ಎಂದಿಗೂ ಮರೆಯಲಾಗದ ದೇಶದ 9 ಜನಪ್ರಿಯ ಕಾರುಗಳು

Written By:

ಕೆಲವರು ಭಾವನಾತ್ಮಕವಾಗಿ ನಮ್ಮ ಹೃದಯಕ್ಕೆ ತುಂಬಾನೇ ಹತ್ತಿರವಾಗಿರುತ್ತಾರೆ. ಅಂತವರನ್ನು ಮರೆಯುವುದು ಬಲು ಕಷ್ಟ. ಅಷ್ಟೇ ಅಲ್ಲದೆ ಭಾವನೆಗಳ ಲಹರಿಯಲ್ಲಿ ಕಷ್ಟಸುಖಗಳೆನ್ನೆಲ್ಲ ಹಂಚಿಕೊಳ್ಳಲು ಬಯಸುತ್ತೇವೆ. ಇಂತಹ ಪಟ್ಟಿಯಲ್ಲಿ ದೇಶದ ಜೀವಾಳವಾಗಿರುವ ಒಂಬತ್ತು ಐಕಾನಿಕ್ ಕಾರುಗಳ ಬಗ್ಗೆ ಇಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಒಂದು ಅರ್ಥದಲ್ಲಿ ದೇಶದ ವಾಹನ ಜಗತ್ತಿನ ಕ್ರಾಂತಿಕಾರಿ ಬದಲಾವಣೆಗೆ ಇಂತಹ ಕಾರುಗಳ ಪಾತ್ರ ಮಹತ್ವದಾಗಿರುತ್ತದೆ. ಆಧುನಿಕ ಮಾರುಕಟ್ಟೆಗೆ ಹೈಟೆಕ್ ಕಾರುಗಳ ಪ್ರವೇಶವಾಗುತ್ತಿರುವ ಇದೇ ಸಂದರ್ಭದಲ್ಲಿ ಎಂದಿಗೂ ಮರೆಯಲಾಗದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿರುವ ಇಂತಹ ಹಳೆಯ ಜನಪ್ರಿಯ ಕಾರುಗಳನ್ನು ಇಲ್ಲೊಮ್ಮೆ ನೆನಪಿಸೋಣವೇ...

09. ಹ್ಯುಂಡೈ ಸ್ಯಾಂಟ್ರೊ

09. ಹ್ಯುಂಡೈ ಸ್ಯಾಂಟ್ರೊ

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ಸ್ ಚೊಚ್ಚಲ ಸ್ಯಾಂಟ್ರೊ ಕಾರಿಗೆ ಎದುರಾದ ಸವಾಲು ಅಷ್ಟಿಷ್ಟಲ್ಲ. ಆದರೆ 1998ನೇ ಇಸವಿಯಲ್ಲಿ ದೇಶದ ಮಾರುಕಟ್ಟೆಗೆ ಪ್ರವೇಶಿಸಿದ ಸ್ಯಾಂಟ್ರೊ ಮಾರುತಿ, ಹಿಂದೂಸ್ತಾನ್, ಪ್ರೀಮಿಯಂ, ಟಾಟಾ, ಮಹೀಂದ್ರ ಮುಂತಾದ ಜನಪ್ರಿಯ ಮಾದರಿಗಳ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿತ್ತು. ಬಳಿಕ 2014ರಲ್ಲಿ ಈ ಐಕಾನಿಕ್ ಕಾರಿನ ನಿರ್ಮಾಣ ಸ್ಥಗಿತಗೊಳಿಸಲು ಸಂಸ್ಥೆ ನಿರ್ಧರಿಸಿತ್ತು.

