ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಪ್ರಮುಖ 5 ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್‌ಗಳಿವು!

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಹಲವಾರು ಇವಿ ವಾಹನಗಳನ್ನು ಮಾರಾಟಗೊಳಿಸುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ತೀವ್ರ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವಿವಿಧ ಬ್ರಾಂಡ್‌ಗಳ ಹತ್ತಾರು ಇವಿ ಸ್ಕೂಟರ್ ಮಾದರಿಗಳಿಂದಾಗಿ ಗ್ರಾಹಕರ ಆಯ್ಕೆಯು ಸಹ ಹೆಚ್ಚುತ್ತಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹತ್ತಾರು ಬಗೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದ್ದರೂ ಕೆಲವೇ ಕೆಲವು ವಾಹನ ಉತ್ಪಾದನಾ ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಬೆಲೆ, ಅತ್ಯುತ್ತಮ ವಿನ್ಯಾಸ, ಗರಿಷ್ಠ ಮಟ್ಟದ ಮೈಲೇಜ್ ಮತ್ತು ಸಮಯಕ್ಕೆ ಸರಿಯಾದ ಗ್ರಾಹಕರ ಸೇವೆಗಳನ್ನು ಪೂರೈಸುತ್ತಿರುವ ಪ್ರಮುಖ ಆಟೋ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿವೆ. ಹಾಗಾದ್ರೆ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳ ಬಗೆಗೆ ನಾವು ಈ ಲೇಖನದಲ್ಲಿ ಚರ್ಚಿಸೋಣ.

01. ಹೀರೋ ಎಲೆಕ್ಟ್ರಿಕ್
ಹೀರೋ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿ ಸಾಧಿಸುವ ಮೂಲಕ ಅಗ್ರಸ್ಥಾನದಲ್ಲಿದ್ದು, ಗ್ರಾಹಕ ಬೇಡಿಕೆಯೆಂತೆ ಫ್ಲ್ಯಾಶ್, ಆಪ್ಟಿಮಾ, ನೈಕ್ಸ್ ಸೇರಿದಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಹೀರೋ ಎಲೆಕ್ಟ್ರಿಕ್ ನಿರ್ಮಾಣದ ವಿವಿಧ ಮಾದರಿಗಳ ಶ್ರೇಣಿಯು ಉತ್ತಮ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಕಂಪನಿಯು ಇದುವರೆಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಳಿಸಿದೆ. ದೇಶಾದ್ಯಂತ 25 ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಅಧಿಕೃತ ಮಾರಾಟಗಾರರು ಮತ್ತು ಸೇವಾ ಕೇಂದ್ರಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸ್ಕೂಟರ್‌ಗಳ ಬಿಡುಗಡೆಗೊಳಿಸಲು ಸಿದ್ದವಾಗಿದೆ.

02. ಎಥರ್ ಎನರ್ಜಿ
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅತ್ಯುತ್ತಮ ಇವಿ ಸ್ಕೂಟರ್ ಮಾರಾಟ ಮಾಡುತ್ತಿದ್ದು, ಇನ್ ಹೌಸ್ ಬ್ಯಾಟರಿ ಪ್ಯಾಕ್, ಚಾರ್ಸಿಸ್ ಮತ್ತು ಅತ್ಯುತ್ತಮ ಬಿಡಿಭಾಗಗಳೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಎಥರ್ ಎನರ್ಜಿ ಕಂಪನಿಯು ಸದ್ಯ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದೊಂದಿಗೆ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟಚ್‌ಸ್ಕ್ರೀನ್ ಇನ್ಸ್ಟುಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್ ನ್ಯಾವಿಗೇಷನ್, ರಿವರ್ಸ್ ಅಸಿಸ್ಟ್, ಎಲ್ಇಡಿ ಲೈಟಿಂಗ್ಸ್ ಮತ್ತು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ವೇಗವರ್ದಕ ತಂತ್ರಜ್ಞಾನ ಪಡೆದುಕೊಂಡಿದೆ. ಕೆಲವೇ ಸೆಕೆಂಡುಗಳಲ್ಲಿ 0-60 ಕಿ.ಮೀ / ಗಂ ವೇಗವರ್ಧನೆಯು ಎಥರ್ ಸ್ಕೂಟರ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ಕಂಪನಿಯು ಉತ್ತಮ ಮೈಲೇಜ್‌ನೊಂದಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

03. ಒಕಿನಾವ ಸ್ಕೂಟರ್‌ಗಳು
ಒಕಿನಾವ ಕಂಪನಿಯು ಭಾರತೀಯ ಇವಿ ತಯಾರಕ ಕಂಪನಿಯಾಗಿ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಸ್ಕೂಟರ್ ಮಾದರಿಗಳೊಂದಿಗೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.


