-ಬಿಎಚ್ಪಿ ಉತ್ಪಾದನಾ ಗುಣಹೊಂದಿತ್ತು.
MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಜೊತೆಗೆ 80 ಕಿ.ಮಿ ಟಾಪ್ ಸ್ಪೀಡ್ ಹೊಂದಿದ್ದ ಮೀರಾ ಕಾರು ಪ್ರತಿ ಲೀಟರ್ ಪೆಟ್ರೋಲ್ 19ಕಿ.ಮಿ ಮತ್ತು ಡಿಸೇಲ್ಗೆ 20 ಕಿ.ಮಿ ಮೈಲೇಜ್ ಹೊಂದಿದಲ್ಲದೇ 4-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ 12 ವೋಲ್ಟ್ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿತ್ತು.

ಇಷ್ಟೇಲ್ಲಾ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿದ್ದರೂ ಸಹ ಕಾರು ಮಾರಾಟಕ್ಕೆ ಪರವಾನಿಗೆ ಸಿಗಲಿಲ್ಲ. ಇದೇ ಪರಿಕಲ್ಪನೆ ಮೇಲೆ ಹೊಸ ಯೋಜನೆ ಜಾರಿಗೊಳಿಸಿದ್ದ ರತನ್ ಟಾಟಾ ಅವರು ಮೀರಾ ಪರಿಕಲ್ಪನೆ ಆಧಾರದ ಮೇಲೆ ನ್ಯಾನೋ ಕಾರುನ್ನು ಹೊರತಂದಿದೆ ಎನ್ನುವುದು ವಾಸ್ತವ.
Source: Blogspot


Click it and Unblock the Notifications