08. ಟಾಟಾ ಸುಮೋ

08. ಟಾಟಾ ಸುಮೋ

ದೇಶದ ಮೊದಲ ಸರ್ವಶ್ರೇಷ್ಠ ಉಪಯುಕ್ತ ವಾಹನವಾಗಿರುವ ಟಾಟಾ ಸುಮೋ ಮೊದಲ ಬಾರಿಗೆ 1994ರಲ್ಲಿ ಬಿಡುಗಡೆಯಾಗಿತ್ತು. ಟಾಟಾ ಸ್ಟೀಲ್ ಉದ್ಯಮದಲ್ಲಿ ಹಲವಾರು ಕ್ರಾಂತಿಗೆ ಕಾರಣವಾಗಿರುವ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಓರ್ವರಾಗಿರುವ ಪದ್ಮ ಭೂಷಣಧಾರಿ ಸುಮಂತ್ ಮೂಲ್ ಗಾಂವ್ಕರ್ (Sumant Moolgaokar (Su-Mo)) ಎಂಬವರ ಸ್ಮರಣಾರ್ಥ ಈ ಹೆಸರನ್ನು ಇಡಲಾಗಿದೆ. ಅಂದ ಹಾಗೆ ಟಾಟಾ ಪಿಕಪ್ ತಳಹದಿಯಲ್ಲಿ ಟಾಟಾ ಸುಮೋ ನಿರ್ಮಾಣಗೊಂಡಿತ್ತು.

 07. ದೇವೂ ಸಿಯೆಲೊ

07. ದೇವೂ ಸಿಯೆಲೊ

ಕೆಲವೇ ಕೆಲವು ವರ್ಷಗಳು ಮಾತ್ರ ದೇಶದ ವಾಹನ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದ್ದರೂ ಸಹ ದೇವೂ ಸಿಯೆಲೊ ದೇಶದಲ್ಲಿ ಮಾಡಿರುವ ಪ್ರಭಾವ ಸ್ವಲ್ಪವೇನಲ್ಲ. 1994ರಿಂದ 1999ನೇ ಇಸವಿಯ ವರೆಗೆ ಮಾರಾಟದಲ್ಲಿದ್ದ ದೇವೂ ಸಿಯೆಲೊ ಕಾರಿನಲ್ಲಿರುವ ಹೆಚ್ಚು ಸ್ಥಳಾವಕಾಶಯುಕ್ತ ಒಳಮೈ, ಢಿಕ್ಕಿ ಜಾಗ ಹಾಗೂ ವಿನ್ಯಾಸವನ್ನು ಖರೀದಿಗಾರರು ಅತಿ ಹೆಚ್ಚು ಇಷ್ಟಪಡುತ್ತಿದ್ದರು.

06. ಕಾಂಟೆಸ್ಸಾ

06. ಕಾಂಟೆಸ್ಸಾ

ದೇಶದ ವಾಹನ ಪ್ರೇಮಿಗಳು ಸದಾ ನೆನೆಪಿಸಿಕೊಳ್ಳುವ ಮಗದೊಂದು ಕಾರು ಹಿಂದೂಸ್ತಾನ್ ಮೋಟಾರ್ಸ್ ಕಾಂಟೆಸ್ಸಾ ಕಾರಾಗಿದೆ. 1979ರ ವರೆಗೆ ನಿರ್ಮಾಣವಾಗಿದ್ದ ಜನರಲ್ ಮೋಟಾರ್ಸ್ ವಾಕ್ಸ್ ಹಾಲ್ ವಿಕ್ಟರ್ ಎಫ್ ಇ ತಳಹದಿಯಲ್ಲಿ ರೂಪುಗೊಂಡಿದ್ದ ಕಾಂಟೆಸ್ಸಾ 1983ರಲ್ಲಿ ಎಂಟ್ರಿ ಕೊಟ್ಟಾಗ ದೇಶದ ಮೊದಲ ಐಷಾರಾಮಿ ಕಾರೆಂಬ ಬಿರುದಿಗೆ ಪಾತ್ರವಾಗಿತ್ತು. ಬಳಿಕ ಈ ಲಗ್ಷುರಿ ಕಾರಿನ ಉತ್ಪಾದನೆಯನ್ನು 2002ರಲ್ಲಿ ನಿಲುಗಡೆಗೊಳಿಸಲಾಗಿತ್ತು.

