ವರ್ಷದ ಬೈಕ್ ಪ್ರಶಸ್ತಿ ಬಾಚಿದ ಟಿವಿಎಸ್ ಅಪಾಚಿ ಆರ್‌ಟಿ‌ಆರ್ 200 ವಿ4

Written By:

2017 ಭಾರತದ ವರ್ಷದ ಮೋಟಾರುಸೈಕಲ್ ಪ್ರಶಸ್ತಿಯನ್ನು ಟಿವಿಎಸ್ ಮೋಟಾರು ಸಂಸ್ಥೆಯ ಅತಿ ನೂತನ ಅಪಾಚಿ ಆರ್‌ಟಿಆರ್ 200 ವಿ4 ಬೈಕ್ ಬಾಚಿಕೊಂಡಿದೆ. ವಿವಿಧ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಟಿವಿಎಸ್ ಬೈಕನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ರೇಸ್ ನಲ್ಲಿ ಬಜಾಜ್ ವಿ15, ಡಿಎಸ್ ಕೆ ಬೆನೆಲ್ಲಿ ಟಿಎನ್ ಟಿ 25, ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110, ಹೀರೊ ಅಚೀವರ್ 150, ಹೋಂಡಾ ನವಿ, ಹೋಂಡಾ ಸಿಬಿ ಹಾರ್ನೆಟ್ 160ಆರ್, ಕವಾಸಕಿ ವೆರ್ಸೆಸ್ 650 ಎಬಿಎಸ್, ರಾಯಲ್ ಎನ್ ಫೀಲ್ಡ್ ಹಿಮಾಲಯನ್, ಟಿವಿಎಸ್ ವಿಕ್ಟರ್ ಯುಎಂ ರೆನೆಗೇಡ್ ಕಮಾಂಡೊ/ಸ್ಪೋರ್ಟ್ ಎಸ್ ಮತ್ತು ಯಮಹಾ ಸೆಲ್ಯೂಟೊ ಆರ್ ಎಕ್ಸ್ ಬೈಕ್ ಗಳನ್ನು ಹಿಂದಿಕ್ಕಿಕೊಂಡು ಅಪಾಚಿ ಆರ್‌ಟಿಆರ್ 200 ವಿ4 ಅಗ್ರಸ್ಥಾನಕ್ಕೇರಿದೆ.

ಮೋಟಾರುಸೈಕಲ್ ಬೆಲೆ, ಇಂಧನ ಕ್ಷಮತೆ, ವಿನ್ಯಾಸ, ಶೈಲಿ, ಆರಾಮ, ಅನುಕೂಲತೆ, ಸುರಕ್ಷತೆ, ನಿರ್ವಹಣೆ, ಪ್ರಯೋಗಶೀಲತೆ, ತಾಂತ್ರಿಕ ನಾವೀನ್ಯತೆ, ಹಣಕ್ಕೆ ತಕ್ಕ ಮೌಲ್ಯ ಹಾಗೂ ಭಾರತೀಯ ರಸ್ತೆ ಪರಿಸ್ಥಿತಿಗೆ ಎಷ್ಟು ಯೋಗ್ಯ ಎಂಬ ಮಾನದಂಡಗಳ ಆಧಾರದಲ್ಲಿ ಶ್ರೇಷ್ಠ ಬೈಕ್ ಆಯ್ಕೆ ಮಾಡಲಾಗುತ್ತದೆ.

ದೇಶದ ವಾಹನ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ನುರಿತ ವಾಹನ ಪತ್ರಕರ್ತರು ಇವೆಲ್ಲವನ್ನು ಕೂಲಂಕುಷವಾಗಿ ಪರಿಶೋಧನೆ ಮಾಡಿ 2017ನೇ ಸಾಲಿನ ದೇಶದ ಶ್ರೇಷ್ಠ ಬೈಕ್ ಆಯ್ಕೆ ಮಾಡಿದ್ದಾರೆ.

2016ನೇ ವರ್ಷಾರಂಭದಲ್ಲಿ ನೂತನ ಅಪಾಚಿ ಆರ್‌ಟಿ‌ಆರ್ 200 ವಿ4 ಬೈಕ್ ಬಿಡುಗಡೆ ಮಾಡಲಾಗಿತ್ತು. ಇದರ ದೆಹಲಿ ಎಕ್ಸ್ ಶೋರೂಂ ಬೆಲೆ 88,990 ರು.ಗಳಾಗಿವೆ.