2015ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಅಧಿಕೃತವಾಗಿ ಕಾಲಿಟ್ಟ ಒಕಿನಾವ ಕಂಪನಿಯು 2016ರಲ್ಲಿ ರಾಜಸ್ತಾನದ ಭಿವಾಡಿಯಲ್ಲಿ ಮೊದಲ ಉತ್ಪಾದನಾ ಘಟಕವನ್ನು ತೆರೆಯಿತು. 2017ರಲ್ಲಿ ಮೊದಲ ಹಂತದಲ್ಲಿ ರಿಡ್ಜ್ ಮತ್ತು ಪ್ರೈಸ್ ಮಾದರಿಗಳ ಮಾರಾಟದೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಹೊಸ ಸ್ಕೂಟರ್‌ಗಳನ್ನು ಮಾರಾಟವನ್ನು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳ ಮಾರಾಟದೊಂದಿಗೆ ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

04. ಬಿಗೌಸ್
ಆರ್‌ಆರ್ ಗ್ಲೋಬಲ್ ಕಂಪನಿಯ ಸಹಸಂಸ್ಥೆಯಾಗಿರುವ ಬಿಗೌಸ್ ಕಂಪನಿಯು ಲೈಫ್‌ಸ್ಟೈಲ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆಯುತ್ತಿದೆ. ಗ್ರಾಹಕರ ಬೇಡಿಕೆಯೆಂತೆ ಬಿಗೌಸ್ ಕಂಪನಿಯು ಎ2 ಮತ್ತು ಬಿ8 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಮತ್ತು ಇಂಟರ್‌ನೆಟ್ ಕನೆಕ್ಟ್ ಮೂಲಕ ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಭರವಸೆ ಮೂಡಿಸಿವೆ.

ಲೀಡ್ ಆಸಿಡ್ ಬ್ಯಾಟರಿ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಆಯ್ಕೆಗಳನ್ನು ಹೊಂದಿರುವ ಬಿಗೌಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎ2 ಸ್ಕೂಟರ್ ಆವೃತ್ತಿಯು ಪ್ರತಿ ಗಂಟೆ 25 ಕಿ.ಮೀ ಟಾಪ್ ಸ್ಪೀಡ್ ಮೂಲಕ ಗರಿಷ್ಠ 75 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದರೆ ಬಿ8 ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯು ಪ್ರತಿ ಗಂಟೆ 50 ಕಿ.ಮೀ ಟಾಪ್ ಸ್ಪೀಡ್ ಮೂಲಕ 70 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಉತ್ತಮ ವಿನ್ಯಾಸದೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

05. ಆಂಪಿಯರ್ ಎಲೆಕ್ಟ್ರಿಕ್

ಭಾರತ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳ ಪಟ್ಟಿಯಲ್ಲಿ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಕೂಡಾ ಮುಂಚೂಣಿಯಲ್ಲಿದ್ದು, ವಿಭಿನ್ನ ಖರೀದಿದಾರರ ಬೇಡಿಕೆಗಳನ್ನು ಗುರಿಯಾಗಿಸಿಕೊಂಡು ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಆಂಪಿಯರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ರಿಯೊ, ರಿಯೊ ಎಲೈಟ್, ವಿ ಸೀರೀಸ್, ಎಂ ಸೀರೀಸ್, ಜೀಲ್ ಇಎಕ್ಸ್ ಮತ್ತು ಮ್ಯಾಗ್ನಸ್ ಪ್ರೊ ಆವೃತ್ತಿಗಳನ್ನು ಮಾರಾಟ ಮಾಡುತ್ತದೆ. ಪ್ರತಿ ಗಂಟೆಗೆ 25 ಕಿ.ಮೀ ದಿಂದ 55 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಆಂಪಿಯರ್ ಇವಿ ಸ್ಕೂಟರ್‌ಗಳು ಬ್ಯಾಟರಿ ರೇಂಜ್‌ಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ ಗರಿಷ್ಠ 65 ಕಿ.ಮೀ ನಿಂದ 90 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸುತ್ತವೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಂಪಿಯೆರ್ ಹೊಸ ಸ್ಕೂಟರ್‌ಗಳು ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದ್ದು, ಗ್ರಾಹಕರು ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯೆತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

Most Read Articles

Kannada
English summary
Top 5 Most Trusted Electric Scooter Brands In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X