05. ಮಾರುತಿ ಓಮ್ನಿ

05. ಮಾರುತಿ ಓಮ್ನಿ

ಕಿಡ್ನಾಪಿಂಗ್ ಅಥವಾ ದರೋಡೆಕೋರರ ಕಾರೆಂದೇ ಪ್ರಸಿದ್ಧಿ ಪಡೆದಿದ್ದ ಮಾರುತಿ ಓಮ್ನಿ ಏಕಕಾಲದಲ್ಲಿ ವ್ಯಾಪಾರ ಹಾಗೂ ಒಂದು ಕುಟುಂಬದ ಎಲ್ಲ ಅಗತ್ಯಗಳನ್ನು ಪೂರ್ಣಗೊಳಿಸುತ್ತಿತ್ತು. ಈಗಲೂ ದೇಶದ ಒಂದು ವಿಭಾಗದ ವಾಹನ ಪ್ರೇಮಿಗಳ ಪಾಲಿಗೆ ಓಮ್ನಿ ನೆಚ್ಚಿನ ಕಾರೆನಿಸಿಕೊಂಡಿದೆ.

04. ಮಾರುತಿ 800

04. ಮಾರುತಿ 800

1980 ಹಾಗೂ 90ರ ದಶಕದ ವರೆಗೂ ಡಾಕ್ಟರ್ ಹಾಗೂ ಶಿಕ್ಷಕರ ಕಾರು ಎಂದೇ ಮಾರುತಿ 800 ಮಾದರಿಯನ್ನು ಪರಿಗಣಿಸಲಾಗಿತ್ತು. ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಮಾರುತಿ 800 ದೇಶದ ಸರ್ವಕಾಲಿಕ ಶ್ರೇಷ್ಠ ಸಣ್ಣ ಕಾರಾಗಿದೆ. 1983ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಮಾರುತಿ 800 ಈಗ ಆಲ್ಟೊ ಎಎಂಟಿ ವರ್ಷನ್ ವರೆಗೂ ಬಂದು ತಲುಪಿ ನಿಂತಿದೆ. ಆದರೂ 800 ನಿರ್ಮಾಣವನ್ನು 2013ರಲ್ಲಿ ಅಧಿಕೃತವಾಗಿ ಕೊನೆಗೊಳಿಸಲಾಗಿತ್ತು.

03. ಮಹೀಂದ್ರ ಎಂಎಂ540

03. ಮಹೀಂದ್ರ ಎಂಎಂ540

ಯಾವುದೇ ಗುಡ್ಡ, ಬೆಟ್ಟ, ತಗ್ಗು, ಇಳಿಜಾರು ಪ್ರದೇಶಗಳನ್ನು ಅನಾಯಾಸವಾಗಿ ಗೆದ್ದು ಬರುವ ಮಹೀಂದ್ರ ಎಂಎಂ540 ಜೀಪ್ ಈಗಲೂ ಪಶ್ಛಿಮ ಘಟ್ಟ ನಿವಾಸಿಗಳ ನೆಚ್ಚಿನ ಬಂಡಿಯಾಗಿ ಉಳಿದಿದೆ. 1950ರ ದಶಕದಲ್ಲಿ ಐಕಾನಿಕ್ ಸಿಜೆ5 ಜೀಪ್ ಮಾದರಿಯಿಂದ ಸ್ಪೂರ್ತಿ ಪಡೆದು ಮಹೀಂದ್ರ ಎಂಎಂ540 ನಿರ್ಮಿಸಲಾಗಿತ್ತು.