2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಡ್ರೇಕನ್ ಎಕ್ಸ್21 ಕಾನ್ಸೆಪ್ಟ್ ಮಾದರಿಯಿಂದ ಸ್ಪೂರ್ತಿ ಪಡೆದು ಅಪಾಚಿ ಆರ್ ಟಿಆರ್ 200 4ವಿ ಬೈಕ್ ನಿರ್ಮಿಸಲಾಗಿದೆ.

ಇದರಲ್ಲಿರುವ 197.75 ಸಿಸಿ ಒಯಿಲ್ ಕೂಲ್ಡ್ ಕಾರ್ಬ್ಯುರೇಟಡ್ ಎಂಜಿನ್ 18.1 ಎನ್ ಎಂ ತಿರುಗುಬಲದಲ್ಲಿ 20.3 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಕೇವಲ 3.95 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಟಿವಿಎಸ್ ಅಪಾಚಿ ಆರ್‌ಟಿ‌ಆರ್ 200 ವಿ4, ಗಂಟೆಗೆ ಗರಿಷ್ಠ 128 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಡಬಲ್ ಕ್ರಾಡಲ್ ವಿಭಜಿತ ಸಿಂಕ್ರೋ ಸ್ಟಿಫ್ ಫ್ರೇಮ್ ತಳಹದಿಯ ಅಪಾಚಿ ಆರ್‌ಟಿ‌ಆರ್ 200 ವಿ4 ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಹಾಗೂ ಹಿಂಭಾಗದಲ್ಲಿ ಮೊನೊ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಹಾಗೆಯೇ ಬ್ರೇಕಿಂಗ್ ಜವಾಬ್ದಾರಿಯನ್ನು ಮುಂದುಗಡೆ 270 ಎಂಎಂ ಡಿಸ್ಕ್ ಮತ್ತು ಹಿಂದುಗಡೆ 240 ಎಂಎಂ ಡಿಸ್ಕ್ ನೋಡಿಕೊಳ್ಳಲಿದೆ.

ನಿಕಟ ಭವಿಷ್ಯದಲ್ಲೇ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಹಾಗೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ವ್ಯವಸ್ಥೆಯೊಂದಿಗಿನ ಅಪಾಚಿ ಆರ್‌ಟಿ‌ಆರ್ 200 ವಿ4 ಬಿಡುಗಡೆ ಮಾಡುವ ಯೋಜನೆಯನ್ನು ಟಿವಿಎಸ್ ಹೊಂದಿದೆ. ಇದು ಈಗಿನ ಮಾದರಿಗಿಂತಲೂ ಮತ್ತಷ್ಟು ದುಬಾರಿಯೆನಿಸಲಿದೆ.

ಕಳೆದರಡು ವರ್ಷಗಳಲ್ಲಿ ಅನುಕ್ರಮವಾಗಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 (2015) ಮತ್ತು ಯಮಹಾ ವೈಝಡ್ ಎಫ್-ಆರ್3 (2016) ಬೈಕ್ ಗಳು ವರ್ಷದ ಬೈಕ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದವು.

ವರ್ಷದ ಬೈಕ್ ಪ್ರಶಸ್ತಿ ಪಟ್ಟಿ ಇಂತಿದೆ

2017 - ಟಿವಿಎಸ್ ಅಪಾಚಿ ಆರ್‌ಟಿ‌ಆರ್ 200 ವಿ4
2016 - ಯಮಹಾ ವೈಝಡ್ ಎಫ್-ಆರ್3
2015 - ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750
2014 - ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ
2013 - ಕೆಟಿಎಂ 200 ಡ್ಯೂಕ್
2012 - ಹೋಂಡಾ ಸಿಬಿಆರ್ 250ಆರ್.

Read more on ಟಿವಿಎಸ್ tvs
English summary
TVS Apache RTR 200 4V Is The Indian Motorcycle Of The Year (IMOTY) 2017
Story first published: Thursday, December 22, 2016, 15:20 [IST]
Please Wait while comments are loading...

Latest Photos