02. ಪ್ರೀಮಿಯರ್ ಪದ್ಮಿನಿ

02. ಪ್ರೀಮಿಯರ್ ಪದ್ಮಿನಿ

ಹಳೆಯ ಚಲನಚಿತ್ರಗಳಲ್ಲಿ ವಿಲನ್ ನನ್ನು ಬೆನ್ನಟ್ಟಿಕೊಂಡು ಹೋಗುವ ದೃಶ್ಯಗಳನ್ನು ಯಾರು ತಾನೇ ಮರೆಯಲು ಸಾಧ್ಯ?. 1980ರ ದಶಕದಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್ ಸಹ ಇಟಲಿಯ ಈ ಐಕಾನಿಕ್ ಕಾರಿನಲ್ಲಿ ಸಂಚರಿಸುತ್ತಿದ್ದರು. 'ಬದಲಾವಣೆಯೇ ಜಗತ್ತಿನ ನಿಯಮ' ಎಂಬಂತೆ 1964ರಿಂದ ತನ್ನ ಓಟ ಆರಂಭಿಸಿದ್ದ ಪದ್ಮಿನಿ 2000ನೇ ಇಸವಿಯಲ್ಲಿ ಹೊಸಬರಿಗೆ ತನ್ನ ಜಾಗವನ್ನು ಬಿಟ್ಟುಕೊಟ್ಟಿತ್ತು.

01 ಹಿಂದೂಸ್ತಾನ್ ಅಂಬಾಸಿಡರ್

01 ಹಿಂದೂಸ್ತಾನ್ ಅಂಬಾಸಿಡರ್

ನಿಸ್ಸಂಶವಾಗಿಯೂ ಒಂದನೇ ಸ್ಥಾನದಲ್ಲಿ ದೇಶದ ರಸ್ತೆಯ ರಾಜ ಅಂಬಾಸಿಡರ್ ಕಾಣಸಿಗುತ್ತದೆ. ದೇಶದೆಲ್ಲೆಡೆ 'ಅಂಬಿ' ಎಂಬ ಅಕ್ಕರೆಯ ಹೆಸರಿನಿಂದ ಜನಪ್ರಿಯವಾಗಿದ್ದ ಅಂಬಾಸಿಡರ್, ಒಂದು ಕಾಲದಲ್ಲಿ ರಾಜಕಾರಣಿಗಳಿಂದ ಹಿಡಿದು ತಾರಾ ಪ್ರಮುಖರ ನೆಚ್ಚಿನ ಕಾರಾಗಿತ್ತು. ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮಾದರಿಯನ್ನು ಹೋಲುವ ಅಂಬಾಸಿಡರ್ 1958ರ ಇಸವಿಯಿಂದ ಮಾರಾಟ ಆರಂಭಿಸಿತ್ತು.

ದೇಶದ ಜೀವಾಳ; ಎಂದಿಗೂ ಮರೆಯಲಾಗದ 9 ಜನಪ್ರಿಯ ಕಾರುಗಳು

ಮೇಲೆ ತಿಳಿಸಿದ ಈ ಒಂಬತ್ತು ಕಾರುಗಳ ಪೈಕಿ ಯಾವುದಾದರೂ ಒಂದನ್ನು ಚಾಲನೆ ಮಾಡುವ ಭಾಗ್ಯ ನಿಮಗೆ ದೊರಕಿದೆಯೇ? ಈ ಐಕಾನಿಕ್ ಕಾರುಗಳನ್ನು ನೀವಿಗಲೂ ಮಿಸ್ ಮಾಡಿಕೊಳ್ಳುವೀರಾ? ಹಾಗಿದ್ದಲ್ಲಿ ನಿಮ್ಮ ಅಮೂಲ್ಯ ಕಾಮೆಂಟ್ ಗಳೊಂದಿಗೆ ಈ ಲೇಖನವನ್ನು ಇನ್ನಷ್ಟು ಚಂದವಾಗಿಸಿ.

 

English summary
That's why we thought we'd reminisce over 9 cars that had that something we truly miss in today's world

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark